ಮೂರೂ ಕ್ಷೇತ್ರಗಳಲ್ಲಿ ಫಲಿತಾಂಶದ ಮೇಲೆ ಜಾತಿ ರಾಜಕಾರಣ, ಸಿ.ಡಿ. ಪ್ರಕರಣ ಪ್ರಭಾವ ಬೀರುವ ಸಾಧ್ಯತೆಗಳಿವೆ.
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಣ ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಇದು ಮತ್ತೂಂದು ಅಗ್ನಿಪರೀಕ್ಷೆಯಾದರೆ ಜೆಡಿಎಸ್‌ಗೆ ಅಸ್ತಿತ್ವ ಸಾಬೀತುಪಡಿಸುವ ಸವಾಲಿನ ಪ್ರಶ್ನೆಯಾಗಿದೆ. ಆ ಕ್ಷೇತ್ರಗಳನ್ನು ಗೆಲ್ಲಲು ಮೂರು ಪಕ್ಷಗಳು ಕಸರತ್ತನ್ನು ನಡೆಸಿವೆ.
ಉಪ ಚುನಾವಣೆ ಫಲಿತಾಂಶದಿಂದ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗದು. ಆದರೆ ಸಿ.ಡಿ. ಪ್ರಕರಣ ಎಬ್ಬಿಸಿರುವ ರಾಡಿಯ ಹಿನ್ನೆಲೆಯಲ್ಲಿ ಮತದಾರನ ನಾಡಿ ಮಿಡಿತ ಯಾರ ಕಡೆ ವಾಲಬಹುದು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮೂರೂ ಕ್ಷೇತ್ರಗಳಲ್ಲಿ ಫಲಿತಾಂಶದ ಮೇಲೆ ಜಾತಿ ರಾಜಕಾರಣ, ಸಿ.ಡಿ. ಪ್ರಕರಣ ಪ್ರಭಾವ ಬೀರುವ ಸಾಧ್ಯತೆಗಳಿವೆ. ಜತೆಗೆ ಪಕ್ಷ ಮತ್ತು ವೈಯಕ್ತಿಕ ವರ್ಚಸ್ಸು ಪರಿಣಾಮ ಬೀರಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ದಂಡು ಮೂರೂ ಕ್ಷೇತ್ರಗಳಿಗೆ ಈಗಾಗಲೆ ಲಗ್ಗೆ ಇರಿಸಿದೆ. ಕೆಲ ನಾಯಕರು ಅಲ್ಲಿಯೇ ಟೆಂಟ್ ಹಾಕಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರ ಹೈ ವೋಲ್ಟೇಜ್‌ನದ್ದಾಗಿದೆ. ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಹೆಸರು ಘೋಷಣೆಯಾಗಿ ಚಿತ್ರಣವೇ ಬದಲಾಗಿದೆ. ಅವರು ಸೋಮುವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತ್ಯಸ್ತ್ರವಾಗಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಅನುಕಂಪದ ಅಲೆಗೆ ಶರಣಾಗಿದೆ. ಇಲ್ಲಿ ಜಾರಕಿಹೊಳಿ ಕುಟುಂಬದ ಎಲ್ಲರೂ ಒಟ್ಟಾಗಿ ಸತೀಶ್ ಪರ ಪ್ರಚಾರಕ್ಕೆ ಇಳಿಯಬಹುದಾ ಎಂಬ ಪ್ರಶ್ನೆಗಳಿವೆ. ಇವರೆಲ್ಲ ಒಗ್ಗಾಟ್ಟಾಗಿ ಚುನಾವಣೆ ಎದುರಿಸಿದರೆ ಫಲಿತಾಂಶದ ಚಿತ್ರಣವೇ ಬೇರೆ ಆಗಲಿದೆ. ಆದರೆ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ಬೆಳಗಾವಿ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. ಇದು ಸತೀಶ್ ರವರಿಗೆ ಸ್ವಲ್ಪ ಮಟ್ಟಿನ ಹಿನಡೆಯಾಗುವ ಸಾಧ್ಯತೆತುಯೂ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸಹೋದರ ಬಾಲಚಂದ್ರ ಅವರ ಅರಭಾವಿ, ರಮೇಶ್ ಅವರ ಗೋಕಾಕ್ ಬರಲಿದೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬರಲಿವೆ ಹೀಗಾಗಿ ಸಹೋದರರ ತೀರ್ಮಾನ ಕುತೂಹಲ ಮೂಡಿಸಿದೆ. ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗಿದ್ದು ಜಗದೀಶ್ ಶೆಟ್ಟರ ಅವರು ತಮ್ಮ ಸೊಸೆಗೆ ಟಿಕೇಟ್ ನೀಡುವಂತೆ ಹೂಕಮಾಂಡ್ ವರೆಗೆ ಪ್ರಯತ್ನ ನಡೆಸಿದ್ದರು. ಸಚಿವ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡುವಂತೆ ತೆರೆಮರೆ ಪ್ರಯತ್ನ ನಡೆಸಿದ್ದರು. ಆದರೆ ವರಿಷ್ಠರು ಅಳೆದು ತೂಗಿ ಅಂತಿಮವಾಗಿ ದಿ. ಸುರೇಶ್ ಅಂಗಡಿಯವರ ಹೆಂಡತಿ ಮಂಗಳಾರವರಿಗೆ ಬಿಜಿಪಿ ಟಿಕೆಟ್ ನೀಡಿದೆ.
ಇದನ್ನೂ ಓದಿ : ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್ ಯುಡಿಎಫ್ ನಡುವೆ ನಡೆದಿದೆ ನೇರ ಹಣಾಹಣಿ
ಇನ್ನೂ ಬಸವ ಕಲ್ಯಾಣದಲ್ಲಿ ಚುನಾವಣಾಕಾವು ಜೋರಾಗಿದೆ. ಜೆಡಿಎಸ್ ಅಲ್ಪಸಂಖ್ಯಾತಸಮುದಾಯದ ಅಭ್ಯರ್ಥಿ ಕಣಕ್ಕೆ ಇಳಿಸಿರುವುದರಿಂದ ಯಾರಿಗೆ ನಷ್ಟ ಎಂಬ ಚರ್ಚೆ ಆರಂಭವಾಗಿವೆ. ಕಾಂಗ್ರೆಸ್ ಅನುಕಂಪದ ಅಲೆ ನಂಬಿ ನಾರಾಯಣ್ ರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಬಸವರಾಜ್ ಸಲಗರ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಜೆಡಿಎಸ್ ಸೈಯದ್ ಹೆಸ್ರಲ್ ಅಲಿ ಖಾದ್ರಿ ಅವರನ್ನು ಕಣಕ್ಕಿಳಿಸಿದೆ. ಮಲ್ಲಮ್ಮ ರವರನ್ನು ಗೆಲ್ಲಿಸಲು ಕಾಂಗ್ರೆಸ್ ನ ರಾಜ್ಯದ ನಾಯಕರ ದಂಡು ಸತತ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಜೆಡಿಎಸ್ ಗೆ ಇಲ್ಲಿ ನೆಲೆ ಇರುವ ಪ್ರದೇಶವಾಗಿದೆ. ಬಂಡೆಪ್ಪ ಕಾಶಂಪುರ್ ಮತ್ತು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಚುನಾವಣಾ ಅಖಾಡಕ್ಕೆ ಧುಮಿಕಿದೆ. ಇಲ್ಲಿಯೂ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದು ಕಾಣುತ್ತಿದೆ. ಟಿಕೇಟ್ ಹಂಚಿಕೆಯಲ್ಲಿ ಡೀಲ್ ಆಗಿದೆ, ಸ್ಥಳೀಯರನ್ನು ಬಿಟ್ಟು ಹೊರಗಿನವರಿಗೆ ಟಿಕೇಟ್ ನೀಡುರುವುದರಿಂದ ಟಿಕೆಟ್ ಹಣಕ್ಕೆ ಮಾರಾಟ ಆಗಿದೆ ಎಂದು ಟಿಕೇಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ ಬಹಿರಂಗ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ನಾವು ಹೊರಗಿನವಿರಿಗೆ ಮತಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಲಾಭವನ್ನು ಪಡೆಯಲು ಕಾಂಗ್ರೆಸ್, ಜೆಡಿಎಸ್ ಪ್ರಯತ್ನಿಸುತ್ತಿವೆ.
ಇದನ್ನೂ ಓದಿ : ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ
ಮಸ್ಕಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅದಲು ಬದಲಾಗಿದ್ದು, ಪಕ್ಷವೂ ಬದಲಾಗಿದೆ. ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪ ಗೌಡ ಪಾಟೀಲ್ ಬಿಜೆಪಿಯಿಂದ ಟಿಕೆಟ್ ಪಡೆದಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಸವನಗೌಡ ತುರವಿಹಾಳ್ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಈ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್, ಬಿಜೆಪಿಯಲ್ಲಿದ್ದ ತುರವಿಹಾಳ್ ಅವರನ್ನು ಕರೆತಂದಿದ್ದರೆ ಆಪರೇಷನ್ ಕಮಲ ಮೂಲಕ ಬಂದಿರುವ ಪ್ರತಾಪಗೌಡ ಪಾಟೀಲ್ ಅವರನ್ನು ಗೆಲ್ಲಿಸಲು ಬಿಜೆಪಿ ಪಣ ತೊಟ್ಟಿದೆ. ಏಪ್ರಿಲ್ 17 ರಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.