ಬೆಂಗಳೂರು : ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಸರ್ಕಾರ ವಾರ್ಷಿಕ ಆದಾಯ ಮಿತಿ ನಿಗದಿ ಪಡಿಸಿದೆ. ಆದಾಯ ಮಿತಿಯನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಪ್ರತಿಕಾ ಪ್ರಕಟನೆಯನ್ನು ಹೊರಡಿಸಿದೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ 2.5 ಲಕ್ಷ ಆದಾಯ ಮಿತಿಯನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿಗದಿ ಪಡಿಸಿದೆ. ಎಸಿ/ಎಸ್ಟಿ -ಒಬಿಸಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಆದಾಯ 2.5 ಲಕ್ಷದ ಒಳಗಡೆ ಇರಬೇಕು ಎಂಬುದು ಅವೈಜ್ಞಾನಿಕ ಮಾನದಂಡವಾಗಿದೆ. ಇದರಿಂದ ಈ ವರ್ಗಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಂತಹ ಹಲವು ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಅನರ್ಹರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸಾಮಾಜಿಕ ಹಿಂದುದಿರುವಿಕೆಯ ಜೊತೆಗೆ ಆರ್ಥಿಕ ಹಿಂದುಳಿದಿರುವಿಕೆ, ಇಂದಿನ ಬೆಲೆ ಏರಿಕೆ ದರ, ಜೀವನವೆಚ್ಚವನ್ನು ಪರಿಗಣಿಸುವುದರ ಮೂಲಕ ಎಸಿ/ ಎಸ್ಟಿ- ಒಬಿಸಿ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿರುವ ಆರ್ಥಿಕ ಮಿತಿಯನ್ನು ಕೈಬಿಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಒತ್ತಾಯಿಸಿದೆ.
ಸಮುದಾಯಗಳ ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಬೇಕು. ಇಲ್ಲದಿದ್ದರೆ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಅಪಹಾಸ್ಯಕ್ಕೆ ದೂಡುವ ಈ ರೀತಿಯ ಧೋರಣೆಗಳ ಪರಿಣಾಮವಾಗಿ ಈಗಾಗಲೇ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಎಸಿ/ಎಸ್ಟಿ, ಒಬಿಸಿ ತಳ ಸಮುದಾಯಗಳ ವಿದ್ಯಾರ್ಥಿಗಳು ಮತ್ತಷ್ಟು ಶೈಕ್ಷಣಿಕ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಮತ್ತಷ್ಟು ಹಿಂದುಳಿಯುತ್ತಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಸಮಾನತೆಯನ್ನು ಹೆಚ್ಚು ಮಾಡುವ ಈ ರೀತಿಯ ನೀತಿಗಳನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ತೀವ್ರವಾಗಿ ವಿರೋಧಿಸಿದೆ.
ಮಾತೆತ್ತಿದರೆ “ಸಬ್ ಕಾ ಸಾತ್ ಸಬ್ ಕಾ ವಿಕಾಸ್ ” ಎಂದು ಘೋಷಣೆ ನೀಡುವ ಮೋದಿ, ಬಿಜೆಪಿ ಇದು ಯಾವ ರೀತಿಯಲ್ಲಿ ಅವರ ಘೋಷಣೆಗೆ ಪೂರ್ವಕವಾಗಿದೆ ಎಂದು.? ರಾಜ್ಯ ಬಿಜೆಪಿ ಸರ್ಕಾರ ಉತ್ತರಿಸಬೇಕು. ಇತ್ತಿಚೆಗೆ ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಫೆಲೋಶಿಪ್ 70% ಹಣವನ್ನು ಕಡಿತ ಮಾಡಲಾಗಿದೆ. ಇದೀಗ ಎಸಿ/ಎಸ್ಟಿ- ಒಬಿಸಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಾರ್ಷಿಕ ಆದಾಯ ಮಿತಿಯನ್ನು ಕೈ ಬಿಡದಿದ್ದರೆ ಬಿಜೆಪಿ ಸರ್ಕಾರದ ದಲಿತ, ಹಿಂದುಳಿದ ವರ್ಗಗಳ ವಿರೋಧಿ ನೀತಿ ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದು ಎಸ್ ಎಫ್ ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ , ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.