ಬೆಂಗಳೂರು : ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ, ಉದ್ಯೋಗ ಭದ್ರತೆಗಾಗಿ, ಬೆಲೆ ಏರಿಕೆ ತಡೆಗಟ್ಟಿ, ರಾಜ್ಯದ ಜಿಎಸ್‌ಟಿ ಪಾಲು ಪರಿಹಾರಕ್ಕಾಗಿ, ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿ ಇಂದು ಸಿಐಟಿಯು ವತಿಯಿಂದ ಬೃಹತ್ ಕಾರ್ಮಿಕರ ಕೋಟಿ ಹೆಜ್ಜೆ ಮೂಲಕ ಬಜೆಟ್ ಅಧಿವೇಶನ ಚಲೋ ನಡೆಸಿದರು.
ಮೆಜಿಸ್ಟಿಕ್‌ನ ರೈಲ್ವೆ ನಿಲ್ದಾಣ ದಿಂದ ಆರಂಭಗೊಂಡ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡಿತು. ಈ ಬೃಹತ್ ರ‍್ಯಾಲಿಯಲ್ಲಿ ಮೂವತ್ತೈದು ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಭಾಗವಹಿಸಿದ್ದು, ರಾಜ್ಯ ದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿರುವ ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೈಬಿಡಬೇಕು ಮತ್ತು ರಾಜ್ಯದ ಸಂಘಟಿತ, ಅಸಂಘಟಿತ ಕಾರ್ಮಿಕರ ಉದ್ಯೋಗ ಭದ್ರತೆಗಾಗಿ ಹಾಗೂ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಬಿಸಿಯೂಟ ನೌಕರರು, ಹಮಾಲಿ ಕಾರ್ಮಿಕರು ಹಾಗೂ ಆಟೋ ಚಾಲಕರು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಎರಡನೇ ದಿನಕ್ಕೆ ಅಹೋರಾತ್ರಿ ಧರಣಿ ಮುಂದಯವರೆಸಿದರು.
ಈ ಬೃಹತ್ ರ‍್ಯಾಲಿಯಲ್ಲಿ ಕೈಗಾರಿಕಾ ಕಾರ್ಮಿಕರು ಸೇರಿದಂತೆ ವಿವಿಧ ಗುತ್ತಿಗೆ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ನೌಕರರು, ಗ್ರಾಮ ಪಂಚಾಯ್ತಿ ನೌಕರರು, ಮುನ್ಸಿಪಲ್ ನೌಕರರು, ಸಾರಿಗೆ ನೌಕರರು, ಪ್ಲಾಂಟೇಷನ್ ನೌಕರರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಮನೆಗೆಲಸ ಹಾಗೂ ವಲಸೆ ಕಾಮಿಕರು ಸೇರಿದಂತೆ ವಿಮಾ ಪ್ರತಿನಿಧಿಗಳು ಹಾಗೂ ಬೀದಿಬದಿ ವ್ಯಾಪಾರಿಗಳ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಪ್ರತಿಭಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅಗಮಿಸಿ, ಮನವಿಯನ್ನು ಸ್ವೀಕರಿಸಿದರು, ಅಂಗನವಾಡಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವುದಾಗಿ ಅವರು ಭರವಸೆಯನ್ನು ನೀಡಿದರು.
ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ ಧರಣಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಕಷ್ಟಗಳನ್ನು ಕೇಳಿದರು. ಮುಖ್ಯಮಂತ್ರಿ ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲೆ ಕೆಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಸಿಐಟಿಯು ಎಸ್. ವರಲಕ್ಷ್ಮಿ, ರಾಜ್ಯಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಖಜಾಂಚಿ ಪರಮೇಶ್ವರ್ , ರಾಜ್ಯ ಪದಾಧಿಕಾರಿಗಳಾದ ಕೆ. ಎನ್ ಉಮೇಶ್, ಬಿ. ಉಮೇಶ್, ಸಿ.ಆರ್ ಶ್ಯಾನಭೋಗ್, ಜಿ. ಜಯರಾಮ್, ಟಿ.ಲೀಲಾವತಿ, ಕೆ.ಶಂಕರ್, ಬಿ.ಬಾಲಕೃಷ್ಣ ಶೆಟ್ಟಿ, ಹೆಚ್,ಎನ್. ಗೋಪಾಲಗೌಡ, ಎನ್.ವೀರಸ್ವಾಮಿ, ಕೆ.ಪ್ರಕಾಶ, ಶಾಂತ ಎನ್. ಘಂಟೆ, ಆರ್. ಎಸ್ ಬಸವರಾಜು, ಹರೀಶ್ ನಾಯ್ಕ್, ಗೈಬು ಜೈನ್‌ಖಾನ್, ಎಚ್. ಸುನಂದಾ, ಮಹೇಶ್ ಪತ್ತಾರ್, ಸಯ್ಯದ್ ಮುಜೀಬ್, ಕೆ. ಮಹಾಂತೇಶ್, ನಿರುಪಾದಿ ಬೆಣಕಲ್, ಮಾಲಿನಿ ಮೆಸ್ತಾ, ಯಮುನಾ ಗಾಂವ್ಕರ್, ಎನ್. ಪ್ರತಾಪ್ ಸಿಂಹ ಸೇರಿದಂತೆ ಅನೇಕರಿದ್ದರು.