ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಹಿರಿಯ ನಾಯಕ ಪಿ.ಸಿ. ಚಾಕೋ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಯ ಬಗ್ಗೆ ಆರೋಪಿಸಿರುವ ಪಿ.ಸಿ. ಚಾಕೋ, ಪಕ್ಷದೊಳಗೆ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ ಎಂದು ದೂರಿ ರಾಜಿನಾಮೆ ಸಲ್ಲಿಸಿದ್ದಾರೆ.
ಪಿ.ಸಿ. ಚಾಕೋ ದಿಢೀರ್ ರಾಜೀನಾಮೆಯಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ದೊಡ್ಡ ಆಘಾತ ಎದುರಾಗಿದೆ. ಇಂದು ಮಧ್ಯಾಹ್ನ (ಬುಧವಾರ) ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಪಿ.ಸಿ. ಚಾಕೋ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ. 74 ವರ್ಷದ ಪಿ.ಸಿ. ಚಾಕೋ ಕಾಂಗ್ರೆಸ್ನ ಹಿರಿಯ ಹಾಗೂ ಅನುಭವಿ ರಾಜಕಾರಣಿಗಳಲ್ಲಿ ಓರ್ವರಾಗಿದ್ದರು. ಕೇರಳದ ತ್ರಿಶೂರ್ನ ಮಾಜಿ ಸಂಸದರೂ ಆಗಿದ್ದಾರೆ. ಕೇರಳದಲ್ಲಿ ವಾಡಿಕೆಯಂತೆ ಒಂದು ಬಾರಿ ಎಲ್.ಡಿ.ಎಫ್ ಮತ್ತೊಂದು ಬಾರಿ ಯುಡಿಎಫ್ ಅಧಿಕಾರಕ್ಕೆ ಬರುತ್ತದೆ. ಅನೇಕ ಸಮೀಕ್ಷೆಗಳು ಈ ಬಾರಿ ಯುಡಿಎಫ್ ಗೆಲ್ಲುವುದಿಲ್ಲ ಆ ಮೂಲಕ ಈ ವಾಡಿಕೆಗೆ ಬ್ರೆಕ್ ಬೀಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಕನಸು ಕಾಣುತ್ತಿದ್ದ ಯುಡಿಎಫ್ ಗೆ ಈಗ ಚಾಕೋ ರಾಜಿನಾಮೆ ನೀಡಿದ್ದಾರೆ.
ಇದನ್ನೂ ಓದಿ : ಕೇರಳ ಸ್ಥಳೀಯ ಚುನಾವಣೆ : ಎಡರಂಗ ಮುನ್ನಡೆ, ಕಮಲಕ್ಕೆ ಹಿನ್ನಡೆ
ರಾಜಿನಾಮೆ ಗೆ ಚಾಕೋ ನಿರ್ಧಿಷ್ಟ ಕಾರಣಗಳನ್ನು ನೀಡಿದ್ದು, ಕಾಂಗ್ರೆಸ್ನಲ್ಲಿ ಎರಡು ಬಣಗಳ ನಡುವೆ (ಕಾಂಗ್ರೆಸ್ ‘ಐ’ ಹಾಗೂ ಕಾಂಗ್ರೆಸ್ ‘ಎ’) ಗುಂಪುಗಾರಿಕೆಯಿದ್ದು, ಪಕ್ಷದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ . ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡುವಾಗ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಚರ್ಚೆ ಮಾಡಿಲ್ಲ. ಗೆಲುವಿನ ಸಾಧ್ಯತೆಯಿರುವ ಅಭ್ಯರ್ಥಿಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ದೂರಿದರು
ಕಾಂಗ್ರೆಸ್ಗೆ ಶ್ರೇಷ್ಠ ಪರಂಪರೆಯಿದೆ. ಕಾಂಗ್ರೆಸ್ಸಿಗನಾಗುವುದು ಪ್ರತಿಷ್ಠೆಯ ವಿಚಾರ. ಆದರೆ ಕೇರಳದಲ್ಲಿ ನಿಜವಾದ ಕಾಂಗ್ರೆಸ್ಸಿಗನಾಗಿ ಇರುವುದು ಬಹಳ ಕಷ್ಟ. ಕೇರಳದಲ್ಲಿ ನೀವು ಕಾಂಗ್ರೆಸ್ನ ನಿರ್ದಿಷ್ಟ ಬಣಕ್ಕೆ ಮಾತ್ರ ಸೇರಿದವರಾದರೆ ಉಳಿಗಾಲವಿದೆ. ಕಾಂಗ್ರೆಸ್ ನಾಯಕತ್ವವು ಸಕ್ರಿಯವಾಗಿಲ್ಲ. ಹೈಕಮಾಂಡ್ ಮೂಕಸಾಕ್ಷಿಯಾಗಿದೆ. ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲ ಎಂದು ಹೇಳಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕಳೆದ ಹಲವು ದಿನಗಳಿಂದ ರಾಜೀನಾಮೆ ಕುರಿತು ಚಿಂತಿಸುತ್ತಿದ್ದೇನೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿಲ್ಲ. ಕಾಂಗ್ರೆಸ್ (ಐ) ಹಾಗೂ ಕಾಂಗ್ರೆಸ್ (ಎ) ಎಂಬ ಎರಡು ಬಣಗಳಿವೆ. ಈ ಎರಡು ಪಕ್ಷಗಳ ಸಮನ್ವಯ ಸಮಿತಿಯು ಕೆಪಿಸಿಸಿ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕೇರಳವು ನಿರ್ಣಾಯಕ ಚುನಾವಣೆಯನ್ನು ಎದುರಿಸುತ್ತಿದೆ. ಜನರು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಬೇಕೆಂದು ಆಗ್ರಹಿಸುತ್ತಾರೆ. ಆದರೆ ಕಾಂಗ್ರೆಸ್ನ ಹಿರಿಯ ನಾಯಕರು ಗುಂಪುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಕೊನೆಗೊಳಿಸಬೇಕೆಂದು ಹೈಕಮಾಂಡ್ ಜೊತೆ ವಾದ ಮಾಡುತ್ತಲೇ ಬಂದಿದ್ದೇನೆ. ಆದರೆ ಹೈಕಮಾಂಡ್ ಸಹ ಎರಡು ಬಣಗಳು ನೀಡಿರುವ ಪ್ರಸ್ತಾಪಗಳನ್ನು ಒಪ್ಪಿಕೊಂಡಿವೆ ಎಂದು ಆರೋಪಿಸಿದರು.