ಬೆಂಗಳೂರು: ನಾಳೆ ತಟ್ಟೆ ಲೋಟ ಬಡಿಯುವುದರ ಮೂಲಕ ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಚಳವಳಿ ನಡೆಯುತ್ತೆ. ರಾಜ್ಯಾದ್ಯಂತ ಡಿಸಿ, ತಹಶೀಲ್ದಾರ್ ಕಚೇರಿ ಮುಂದೆ ಚಳವಳಿ ನಡೆಸುತ್ತೇವೆ ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಚಳುವಳಿ ಯಶಸ್ವಿಯಾಗಿ ನಡೆಯಲಿದೆ. ಸಂಬಳ ತಡೆಹಿಡಿದಿರುವುದು ನೌಕರರಿಗೆ ಗೊತ್ತಿದೆ. ಆದರೂ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಅದರಲ್ಲಿ ರಾಜ್ಯ ಮಟ್ಟದ ಸಾರಿಗೆ ಮುಖಂಡರು ಭಾಗಿಯಾಗಲಿದ್ದಾರೆ. ತಟ್ಟೆ ಲೋಟ ಬಡಿಯುವುದರ ಮೂಲಕ ವಿಭಿನ್ನ ಚಳುವಳಿ ನಡೆಸುತ್ತೇವೆ. ನೌಕರರಿಗೆ 6ನೇ ವೇತನ ಘೋಷಣೆ ಮಾಡಲು ಒತ್ತಾಯ ಮಾಡುತ್ತೇವೆ. ಸರ್ಕಾರ ಮುಷ್ಕರ ದಮನ ಮಾಡಲು ಮುಂದಾಗಿದೆ. ಕೆಲ ಸಂಘಟನೆಗಳ ಮೂಲಕ ಕೆಲ ಬಸ್ ಗಳು ಓಡಾಡುತ್ತಿವೆ. ಒಂದೆರಡು ಬಸ್ ಓಡಾಡಬಹುದು.. ಒಂದೆರಡು ನೌಕರರು ಕರ್ತವ್ಯಕ್ಕೆ ಹಾಜರಾಗಿರಬಹುದು ಆದ್ರೆ ಮುಷ್ಕರ ನಿಂತಿಲ್ಲ. ನಾಳೆ ರಾಜ್ಯಾದ್ಯಂತ ಮುಷ್ಕರ, ಪ್ರತಿಭಟನೆ ನಡೆಯುತ್ತೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನಾಳೆ ಪ್ರತಿಭಟನೆ ನಡೆಸುವ ಬಗ್ಗೆ ಮಾತನಾಡಿದ್ದಾರೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಬಿಎಂಟಿಸಿಯಾಗಲಿ ಕೆಎಸ್ಆರ್ಟಿಸಿಯಾಗಲಿ ರಸ್ತೆಗೆ ಇಳಿದಿಲ್ಲ. ಯುಗಾದಿ ಹಬ್ಬ ಸಮೀಪವಿದ್ದಂತೆ ತಮ್ಮ ಊರುಗಳಿಗೆ ತೆರಳಲು ಸಿದ್ಧರಾಗಿದ್ದ ಪ್ರಯಾಣಿಕರು ಬಸ್ ಸೇವೆ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಕಾರ್ಯಗಳಿಗೆ ಹೋಗಲು ಜನ ದುಪ್ಪಟ್ಟು ಹಣ ವ್ಯಯ ಮಾಡುವಂತಾಗಿದೆ. ಇಷ್ಟೆಲ್ಲಾ ಆದರೂ ಸರ್ಕಾರ ಮಾತ್ರ ಅಸ್ತ್ರ ಪ್ರಯೋಗಗಳನ್ನು ಮಾಡುತ್ತ ಒಂದಿಲ್ವೊಂದು ಎಚ್ಚರಿಕೆ ನೀಡುತ್ತ ದಿನ ಕಳೆಯುತ್ತಿದೆ. ನಾಳೆಯಿಂದ ಮುಷ್ಕರದ ತೀವ್ರತೆಯನ್ನು ಮತ್ತಷ್ಟು ಹೆಚ್ಚು ಮಾಡುವ ಪ್ರಯತ್ನದಲ್ಲಿ ಸಾರಿಗೆ ನೌಕರರು ಮತ್ತೊಂದು ಹೆಜ್ಜೆ ಮುಂದಿಟ್ಟು ನಾಳೆ ರಾಜ್ಯಾದ್ಯಂತ ಚಳವಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.