ಬೆಂಗಳೂರು: ಕೊರೊನಾ ಎರಡನೇ ಎಲೆ ಶುರುವಾಗಿದ್ದು, ಜನರಲ್ಲಿ ಮತ್ತೆ ಭಯ ಹುಟ್ಟಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಮರಣ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾದ ಪರಿಣಾಮ ಚಿತಾಗಾರದ ಎದುರು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಬೆಡ್ಗಳ ಕೊರತೆ ಉಂಟಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳುತ್ತಿದೆ.
ನಿನ್ನೆ ಒಂದೇ ದಿನ 55 ಮಂದಿ ಕೊರೊನಾಗೆ ಬಲಿಯಾಗಿದ್ದರು. ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಯಲಹಂಕದ ಮೇಡಿ ಅಗ್ರಹಾರದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಸುಮನಹಳ್ಳಿ ಚಿತಾಗಾರದಲ್ಲೂ ಅಂತ್ಯಕ್ರಿಯೆಗೆ ಕಾಯುವ ಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ 10 ದಿನದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಚಿತಾಗಾರಗಳಲ್ಲಿ ನಮಗೆ ಯಾವುದೇ ಸುರಕ್ಷತೆ ಇಲ್ಲ ಎಂದು ಚಿತಾಗಾರದ ಸಿಬ್ಬಂದಿ ರವಿ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ್ದಾರೆ.
ಜನವರಿಯ ಇಡೀ ತಿಂಗಳಿನಲ್ಲಿ 66 ಜನ ಸೋಂಕಿತರು ಸಾವನ್ನಪ್ಪಿದ್ದರು. ಫೆಬ್ರವರಿ ತಿಂಗಳಲ್ಲಿ 88 ಜನ ಮೃತಪಟ್ಟಿದ್ದರು. ಹಾಗೂ ಮಾರ್ಚ್ ಇಡೀ ತಿಂಗಳಿನಲ್ಲಿ 147 ಜನ ಸೋಂಕಿತರು ಬಲಿಯಾಗಿದ್ದರು. ಆದರೆ ಏಪ್ರಿಲ್ ತಿಂಗಳ 13ಕ್ಕೆ ಅಂದ್ರೆ ಕೇವಲ 13 ದಿನದಲ್ಲಿ 280 ಜನ ಸೋಂಕಿತರು ಮೃತಪಟ್ಟಿದ್ದಾರೆ. ತಿಂಗಳಾಂತ್ಯಕ್ಕೆ ಸಾವಿನ ಸಂಖ್ಯೆ ಒಂದು ಸಾವಿರ ಸೋಂಕಿತರು ಬಲಿಯಾಗಬಹುದೆಂದು ಅಂದಾಜಿಸಲಾಗಿದೆ.
ಹೆಚ್ಚಾಗುತ್ತಿದೆ ಬೆಡ್ ಸಮಸ್ಯೆ : ನಗರದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 2,119 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಈ ಪೈಕಿ ಈಗಾಗಲೇ 1,635 ಭರ್ತಿಯಾಗಿದ್ದು, 484 ಮಾತ್ರ ಖಾಲಿ ಇವೆ. ಇವುಗಳಲ್ಲಿ ಬಹುತೇಕ ಸಾಮಾನ್ಯ ಬೆಡ್ಗಳು ಮಾತ್ರ ಖಾಲಿ ಇವೆ. ಐಸಿಯು ಹಾಗೂ ವೆಂಟಿಲೇಟರ್ ಸಹಿತ ಐಸಿಯು ಬೆಡ್ಗಳು ಲಭ್ಯತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ 3,584 ಖಾಸಗಿ ಬೆಡ್ ವ್ಯವಸ್ಥೆ ಮಾಡಿರುವುದಾಗಿ ಹೇಳುತ್ತಿದ್ದರೂ ಕೇವಲ ಕಾಗದಕ್ಕೆ ಸೀಮಿತವಾಗಿದೆ.
ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ಗಳ ಸಮಸ್ಯೆ ತಲೆದೋರಿದೆ. ಸಮಸ್ಯೆಯನ್ನ ಅರಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಆಸ್ಪತ್ರೆಗಳ ಪಕ್ಕದ ಹೋಟೆಲ್ಗಳನ್ನ ಕೊರೊನಾ ಕೇರ್ ಸೆಂಟರ್, ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಹಾಗೂ ಹೋಟೆಲ್ ಅಸೋಸಿಯೇಷನ್ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಈಗಾಗಲೇ ಎರಡು ಹೋಟೆಲ್ಗಳನ್ನ ಕೊರೊನಾ ಕೇರ್ ಸೆಂಟರ್ಗಳಾಗಿ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೋಟೆಲ್ಗಳನ್ನ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 50 ರಿಂದ 100 ಹಾಸಿಗೆ ಸಾಮರ್ಥ್ಯವಿರುವ ಹೋಟೆಲ್ಗಳನ್ನ ಗುರುತಿಸಲಾಗ್ತಿದೆ.
ಪ್ರತಿ ಹೋಟೆಲ್ನಲ್ಲಿ ಖಾಸಗಿ ಆಸ್ಪತ್ರೆಯಿಂದ ಓರ್ವ ನರ್ಸ್ ಹಾಗೂ ವೈದ್ಯರನ್ನ ವ್ಯವಸ್ಥೆ ಮಾಡಲಾಗುತ್ತದೆ. ಆಂಬ್ಯುಲೆನ್ಸ್, ಸೋಂಕಿತರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಇನ್ನೆರಡು ದಿನದಲ್ಲಿ ಇನ್ನಷ್ಟು ಹೋಟೆಲ್ಗಳನ್ನ ಗುರುತಿಸುವುದಾಗಿ ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಇದರ ನಿರ್ವಹಣೆಗಾಗಿ ಖಾಸಗಿ ಆಸ್ಪತ್ರೆ, ಹೋಟೆಲ್ ಅಸೋಸಿಯೇಷನ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಕಮಿಟಿ ಕೂಡ ರಚನೆಯಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ, ಫಾನಾ ಅಧ್ಯಕ್ಷ ಡಾ. ಹೆಚ್.ಎಂ.ಪ್ರಸನ್ನ, ಫಾನಾ ಸದಸ್ಯ ರವೀಂದ್ರ, ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್, ಮಧುಕರ್ ಶೆಟ್ಟಿ ಈ ಸಮಿತಿಯಲ್ಲಿದ್ದಾರೆ. ಆ ಹೋಟೆಲ್ ಕಮ್ ಕೇರ್ ಸೆಂಟರ್ಗಳಲ್ಲಿ ಎಸಿಮ್ಟಮ್ಯಾಟಿಕ್ ಸೋಂಕಿತರಿಗೆ ಆರೈಕೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ.