ನವದೆಹಲಿ : ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣದ ಎರಡನೇ ಅಲೆ ಉಲ್ಬಣಗೊಳ್ಳುತ್ತಿದೆ. ಇಂದು ನಡೆದ ಕೇಂದ್ರ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡಯಲು ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಲಸಿಕಾ ಕೇಂದ್ರಗಳನ್ನು ಹೆಚ್ಚಳ ಮಾಡುವುದರ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು ಎಂದರು. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆಯನ್ನು ನೀಡಲಾಗುವುದು. ಕೂಡಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಲಸಿಕೆಯನ್ನು ಪಡೆಯಬೇಕೆಂದು ಕರೆ ನೀಡಿದರು.
ಇದುವರೆಗೆ 60 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ 45 ರಿಂದ 60 ವರ್ಷದ ಜನರಿಗೆ ಕೆಲವು ನಿರ್ದಿಷ್ಟ ಖಾಯಿಲೆ ಇರುವವರಿಗೆ ಮಾತ್ರ ಕೋವಿಡ್-19 ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದರು. ಲಸಿಕೆಯನ್ನು ಪಡೆಯಲು ಆನ್ಲೈನ್ ಅಥವಾ ಲಸಿಕಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.
ವ್ಯಾಕ್ಸಿನೇಷನ್ ಅಂಕಿಅಂಶಗಳ ಪ್ರಕಾರ ಇದುವರೆಗೆ ಒಟ್ಟು 5 ಕೋಟಿ ಜನರಿಗೆ ನೀಡಲಾಗಿದೆ. ವಿಶೇಷವೆಂದರೆ, ಸೋಮವಾರ ಒಂದೇ ದಿನ ದೇಶದಲ್ಲಿ ದಾಖಲೆಯ 32 ಲಕ್ಷ (32,53,095) ಲಸಿಕೆಗಳನ್ನು ನೀಡಲಾಯಿತು ಎಂದು ಹೇಳಿದರು.
ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್, ಛತ್ತೀಸ್ಘಡ, ಮತ್ತು ತಮಿಳುನಾಡಿನ ಒಟ್ಟು ಆರು ರಾಜ್ಯಗಳಲ್ಲಿ ದಿನನಿತ್ಯ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ.
ಆರೋಗ್ಯ ಸಚಿವಾಲಯವು ಇಂದು ಮಹಾರಾಷ್ಟ್ರದಲ್ಲಿ 24,645 ಪ್ರಕರಣಗಳು ವರದಿಯಾಗಿವೆ. ಇದು ದೇಶದಲ್ಲಿ ಹೊಸ ಪ್ರಕರಣಗಳಲ್ಲಿ (60.53%) ಅತಿ ಹೆಚ್ಚು ಕಂಡು ಬಂದ ವರದಿಯಾಗಿವೆ. ಇದರ ನಂತರ ಪಂಜಾಬ್ನಲ್ಲಿ 2,299, ಗುಜರಾತ್ನಲ್ಲಿ 1,640 ಹೊಸ ಪ್ರಕರಣಗಳು ದಾಖಲಾಗಿವೆ.