ರಾಜ್ಯಸಭೆ ವಿಪಕ್ಷ ನಾಯಕನಾಗಿ ಖರ್ಗೆ ಆಯ್ಕೆ

ಹೊಸದಿಲ್ಲಿ ಫೆ 13 :  ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಸಭೆ ವಿಪಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಕಾಂಗ್ರೆಸ್ ಸೂಚಿಸಿದೆ.

ರಾಜ್ಯಸಭೆ ವಿಪಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಸೂಚಿಸಿ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಕಾಂಗ್ರೆಸ್ ಪತ್ರ ಬರೆದಿದ್ದು, ಈ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಪ್ರಸ್ತುತ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ರಾಜ್ಯಸಭಾ ಸದಸ್ಯತ್ವದಿಂದ ಫೆ 15 ರಂದು ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈಗಾಗಲೇ ಲೋಕಸಭೆ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ, ಸರಕಾರದ ವೈಫಲ್ಯಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರು ಮತ್ತು ಸಂಸದರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುತ್ತಿದ್ದರು. ಇದೀಗ ರಾಜ್ಯಸಭೆ ವಿಪಕ್ಷ ಸ್ಥಾನವನ್ನು ಅಲಂಕರಿಸಲಿರುವುದು ಕನ್ನಡಿಗರ ಪಾಲಿಗೆ ಸಂತಸದ ಕ್ಷಣ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್ದ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಲ?! ರಾಜ್ಯಸಭಾ ವಿಪಕ್ಷ ಸ್ಥಾನಕ್ಕೆ ಖರ್ಗೆ ಹೆಸರು ಅಂತಿಮ‌ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಗೆ ಬಲ ತುಂಬಲು ಹೈಕಮಾಂಡ್ ನಿರ್ಧಾರ ಮಾಡಿದಂತೆ ಕಾಣುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕರಾಗಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ಇದ್ದಾರೆ. ಈಗ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಹುದ್ದೆಗೆ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ರಾಜ್ಯದ ಪ್ರಭಲ ಸಮುದಾಯಗಳಾದ ಒಕ್ಕಲಿಗ, ಹಿಂದೂಳಿದ ವರ್ಗ ಹಾಗೂ ದಲಿತ ವಿಭಾಗದ ಮತಗಳನ್ನು ಬಲಗೊಳಿಸಲು ಹೈಕಮಾಂಡ್ ನಿರ್ಧರಿಸಿದೆ. ಮುಂಬರುವ ವಿಧಾನ ಸಭಾ ಚುನಾವಣೆಗೆ ಈಗಿನಿಂದಲೆ ಕಾಂಗ್ರೆಸ್ ತಂತ್ರಗಳನ್ನು ಹೆಣೆಯುತ್ತಿದೆ. ಅದು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಕಾದು ನೋಡಬೇಕಿದೆ!?

 

Donate Janashakthi Media

Leave a Reply

Your email address will not be published. Required fields are marked *