ಕೊಚ್ಚಿ: ಕೇರಳ ರಾಜ್ಯದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯಬೇಕಿರುವ ಚುನಾವಣೆಯನ್ನು ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವುದರೊಳಗೆ ನಡೆಸಬೇಕೆಂದು ಕೇರಳ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಖಾಲಿ ಇರುವ ಸ್ಥಾನಗಳನ್ನು ತಕ್ಷಣದಲ್ಲೇ ಭರ್ತಿ ಮಾಡಬೇಕು. ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗೊಳ್ಳಬೇಕೆಂದು ಹೈಕೋರ್ಟ್ ಹೇಳಿದೆ.
ಇದನ್ನು ಓದಿ: ‘ಕೇರಳ ರಾಜ್ಯಸಭೆ ಚುನಾವಣೆ ನಡೆಸಿ, ಕಮಿಶನ್ ಸ್ವಾತಂತ್ರ್ಯ ಎತ್ತಿಹಿಡಿಯಿರಿ ’: ಮುಖ್ಯ ಚುನಾವಣಾಧಿಕಾರಿಗೆ ನೀಲೋತ್ಪಲ ಬಸು ಪತ್ರ
ಚುನಾವಣೆಯನ್ನು ಮುಂದೂಡುವುದು ಸಂವಿಧಾನದಲ್ಲಿ ಅಥವಾ ನಿಯಮಗಳಲ್ಲಿ ಉಲ್ಲೇಖಿತ ಪ್ರಮುಖ ಹಾಗೂ ವಿವರಾತ್ಮಕ ಕಾರಣಗಳನ್ನು ಇಲ್ಲದ ಕಾರಣ ಚುನಾವಣೆ ನಡೆಸಬೇಕಿದೆ. ಭಾರತದ ಸಂವಿಧಾನದ 324 ನೇ ವಿಧಿ ಅನ್ವಯ ತನ್ನ ಕರ್ತವ್ಯವನ್ನು ನೈಜವಾಗಿ ಮಾಡಬೇಕಿರುವ ಚುನಾವಣಾ ಆಯೋಗವು ಕೇರಳ ರಾಜ್ಯದಿಂದ ಮೇಲ್ಮನೆಯಲ್ಲಿ ಪ್ರಾತಿನಿಧ್ಯ ಯಾವಾಗಲೂ ಇರುವುದನ್ನು ಖಾತ್ರಿಗೊಳಿಸಬೇಕು.
ಶೀಘ್ರವೇ ಈ ಸ್ಥಾನಗಳನ್ನು ಭರ್ತಿ ಮಾಡುವುದು ನಮ್ಮ ಹೊಣೆ ಎಂದು ಚುನಾವಣಾ ಆಯೋಗವೇ ಒಪ್ಪಿಕೊಂಡಿದೆ. ಇನ್ನಷ್ಟು ವಿಳಂಬವಾಗದಂತೆ ಕ್ರಮವಹಿಸಬೇಕು. ಮೇ 2, 2021ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿ.ಆಶಾ ತಿಳಿಸಿದ್ದಾರೆ.
ಚುನಾವಣೆಯ ವೇಳಾಪಟ್ಟಿಯನ್ನು ನಿಗದಿಪಡಿಸುವುದು ಆಯೋಗದ ಮೇಲಿದೆ ಎಂಬ ಅಂಶವು ಆಯೋಗವು ಯಾವುದೇ ದಿನಾಂಕವನ್ನು ನಿಗದಿಪಡಿಸಬಹುದು ಎಂದು ಅರ್ಥವಲ್ಲ ಎಂದು ನ್ಯಾಯಾಲಯ ಒತ್ತಿಹೇಳಿತು.
ಕೇರಳ ಸರಕಾರ ಮತ್ತು ಆಡಳಿತರೂಢ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷವು ಚುನಾವಣೆ ಪ್ರಕ್ರಿಯೆಯನ್ನು ಯಥಾಸ್ಥಿತಿಯಲ್ಲಿಡುವ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು
ಅಬ್ದುಲ್ ವಹಾಬ್ (ಐಯುಎಂಎಲ್), ಕೆ.ಕೆ.ರಾಗೇಶ್ (ಸಿಪಿಎಂ), ವಯಲಾರ್ ರವಿ (ಕಾಂಗ್ರೆಸ್) ಅವರು ಏಪ್ರಿಲ್ 21ರಂದು ನಿವೃತ್ತರಾಗುತ್ತಿದ್ದು, ತೆರವಾಗುವ ಸ್ಥಾನಗಳಿಗೆ ಚುನಾವಣೆ ಆಗಬೇಕಿದೆ.