ದೆಹಲಿ : ಅಗತ್ಯ ಸರಕುಗಳು(ತಿದ್ದುಪಡಿ) ಕಾಯ್ದೆ, 2020ನ್ನು ಜಾರಿಗೆ ತರಬೇಕೆಂದು ಆಹಾರ, ಬಳಕೆದಾರ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲಿನ ಸಂಸತ್ತಿನ ಸ್ಥಾಯೀ ಸಮಿತಿ ಶಿಫಾರಸು ಮಾಡಿರುವುದನ್ನು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಖಂಡಿಸಿದೆ. ತೃಣಮೂಲ ಕಾಂಗ್ರೆಸಿನ ಸದಸ್ಯ ಸುದೀಪ್ ಬಂದೋಪಾಧ್ಯಾಯ ಈ ಸಮಿತಿಯ ಮುಖ್ಯಸ್ಥರು. ಇದು ನಮ್ಮ ದೇಶದ ರೈತರು ಮತ್ತು ಜನಸಮೂಹಗಳಿಗೆ ಅಕ್ಷರಶಃ ವಿರುದ್ಧವಾಗಿರುವ ಶಿಫಾರಸು ಮತ್ತು ರೈತರಿಗೆ ಹಾಗೂ ಐಕ್ಯ ರೈತ ಹೋರಾಟದ ಸುಮಾರು 300 ಹುತಾತ್ಮರಿಗೆ ಮಾಡಿರುವ ಅವಮಾನ ಎಂದು ಎಐಕೆಎಸ್ ಹೇಳಿದೆ.
ತಾನು ಮೂರು ರೈತ-ವಿರೋಧಿ ಕಾಯ್ದೆಗಳನ್ನು ವಿರೋಧಿಸುವುದಾಗಿ ಟಿಎಂಸಿ ಹೇಳಿಕೊಳ್ಳುತ್ತಿದೆ. ಅಲ್ಲದೆ ಪಶ್ಚಿಮ ಬಂಗಾಲ ವಿಧಾನಸಭೆ ಈ ಕುರಿತು ಒಂದು ನಿರ್ಣಯವನ್ನೂ ಅಂಗೀಕರಿಸಿದೆ. ಹೀಗಿರುವಾಗ ರೈತರಿಗೆ ವಿಶ್ವಾಸಘಾತ ಮಾಡುವ ಈ ಶಿಫಾರಸನ್ನು ಅವರ ಮುಖಂಡರ ನೇತೃತ್ವದಲ್ಲಿರುವ ಸ್ಥಾಯೀ ಸಮಿತಿ ಶಿಫಾರಸು ಮಾಡಿದ್ದೇಕೆ ಎಂದು ಟಿಎಂಸಿ ವಿವರಣೆ ನೀಡಬೇಕಾಗಿದೆ. ಮಾರ್ಚ್ 18ರಂದು ನಡೆದ ಸಭೆಯಲ್ಲಿ ಕೆಲವು ‘ಅನಿವಾರ್ಯ ಕಾರಣ’ಗಳಿಂದಾಗಿ ಬಂದೋಪಾಧ್ಯಾಯ ಅವರು ಭಾಗವಹಿಸಲಾಗಲಿಲ್ಲ, ಈ ವರದಿಯನ್ನು ಬಿಜೆಪಿ ಸಂಸತ್ ಸದಸ್ಯ ಅಜಯ್ ಮಿಶ್ರ ತೇಣಿಯವರ ತಾತ್ಕಾಲಿಕ ಅಧ್ಯಕ್ಷತೆಯಲ್ಲಿ ಅಂಗೀಕರಿಸಲಾಯಿತು ಎಂದು ಹೇಳಿ ಅದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಸಮಿತಿಯಲ್ಲಿರುವ ಇತರ ಪಕ್ಷಗಳೂ ತಮ್ಮ ಸದಸ್ಯರು ಇಂತಹ ಒಂದು ಶಿಫಾರಸು ಮಾಡಲು ಹೇಗೆ ಬಿಟ್ಟವು ಎಂಬುದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ಎಐಕೆಎಸ್ ಹೇಳಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸ್ಥಾಯೀ ಸಮಿತಿ ವರದಿ “ಇದು ಹೆಚ್ಚಿನ ಹೂಡಿಕೆಗಳು…, ಕೃಷಿ ಮಾರಾಟದಲ್ಲಿ ನ್ಯಾಯಯುತ ಮತ್ತು ಉತ್ಪಾದಕ ಸ್ಪರ್ಧೆಯ ಒಂದು ವಾತಾವರಣವನ್ನು ನಿರ್ಮಿಸಿ ಕೃಷಿ ವಲಯದಲ್ಲಿ ವಿಶಾಲವಾದ ಇನ್ನೂ ಬಳಸಿರದ ಸಂಪನ್ಮೂಲಗಳನ್ನು ತೆರೆದಿಡಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ವೇಗವರ್ಧಕವಾಗಿ” ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದೆ. ಇದು ಸಂಪೂರ್ಣ ತಪ್ಪು ಮತ್ತು ವಾಸ್ತವತೆಯಿಂದ ಬಹಳ ದೂರವಿರುವ ಸಂಗತಿ. ರೈತ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಈ ಸಂಗತಿಯತ್ತ ಈಗಾಗಲೇ ಗಮನ ಸೆಳೆದಿವೆ. ಇದು ಕಾರ್ಪೊರೇಟ್ ಕಳ್ಳದಾಸ್ತಾನು ಮತ್ತು ಕಾಳಸಂತೆಗೆ ಅವಕಾಶ ಕೊಡುತ್ತದಷ್ಟೇ, ಈ ಮೂಲಕ ಜನಸಾಮಾನ್ಯರ ಮಟ್ಟಿಗೆ ಕೃತಕ ಅಭಾವಗಳು ಮತ್ತು ಬೆಲೆಯೇರಿಕೆ ತರುತ್ತದೆ, ರೈತರಿಗೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದಿರುವ ಎಐಕೆಎಸ್, ಅಂತಿಮವಾಗಿ ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೇ ನಿರ್ಮೂಲಗೊಳಿಸುತ್ತದೆ ಎಂದು ಎಚ್ಚರಿಸಿದೆ.
ಇದನ್ನು ಓದಿ : ಮಹಿಳೆಯರನ್ನೂ ರೈತ ಹಾಗೂ ಕೃಷಿ ಕೂಲಿಕಾರ ಎಂದು ಪರಿಗಣಿಸಿ
ಈ ಶಿಫಾರಸನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತ ಎಐಕೆಎಸ್, ಈ ಮೂರು ರೈತ-ವಿರೋಧಿ ಕಾಯ್ದೆಗಳನ್ನು ವಿರೋಧಿಸುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಲೇ ಇಂತಹ ಒಂದು ಶಿಫಾರಸಿನಲ್ಲಿ ಭಾಗಿಯಾಗಿರುವ ಪಕ್ಷಗಳ ಬೂಟಾಟಿಕೆಯನ್ನು ಬಯಲಿಗೆಳೆಯಬೇಕು ಎಂದು ಕರೆ ನೀಡಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಈ ರೈತ-ವಿರೋಧಿ ಹಾಗೂ ಕಾರ್ಪೊರೇಟ್ -ಪರ ಲಾಬ್ಬಿಗೆ ನೆರವಾಗುವ ಉದ್ದೇಶವುಳ್ಳ, ಸ್ಥಾಯೀ ಸಮಿತಿಯ ಈ ಶಿಫಾರಸಿನ ವಿರುದ್ಧ ಪ್ರತಿಭಟಿಸಿ ಎದ್ದು ನಿಲ್ಲಬೇಕು ಎಂದು ರೈತಾಪಿಗಳಿಗೆ ಮತ್ತು ಜನಸಮೂಹಗಳಿಗೆ ಅಖಿಲ ಭಾರತ ಕಿಸಾನ್ ಸಭಾ ಕರೆ ನೀಡಿದೆ.