ಕೋವಿಡ್: ಮೈಸೂರು ಜಿಲ್ಲಾಧಿಕಾರಿ ಆದೇಶ ಹಿಂಪಡೆಯಲು ಸರಕಾರದ ಪ್ರಧಾನ ಕಾರ್ಯದರ್ಶಿ ಸುತ್ತೋಲೆ

ಮೈಸೂರು: ಜಿಲ್ಲೆಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೋವಿಡ್‌ ನಿಯಂತ್ರಣದ ಬಗ್ಗೆ ಕೆಲವು ನಿರ್ಬಂಧ ಬಗ್ಗೆ ನೀಡಿರುವ ಆದೇಶದ ಬಗ್ಗೆ ಈಗ ಅಪಸ್ವರ ಎದ್ದಿದೆ. ಜಿಲ್ಲಾಧಿಕಾರಿಗಳ ಆದೇಶದ ನಂತರ ಮುಖ್ಯಮಂತ್ರಿ ಅನುಮೋದನೆ ಹಾಗೂ ಮುಖ್ಯ ಕಾರ್ಯದರ್ಶಿ ಸಹಿ ಇಲ್ಲದೇ ಯಾವುದೇ ಆದೇಶ ಹೊರಡಿಸಬಾರದೆಂದು ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ (ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿ) ಸುತ್ತೋಲೆ ಹೊರಡಿಸಿದ್ದಾರೆ.

‘ಕೆಲ ಜಿಲ್ಲೆಗಳ ಆಡಳಿತವು ಪ್ರತ್ಯೇಕ ಸಲಹೆ/ಸೂಚನೆ ಹೊರಡಿಸುತ್ತಿರುವುದು ಕಂಡುಬಂದಿದೆ. ಇದು ಮುಖ್ಯಮಂತ್ರಿಯವರು ನೀಡಿರುವ ನಿರ್ದೇಶನಕ್ಕೆ ವ್ಯತಿರಿಕ್ತವಾಗಿದೆ’‌ ಎಂದು ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಇಲಾಖಾ ಮುಖ್ಯಸ್ಥರು, ಜಿಲ್ಲಾಡಳಿತಗಳು, ಪ್ರಾಧಿಕಾರಗಳು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೋವಿಡ್-19‌ ಸೋಂಕು ನಿಯಂತ್ರಣಕ್ಕೆ ಸಂಬಂಧಿತ ಯಾವುದೇ ಪ್ರತ್ಯೇಕ ಆದೇಶಗಳನ್ನು ತಮ್ಮ ಹಂತದಲ್ಲಿ ಹೊರಡಿಸತಕ್ಕದ್ದಲ್ಲ. ಈಗಾಗಲೇ ಇಂತಹ ಆದೇಶ / ಸೂಚನೆಗಳನ್ನು ಹೊರಡಿಸಿದ್ದಲ್ಲಿ ತಕ್ಷಣವೇ ಹಿಂಪಡೆಯುವುದು ಮತ್ತು ಯಾವುದೇ ನಿರ್ದಿಷ್ಟ ಪ್ರಸ್ತಾವನೆಗಳಿದ್ದಲ್ಲಿ ಅವುಗಳನ್ನು ಸರಕಾರಕ್ಕೆ ಸಲ್ಲಿಸಿದ್ದಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿಯಿಂದ ನೆನ್ನೆ ಬೆಳಿಗ್ಗೆ ಆದೇಶ ಆದೇಶ: ಮೈಸೂರಿನ ಪ್ರವಾಸಿ ತಾಣಗಳು, ರೆಸಾರ್ಟ್‌ಗಳು, ಸಮಾರಂಭಕ್ಕೆ ನಿಗದಿಯಾದ ಹಾಲ್‌ಗಳು, ಪಾರ್ಟಿ, ಕ್ಲಬ್‌ ಗಳು ಹಾಗೂ ಚಿತ್ರಮಂದಿರ ಪ್ರವೇಶಕ್ಕೆ ಕೋವಿಡ್‌–19 ನೆಗೆಟಿವ್‌ ವರದಿ ತರುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ನೀಡಿದ್ದರು.

‘ಈ ಆದೇಶವು ಏ.10 ರಿಂದ ಏ.20ರವರೆಗೆ ಜಾರಿಯಲ್ಲಿರಲಿದೆ. ಈ ಸ್ಥಳಗಳಿಗೆ ಭೇಟಿ ನೀಡುವ 72 ಗಂಟೆಯೊಳಗೆ ಕೋವಿಡ್‌ ನೆಗೆಟಿವ್‌ ವರದಿ ಪಡೆದಿರಬೇಕು. ಆದರೆ, ಯಾವುದೇ ಪ್ರವಾಸಿ ತಾಣವನ್ನು ಮುಚ್ಚುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೋವಿಡ್‌–19 ನೆಗೆಟಿವ್‌ ವರದಿ ತರುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದರು.

‘ಪ್ರತಿನಿತ್ಯ ಸುಮಾರು ಐದು ಸಾವಿರ ವಾಹನಗಳು ಬೆಂಗಳೂರಿನಿಂದ ಬರುತ್ತಿವೆ. ಸಾಲುಸಾಲು ರಜೆಗಳು ಇರುವುದರಿಂದ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಮೈಸೂರು ನಗರದಲ್ಲಿ ಕೋವಿಡ್‌ ಪ್ರಮಾಣ ಹೆಚ್ಚುಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಆ ಪ್ರಮಾಣ ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬಂದವರು ಗ್ರಾಮಾಂತರ ಪ್ರದೇಶಕ್ಕೆ ಹೋಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ತಂದರೆ ಸೂಕ್ತವಾಗುತ್ತದೆ. ಈ ಸಲಹೆ ಪಾಲಿಸಿ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು.’ ಎಂದಿದ್ದರು.

ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌–19 ನೆಗೆಟಿವ್‌ ವರದಿ ತರುವ ಸಲಹೆ ನೀಡಲಾಗಿದೆ. ಇದಕ್ಕಾಗಿ ತಡೆದು ಪರಿಶೀಲಿಸುವುದಾಗಲಿ, ವರದಿ ಇಲ್ಲದಿದ್ದರೆ ವಾಪಸ್‌ ಕಳುಹಿಸುವುದಾಗಲಿ ಮಾಡುವುದಿಲ್ಲ’ ಎಂದೂ ಮೈಸೂರು ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಸ್ಪಷ್ಟಪಡಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *