ಬೆಂಗಳೂರು: ಮಿನಿಸ್ಟರ್ ಅಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೇವಾ ಎಂದು ಸಚಿವ ಸುಧಾಕರ್ ವಿರುದ್ಧ ಸ್ವಪಕ್ಷೀಯ ಶಾಸಕ ಎಂಪಿ ರೇಣುಕಾಚಾರ್ಯ ಬಹಿರಂಗವಾಗಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಕೆಲವು ಸಚಿವರು ಕೈಗೆ ಸಿಗುತ್ತಿಲ್ಲ, ಅವರ ಪಿಎಗಳು ಪಿಎಸ್ಗಳು ಫೋನೇ ರಿಸೀವ್ ಮಾಡುವುದಿಲ್ಲ. ಕಾಂಗ್ರೆಸ್ ಜೆಡಿಎಸ್ನಿಂದ ಬಂದ ಎಲ್ಲ ಸಚಿವರು ಹೀಗೆ ಅಂತ ನಾನು ಹೇಳಲ್ಲ, ಕೆಲವರು ಮಾತ್ರ ನಮಗೆ ಕೈಗೆ ಸಿಗಲ್ಲ. ನಾನು ಹತ್ತಾರು ಭಾರಿ ಭೇಟಿ ಆಗಿದ್ದೇನೆ, ಪತ್ರ ಬರೆದಿದ್ದೇನೆ, ಏನೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜೀ ಆಗುವ ಮಾತೇ ಇಲ್ಲ ಎಂದಿರುವ ರೇಣುಕಾಚಾರ್ಯ, ನಾನು ಧರಣಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ನಿನ್ನೆ ಅವರ ಪಿಎಸ್ ಫೋನ್ ಮಾಡಿದ್ರು. ಕೆಲವು ಕೆಲಸ ಆಗಿದೆ. ನನ್ನ ಕೆಲಸ ಆದ ಮಾತ್ರಕ್ಕೆ ನಾನು ಸುಮ್ಮನಿರಲ್ಲ. ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದ ಶಾಸಕರಿದ್ದಾರೆ. ಅವರ ಕೆಲಸಗಳೂ ಆಗಬೇಕು. ಐದಾರು ಸಚಿವರು ಕೈಗೆ ಸಿಗಲ್ಲ. ನಾನು ಮೂರು ಬಾರಿ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿದ್ದೀವಾ? ಎಂದು ಸಚಿವ ಸುಧಾಕರ್ ವಿರುದ್ದ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದಲ್ಲಿ ಮೂಲ ಮತ್ತು ವಲಸೆ ಎಂಬ ಮುಸುಕಿನ ಗುದ್ದಾಟ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಸಚಿವ ಸುಧಾಕರ್ ಮತ್ತು ರೇಣುಕಾಚಾರ್ಯ ಇಬ್ಬರೂ ಯಡಿಯೂರಪ್ಪಗೆ ಆಪ್ತರಾಗಿದ್ದಾರೆ. ಆದರೆ ರೇಣುಕಾಚಾರ್ಯ ಹಲವುದಿನಗಳಿಂದ ವಲಸೆ ಬಂದ ಶಾಸಕರ ಬಗ್ಗೆ ಮಾತನಾಡುತ್ತಲೇ ಇದ್ದರೂ ಸಿಎಂ ಮೌನ ಮುರಿಯದಿರುವುದು ಅಚ್ಚರಿಗೆ ಕಾರಣವಾಗಿದೆ.