ಬೆಂಗಳೂರು : ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಪ್ರಯಾಣಿಕರಿಗೆ ಬೋಂಡಾ ಬಜ್ಜಿ ಮಾರಾಟ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ವಿಭಿನ್ನರೀತಿಯಲ್ಲಿ ಒಂದು ವಾರಗಳ ಕಾಲ ಧರಣಿ ನಡೆಸುತ್ತಿದ್ದಾರೆ. ಮೊದಲ ದಿನದಂದು ನೌಕರರು ಸರ್ಕಾರದ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು.
ಎರಡನೆಯ ದಿನವಾದ ಇಂದು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಾರಿಗೆ ನೌಕರರು ಪ್ರಯಾಣಿಕರಿಗೆ ಬೋಂಡಾ, ಬಜ್ಜಿ ಮಾರಾಟ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಇದನ್ನು ಓದಿ : ಬೇಡಿಕೆ ಈಡೇರಿಕೆಗಾಗಿ ವಾರಪೂರ್ತಿ ಸಾರಿಗೆ ನೌಕರರ ವಿನೂತನ ಪ್ರತಿಭಟನೆ
ಇದರ ಭಾಗವಾಗಿ ಮಂಡ್ಯದಲ್ಲಿ ನಡೆದ ಪ್ರತಿಭಟನೆ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮುಖ್ಯ ಜಂಟಿ ಕಾರ್ಯದರ್ಶಿ ಆನಂದ್ ಮಾತನಾಡಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಮತ್ತು ನಿರ್ವಾಹಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದುವರೆಗೂ 9 ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅದರ ಜೊತೆಗೆ ಇನ್ನೂ ಹಲವು ಬೇಡಿಕೆಗಳ ಈಡೇರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು.
ಮುಂದುವರೆದು ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಕೂಡಲೇ ಉದ್ಯೋಗ ಭತ್ಯೆ , ಕೊರೋನಾ ವೈರಸ್ ನಿಂದ ಮೃತಪಟ್ಟ ಚಾಲಕ ಮತ್ತು ನಿರ್ವಾಹಕರಿಗೆ 30 ಲಕ್ಷ ರೂಪಾಯಿ ಪರಿಹಾರ, ಮಾನವ ಸಂಪನ್ಮೂಲ ಕ್ರೂಢೀಕರಣ , ನಿಗಮದಿಂದ ನಿಗಮಕ್ಕೆ ವರ್ಗಾವಣೆ, 6ನೇ ವೇತನ ಜಾರಿ, ಆರೋಗ್ಯ ವಿಮೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.