ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಬೆಂಗಳೂರು ಫೆ 18 : ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವನ್ನು ವಿರೋಧಿಸಿ ಸಿಪಿಐಎಂ ನಿಂದ ಬಿಬಿಎಂಪಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಸಿಪಿಐಎಂ ಮುಖಂಡರಾದ ಟಿ.ಲೀಲಾವತಿ ಮಾತನಾಡಿ,  ಪೆಟ್ರೋಲ್, ಡಿಸೆಲ್ ಹಾಗೂ ಅಡುಗೆ ಅನಿಲ (ಗ್ಯಾಸ್), ಹಣ್ಣು ತರಕಾರಿ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರ, ಮಧ್ಯಮ ವರ್ಗದವರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಸರ್ಕಾರವೇ ಪೆಟ್ರೋಲ್/ಡೀಸೆಲ್ ಬೆಲೆ ಏರಿಸುವುದರ ಮೂಲಕ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಜತೆಯಲ್ಲೇ ಅಡುಗೆ ಅನಿಲದ ಬೆಲೆಯನ್ನೂ ತೀವ್ರವಾಗಿ ಹೆಚ್ಚಿಸಿದೆ.

ಮೋದಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ರೂ.72 ರ ಆಸುಪಾಸಿನಲ್ಲಿತ್ತು, ಆಗ ಅಂತರಾಷ್ಟ್ರೀಯ ಕಚ್ಛಾತೈಲದ ಬೆಲೆ ಒಂದು ಬ್ಯಾರೆಲ್ಲಿಗೆ 110 ಡಾಲರುಗಳ ಆಸುಪಾಸಿನಲ್ಲಿತ್ತು. ಈಗ ಅಂತರಾಷ್ಟ್ರೀಯ  ಕಚ್ಛಾತೈಲದ ಬೆಲೆ 56 ಡಾಲರ್ ಗೆ ಇಳಿದಿದೆ. 2014ರ ತೈಲ ಬೆಲೆಗೆ ಹೋಲಿಸಿದರೆ ಈಗ ಅದು ಸರಿ ಸುಮಾರು ಅರ್ಧಕ್ಕೆ ಇಳಿದಿದೆ. ಅಂದರೆ ಪೆಟ್ರೋಲ್ ಬೆಲೆ ರೂ.36 ಕ್ಕೆ ಇರಬೇಕಿತ್ತು. ಆದರೆ ಅದು ಬೆಂಗಳೂರು ನಗರದಲ್ಲಿ ರೂ.90 ನ್ನುದಾಟಿ ರೂ. 100 ರತ್ತ ವೇಗದಿಂದ ಧಾವಿಸುತ್ತಿದೆ. ಹೆಚ್ಚುವರಿ ರೂ.೫೪ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದರು.

ಕಚ್ಛಾತೈಲದ ಬೆಲೆ ಇಳಿಕೆಯಿಂದ ಸಿಗಬೇಕಾದ ಪ್ರಯೋಜನವನ್ನುಗ್ರಾಹಕರಿಗೆ ವರ್ಗಾಯಿಸದೆ ಅದರ ಅಷ್ಟೂ ಪ್ರಯೋಜನವನ್ನು ಕೇಂದ್ರ ಸರ್ಕಾರವೇ ಪಡೆಯುತ್ತಿದೆ. ಈಗಾಗಲೇ 11 ಕ್ಕಿಂತ ಹೆಚ್ಚು ಬಾರಿತೈಲದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವುದರ ಮೂಲಕ ಲಕ್ಷಾಂತರ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತನ್ನ ಬೊಕ್ಕಸಕ್ಕೆ ಹಾಕಿಕೊಂಡಿದೆ. ಏಪ್ರಿಲ್-ನವಂಬರ್ 2020 ರ ಕೋವಿಡ್-19  ಅವಧಿಯಲ್ಲೇ ಕೇಂದ್ರ ಸರ್ಕಾರವು ರೂ. 62,000 ಕೋಟಿಯ ಅಬಕಾರಿ ಸುಂಕವನ್ನುಜನರಿಂದ ಸಂಗ್ರಹಿಸಿದೆ ಎಂದು ಲೀಲಾವತಿ ಆಗ್ರಹಿಸಿದರು.

ಬೆಂಗಳೂರು ಉತ್ತರ ವಲಯ ಕಾರ್ಯದರ್ಶಿ ಹುಳ್ಳಿ ಉಮೇಶ್ ಮಾತನಾಡಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ ರೂ. 10.39 ಇದ್ದ ಕೇಂದ್ರ ತೆರಿಗೆಯು ಈಗ ರೂ. 32.98 ಆಗಿದೆ, ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಅದೇ ರೀತಿಯಲ್ಲಿ ಡೀಸೆಲ್ ಮೇಲಿದ್ದ ಕೇಂದ್ರತೆರಿಗೆಯು ರೂ. 3.56  ಇದ್ದದ್ದು ಈಗ ರೂ. 31,83  ಆಗಿದೆ, ಅಂದರೆ ಹತ್ತುಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ದುರಾಸೆಯು ಅಗತ್ಯ ವಸ್ತುಗಳ ಬೆಲೆಯ ಮೇಲೆ ದುಷ್ಪರಿಣಾಮ ಬೀರಿದೆ. ಈ ಕಾರಣದಿಂದಾಗಿಯೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜಗತ್ತಿನಲ್ಲೇ ಪೆಟ್ರೋಲಿಯಂ ಉತ್ಪನ್ನಗಳಿಗೆ ಅತಿ ಹೆಚ್ಚು ತೆರಿಗೆಯನ್ನು ವಿಧಿಸುತ್ತಿರುವ ದೇಶ ಭಾರತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲಕ್ಷಾಂತರ ಕೋಟಿ ರೂಪಾಯಿಗಳನ್ನು ಅಬಕಾರಿ ಸುಂಕದ ಹೆಸರಿನಲ್ಲಿ ಜನರಿಂದ ಲೂಟಿ ಮಾಡುತ್ತಿರುವಾಗಲೇ ಮೋದಿ ಸರ್ಕಾರವು ತಮ್ಮ ಚಮಚಾ ಬಂಡವಳಿಗರಿಗೆ ರೂ.9 ಲಕ್ಷಕೋಟಿ ರೂಪಾಯಿ ಬ್ಯಾಂಕ್‌ಸಾಲ ಮನ್ನಾ ಮಾಡಿದೆ. ಜನಸಾಮಾನ್ಯರ ಜೀವಮಾನದ ಉಳಿತಾಯದ ಹಣವನ್ನುಕಾರ್ಪೊರೇಟ್ ಕುಳಗಳಿಗೆ ಧಾರೆಯೆರೆದಿದೆ.

ಅಲ್ಲದೇ ನಮ್ಮ ರಾಜ್ಯ ಸರ್ಕಾರವೂ ನೀರು, ವಿದ್ಯುತ್ ಮುಂತಾದವುಗಳ ದರ ಹೆಚ್ಚಿಸುವ ಜತೆಯಲ್ಲೇ ಬಿಬಿಎಂಪಿ ಮೂಲಕ ರಸ್ತೆಗುಂಡಿ ತೆರಿಗೆ, ನಿವೇಶನ ತೆರಿಗೆ, ಪಾರ್ಕಿಂಗ್ ಶುಲ್ಕ, ಕಸ ವಿಲೇವಾರಿ ಶುಲ್ಕ ಮುಂತಾದವುಗಳನ್ನು ಜನರಿಂದ ಸುಲಿಗೆ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಜನರು ಕೋವಿಡ್ 19  ಬರ, ಅತಿವೃಷ್ಠಿಯಿಂದಾಗಿ ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಜನರ ಸಂಕಷ್ಠಗಳಿಗೆ ಕಿವಿಯಾಗಿ, ಕಣ್ಣಾಗಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿತ್ತು. ಆದರೆ ರಾಜ್ಯ ಸರ್ಕಾರದ ನಡೆ ಈ ದಿಕ್ಕಿನಲ್ಲಿಲ್ಲದಿರುವುದು ಸ್ಪಷ್ಟವಾಗಿಗೋಚರಿಸುತ್ತಿದೆ ಎಂದು ಉಮೇಶ್ ಆರೋಪಿಸಿದರು.

ಬಾಗಲಗುಂಟೆ, ರಾಜಗೋಪಾಲನಗರ ಬಿಬಿಎಂಪಿ ಕಛೇರಿಗಳ ಮುಂದೆ ಸಿಪಿಐಎಂ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮುಖಂಡರಾದ ವಿಜಯಲಕ್ಷ್ಮಿ, ರೇಣುಕ, ಮಂಗಳಕುಮಾರಿ, ಹರೀಶ್.ಕೆ, ವಿನಾಯಕ, ತಿಮ್ಮರಾಜು, ಚಂದ್ರಶೇಖರ್.ಆರ್, ಸುಶೀಲಮ್ಮ ಸೇರಿದಂತೆ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *