ಗಣತಂತ್ರ ದಿನದಂದು ಐತಿಹಾಸಿಕ ಕಿಸಾನ್‍ ಟ್ರಾಕ್ಟರ್ ಪರೇಡ್

ಸಂಯುಕ್ತ ಕಿಸಾನ್‍ ಮೋರ್ಚಾ  ದಿಲ್ಲಿಯ ಸುತ್ತಮುತ್ತಲಿನ ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗಳ ಪ್ರಧಾನವಾಗಿ ಶಾಂತಿಯುತ ಸ್ವರೂಪವನ್ನು ಶ್ಲಾಘಿಸುತ್ತಲೇ, ಬಿಜೆಪಿ ಸರ್ಕಾರ ಮತ್ತು ಪೊಲೀಸರೊಂದಿಗೆ ಶಾಮೀಲಾಗಿ ಹಿಂಸಾಚಾರ ನಡೆಸಿದ ಹಿಡಿಯಷ್ಟು ಮಂದಿಯನ್ನು ಸ್ಪಷ್ಟವಾಗಿ  ಹೆಸರಿಸಿ  ಅವರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿತು. ಅದೇ ವೇಳೆಗೆ, ಜನವರಿ 26ರಂದು ದಿಲ್ಲಿಯಲ್ಲಿ   ಏನೇನಾಯಿತೋ ಅದಕ್ಕೆ  ನೈತಿಕ ಹೊಣೆಗಾರಿಕೆಯನ್ನು ಅದು ಧೈರ್ಯದಿಂದ ಒಪ್ಪಿಕೊಂಡಿತು, ಅದಕ್ಕಾಗಿ ವಿಷಾದ ವ್ಯಕ್ತಪಡಿಸಿತು ಮತ್ತು ಫೆಬ್ರವರಿ 1 ರ ರೈತರ ದಿಲ್ಲಿ ಮೆರವಣಿಗೆಯನ್ನು ಮುಂದೂಡಲು ನಿರ್ಧರಿಸಿತುಜನವರಿ 30 ರಂದು, ಹುತಾತ್ಮ ದಿನವನ್ನು ದೇಶಾದ್ಯಂತ ಸತ್ಯ, ಶಾಂತಿ ಮತ್ತು ಅಹಿಂಸೆಗಾಗಿ ದೊಡ್ಡ ಸಾರ್ವಜನಿಕ ಸಭೆಗಳು ಮತ್ತು ಒಂದು ದಿನದ ಉಪವಾಸದ ಮೂಲಕ  ನಡೆಸಬೇಕು  ಎಂದು ಕರೆ ನೀಡಿತು.ಎಲ್ಲಕ್ಕಿಂತ ಮುಖ್ಯವಾಗಿ, ರೈತರ ಹೋರಾಟವು ಅದರ ಬೇಡಿಕೆಗಳನ್ನು ಗೆದ್ದುಕೊಳ್ಳುವ ವರೆಗೂ ದೇಶಾದ್ಯಂತ ಮುಂದುವರಿಯುತ್ತದೆ ಮತ್ತು ತೀವ್ರಗೊಳ್ಳುತ್ತದೆ ಎಂದು ಅದು ಘೋಷಿಸಿತು.

       – ಅಶೋಕ ಧವಳೆ – ಅಧ್ಯಕ್ಷರು, ಅಖಿಲ ಭಾರತ ಕಿಸಾನ್‍ ಸಭಾ

ಭಾರತ ತನ್ನ ಇತಿಹಾಸದಲ್ಲಿ ಇಂತಹದೊಂದು  ಭವ್ಯವಾದ ದೃಶ್ಯವನ್ನು ಹಿಂದೆಂದೂ ನೋಡಿರಲಿಲ್ಲ.  ಜನವರಿ 26, 2021, ಗಣತಂತ್ರ ದಿನದಂದು  ಲಕ್ಷಾಂತರ ರೈತರು ರಾಷ್ಟ್ರ ರಾಜಧಾನಿ ದಿಲ್ಲಿಯ ಹೊರವಲಯದಲ್ಲಿ ಒಂದು ಲಕ್ಷ ಟ್ರಾಕ್ಟರುಗಳಲ್ಲಿ ಮೆರವಣಿಗೆ ನಡೆಸಿದರು. ಪ್ರತಿ ಟ್ರಾಕ್ಟರ್ ಹೆಮ್ಮೆಯಿಂದ ರಾಷ್ಟ್ರ ಧ್ವಜ ಮತ್ತು ಅದರ ರೈತ ಸಂಘಟನೆಯ ಬಾವುಟವನ್ನು ಹಿಡಿದಿತ್ತು.ಇದೊಂದು ಅಭೂತಪೂರ್ವ ರೈತ ಐಕ್ಯತೆಯ ಪ್ರದರ್ಶನವಾಗಿದ್ದು, ದಿಲ್ಲಿಯ ಗಡಿಗಳಲ್ಲಿ ಲಕ್ಷಾಂತರ ರೈತರು ಎರಡು ತಿಂಗಳಿಂದ ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌.ಕೆ.ಎಂ.) ನೇತೃತ್ವದಲ್ಲಿ ನಡೆಸುತ್ತಿರುವ , ಸಂಪೂರ್ಣವಾಗಿ ಶಾಂತಿಯುತವಾದ ಹೋರಾಟಕ್ಕೆ ಕಿರೀಟವಿಟ್ಟಂತಿತ್ತು.

ಈ ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗಳ ಅತ್ಯಂತ ಹೃದಯಸ್ಪರ್ಶಿ ಅಂಶವೆಂದರೆ ದಿಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಜನ ಸಾಮಾನ್ಯರು ರೈತರಿಗೆ ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯ. ರೈತರನ್ನು ಸ್ವಾಗತಿಸಲು ಸಾವಿರಾರು ಜನರು ಬೀದಿಗಿಳಿದು, ಅವರ ಮೇಲೆ ಗುಲಾಬಿ ದಳಗಳನ್ನು ಸುರಿಸಿ, ಅವರಿಗೆ ಸಿಹಿತಿಂಡಿಗಳು, ನೀರಿನ ಬಾಟಲಿಗಳು ಮತ್ತು ಇತರ ತಿನಿಸುಗಳನ್ನು ಅರ್ಪಿಸಿದರು. ಇದು ರೈತರ ಹೋರಾಟಕ್ಕೆ ಬಲವಾದ ಸಾರ್ವಜನಿಕ ಬೆಂಬಲವನ್ನು ತೋರಿಸಿತು.

ದಿಲ್ಲಿಯ ಎಲ್ಲ ಗಡಿಗಳಲ್ಲಿ ಕಿಸಾನ್ ಟ್ರ್ಯಾಕ್ಟರ್ ಪೆರೇಡ್‌ಗಳಲ್ಲಿ ಎ.ಐ.ಕೆ.ಎಸ್., ಸಿ.ಐ.ಟಿ.ಯು., ಎ.ಐ.ಎ.ಡಬ್ಲ್ಯು.ಯು, ಎ.ಐ.ಡಿ.ಡಬ್ಲ್ಯೂ.ಎ., ಎಸ್‌.ಎಫ್‌.ಐ. ಮತ್ತು ಡಿ.ವೈ.ಎಫ್‌.ಐ. ಕೇಂದ್ರ ಮತ್ತು ರಾಜ್ಯ ನಾಯಕರು ಭಾಗವಹಿಸಿದ್ದರು. ಎಐಕೆಎಸ್‌ನ ಕೆಂಪು ಧ್ವಜಗಳು ಇತರ ಬಾವುಟಗಳೊಂದಿಗೆ ಎತ್ತರದಲ್ಲಿ ಹಾರಾಡಿದವು.

ಇಂತಹುದೇ ದೃಶ್ಯ  ಎಲ್ಲಾ ದೇಶದ ರಾಜ್ಯಗಳಲ್ಲಿ ಮತ್ತು ನೂರಾರು ಜಿಲ್ಲೆಗಳಲ್ಲಿಯೂ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಲ್ಲವಾದರೂ ಕಾಣಬಂದವು. ಲಕ್ಷಾಂತರ ರೈತರು ಮತ್ತು ಕಾರ್ಮಿಕರು ತಮ್ಮ ಟ್ರಾಕ್ಟರುಗಳು, ಟ್ರಾಲಿಗಳು ಮತ್ತು ಇತರ ವಾಹನಗಳಲ್ಲಿ ಬೀದಿಗಿಳಿದು ತಮ್ಮ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರ್ಯಾಲಿಗಳನ್ನು ನಡೆಸಿದರು.

ಇದನ್ನೂ ಓದಿ : ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಿರತ 108 ರೈತರ ಮರಣ

ದಿಲ್ಲಿಯ ಸುತ್ತಮುತ್ತಲಿನ ರೈತರು ಮತ್ತು ದೇಶಾದ್ಯಂತ ರೈತರು ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ಸಂಸತ್ತಿನ ಮೂಲಕ ಬಲವಂತದಿಂದ ತೂರಿಸಿದ ಮೂರು ರೈತ ವಿರೋಧಿ, ಜನ ವಿರೋಧಿ ಮತ್ತು ಕಾರ್ಪೊರೇಟ್ ಪರ ಕೃಷಿ ಕಾಯ್ದೆಗಳನ್ನು ತಕ್ಷಣ ರದ್ದುಗೊಳಿಸುವಂತೆ, ವಿದ್ಯುತ್ ವಲಯದ ಖಾಸಗೀಕರಣಕ್ಕೆ, ಅಡ್ಡ ಸಬ್ಸಿಡಿ ಕೊನೆಗೊಳ್ಳಲು ಮತ್ತು ಎಲ್ಲಾ ದುಡಿಯುವ ಜನವಿಭಾಗಗಳಿಗೆ  ವಿದ್ಯುತ್ ದರದಲ್ಲಿ ಭಾರಿ ಏರಿಕೆಗೆ ಕಾರಣವಾಗುವ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ  ಮತ್ತು ಫಲದಾಯಕ ಕನಿಷ್ಟ ಬೆಂಬಲೆ ಬೆಲೆ( ಎಂಎಸ್‌ಪಿ) ಮತ್ತು ಬೆಳೆ ಖರೀದಿಯನ್ನು ಖಾತರಿಪಡಿಸುವ ಒಂದು ಹೊಸ ಕಾನೂನು ತರುವಂತೆ ಒತ್ತಾಯಿಸುತ್ತಿದ್ದರು.

ಹಿಂಸಾಚಾರಕ್ಕೆ ತಿದಿಯೂದಿದ ಚಿತಾವಣೆ-ಏಜೆಂಟರು ಮತ್ತು ಪೋಲಿಸ್

ಎಸ್‌.ಕೆ.ಎಂ. ಮೂಲತಃ ಟ್ರ್ಯಾಕ್ಟರ್ ಪೆರೇಡ್ ದಿಲ್ಲಿಯ ಹೊರ ವರ್ತುಲ ರಸ್ತೆಯಲ್ಲಿ ಹೋಗಬೇಕೆಂದು ಬಯಸಿತ್ತು. ಆದರೆ ಇದನ್ನು ಪೊಲೀಸರು ನಿರಾಕರಿಸಿದರು, ಮಧ್ಯ ದಿಲ್ಲಿಯನ್ನು ತಪ್ಪಿಸುವ ಪರ್ಯಾಯ ಮಾರ್ಗಗಳನ್ನು ಕೊಟ್ಟರು. ಮೆರವಣಿಗೆಗಳು ನಡೆಯಬೇಕು, ಆದರೆ ಶಾಂತಿಯುತವಾಗಿ ನಡೆಯಬೇಕು ಎಂಬ ಸ್ಪಷ್ಟ ತಿಳುವಳಿಕೆಯೊಂದಿಗೆ ವಿಷಯಗಳನ್ನು ಸಂಕೀರ್ಣಗೊಳಿಸಲು ಬಯಸದ ಎಸ್‍.ಕೆ.ಎಂ. ಮುಖಂಡರು ಇದಕ್ಕೆ ಒಪ್ಪಿದರು. ಅಧಿಕೃತ ಗಣರಾಜ್ಯೋತ್ಸವ ಮೆರವಣಿಗೆ ಮುಗಿದ ನಂತರ ಜನವರಿ 26 ರಂದು ಬೆಳಿಗ್ಗೆ 10 ಗಂಟೆಯಿಂದ ಎಲ್ಲಾ ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು.

ಜನವರಿ 27 ರ ಸಂಜೆ ಸಿಂಘು ಗಡಿಯಲ್ಲಿ ನಡೆದ ಎಸ್‌.ಕೆ.ಎಂ. ಸಭೆಯಲ್ಲಿ ನಡೆದ ಗಂಭೀರ ವಿಮರ್ಶೆ ಚರ್ಚೆಯಲ್ಲಿ ದಿಲ್ಲಿಯ ಸುತ್ತಮುತ್ತಲಿನ ಎಲ್ಲ ಗಡಿಗಳಲ್ಲಿ ಪ್ರತಿಭಟನಾ ನಿರತ 99.9 ರಷ್ಟು ರೈತರು ಗೊತ್ತುಪಡಿಸಿದ ಮಾರ್ಗಗಳ ಮೂಲಕ ಕಿಸಾನ್ ಟ್ರ್ಯಾಕ್ಟರ್ ಪೆರೇಡ್‌ಗಳಲ್ಲಿ ಉತ್ಸಾಹದಿಂದ ಸಂಪೂರ್ಣವಾಗಿ ಶಾಂತಿಯುತ ರೀತಿಯಲ್ಲಿ ಭಾಗವಹಿಸಿದ್ದಾರೆ ಎಂಬುದು ಸ್ಪಷ್ಟವಾಯಿತು.

ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು

ಶಿಸ್ತನ್ನು ಮೀರಿ ಬೆಳಿಗ್ಗೆ 7 ರಿಂದ 8 ರ ನಡುವೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ ಕೆಲವೇ ಪ್ರತಿಭಟನಾಕಾರರ  ಪ್ರಮಾಣ  ಶೇಕಡಾ 0.1 ರಷ್ಟಿತ್ತಷ್ಟೇ. ಅವರನ್ನು ಪೊಲೀಸರು ತಡೆಯಲಿಲ್ಲ, ದಿಲ್ಲಿಯ ವಿವಿಧ ಭಾಗಗಳನ್ನು ಪ್ರವೇಶಿಸಿದವರು ಅವರೇ. ಕೆಲವು ಗುಂಪುಗಳು ಕೆಂಪು ಕೋಟೆ ಮತ್ತು ಐಟಿಒ ವರೆಗೆ ಹೋದವು. ಒಂದು ಗುಂಪು, ಕೆಂಪು ಕೋಟೆಯಲ್ಲಿ  ಹಾರುತ್ತಿದ್ದ  ರಾಷ್ಟ್ರೀಯ ಧ್ವಜವನ್ನು ಮುಟ್ಟದೆ, ಸಿಖ್ ನಿಶಾನ್ ಸಾಹಿಬ್ ಧ್ವಜವನ್ನು ಮತ್ತೊಂದು ಖಾಲಿ ಧ್ವಜಸ್ತಂಭದಿಂದ ಹಾರಿಸಿತು. ಇದು ಸ್ಪಷ್ಟವಾಗಿಯೂ ತಪ್ಪು.  ಅಶ್ರುವಾಯು ಚಿಪ್ಪುಗಳು ಮತ್ತು ಲಾಠಿ ಪ್ರಹಾರಗಳೊಂದಿಗೆ ಪೊಲೀಸರು ಅನಾಗರಿಕ ದಮನವನ್ನು ಹರಿಯಬಿಟ್ಟರು. ಈ ಗದ್ದಲದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಒಬ್ಬ ಯುವ ರೈತ ನವ್ರೀತ್ ಸಿಂಗ್ ಸಾವನ್ನಪ್ಪಿದ್ದಾನೆ. ಪೊಲೀಸ್ ಲಾಠಿ ಪ್ರಹಾರಗಳಲ್ಲಿ ನೂರಾರು ರೈತರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಕೆಲವರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ.

ಜನವರಿ 26 ರ ಮಧ್ಯಾಹ್ನ ಬಿಡುಗಡೆ ಪ್ರಕಟಿಸಿದ ಹೇಳಿಕೆಯಲ್ಲಿ ಎಸ್‌.ಕೆ.ಎಂ. ಈ ದುರದೃಷ್ಟಕರ ಘಟನೆಯನ್ನು ತಕ್ಷಣವೇ ಖಂಡಿಸಿತು, ಮತ್ತು ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಿದ ಮತ್ತೊಂದು ಹೇಳಿಕೆಯಲ್ಲಿ, ಎಲ್ಲಾ ರೈತರು ತಮ್ಮ ಟ್ರಾಕ್ಟರ್ ರ್ಯಾಲಿಗಳನ್ನು ತಕ್ಷಣದಿಂದಲೇ ನಿಲ್ಲಿಸಿ ತಮ್ಮ ಶಿಬಿರಗಳಿಗೆ ಮರಳುವಂತೆ ಮನವಿ ಮಾಡಿತು.

 ಅಪರಾಧಿಗಳು ಯಾರು

ಈ ಪ್ರಸಂಗದಲ್ಲಿನ ಅಪರಾಧಿಗಳು ಯಾರು? ಮೂರು ಪ್ರಮುಖ ಅಪರಾಧಿಗಳಿದ್ದಾರೆ ಎಂದು ಎಸ್‌.ಕೆ.ಎಂ. ಸಭೆಯಲ್ಲಿ ತೀರ್ಮಾನಿಸಲಾಯಿತು. ಅವರೆಂದರೆ,  ದೀಪ್ ಸಿಧು, ಸತ್ನಾಂ ಸಿಂಗ್ ಪನ್ನು ನೇತೃತ್ವದ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ(ಕೆ.ಎಂ.ಎಸ್‌.ಸಿ.) ಮತ್ತು ತನ್ನ ದಿಲ್ಲಿ ಪೋಲಿಸ್‍ ನೊಂದಿಗೆ ಬಿಜೆಪಿ  ಕೇಂದ್ರ ಸರಕಾರ. ಇವರೆಲ್ಲರೂ ಪರಸ್ಪರ ಶಾಮೀಲಿನೊಂದಿಗೆ ಕೆಲಸ ಮಾಡಿದ್ದಾರೆ.

ಗುರುದಾಸ್‌ಪುರದಿಂದ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಅವರ ಚುನಾವಣಾ ಏಜೆಂಟನಾಗಿದ್ದ ದೀಪ್ ಸಿಧು ಒಬ್ಬ  ಪಂಜಾಬಿ ನಟ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರೊಂದಿಗಿನ ಸಿಧು ಅವರ ಫೋಟೋಗಳು ದೇಶಾದ್ಯಂತ ವೈರಲ್ ಆಗಿವೆ. ಜನವರಿ 25 ರ ರಾತ್ರಿಯಿಂದ, ಆತ ಸಿಂಘು ಗಡಿಯ ಮುಖ್ಯ ವೇದಿಕೆಯಲ್ಲಿ ಯುವ ರೈತರನ್ನು ದಿಲ್ಲಿಯೊಳಕ್ಕೆ ನುಗ್ಗಲು  ಚಿತಾವಣೆ ನಡೆಸುತ್ತಿದುದು ಕಂಡುಬಂದಿದೆ. ಕೆಂಪು ಕೋಟೆಯ ಒಂದು  ವೀಡಿಯೊ ಕ್ಲಿಪ್ ನಲ್ಲಿ ನಿಶಾನ್ ಸಾಹಿಬ್ ಬಾವುಟವನ್ನು ಹಾಕಲು ಆತ ಕೆಲವು ಯುವಕರನ್ನು ಪ್ರಚೋದಿಸುವುತ್ತಿದ್ದುದನ್ನು ಕಾಣಬಹುದು. ಅದೇ ವೀಡಿಯೊದಲ್ಲಿ ಹಲವಾರು ರೈತರು ಆತನೊಂದಿಗೆ ಜೋರಾಗಿ ವಾದಿಸುತ್ತಿರುವುದನ್ನು ಮತ್ತು ಈ ಕೃತ್ಯವನ್ನು ಖಂಡಿಸುತ್ತಿರುವುದನ್ನೂ ಕಾಣಬಹುದು. ನಂತರ ಆತ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾದುದನ್ನೂ ಕಾಣಬಹುದು.

ಜನವರಿ 28 ರ ‘ಇಂಡಿಯನ್ ಎಕ್ಸ್‌ಪ್ರೆಸ್‌’ ನಲ್ಲಿನ ವರದಿಯ ಪ್ರಕಾರ, ಜನವರಿ 20 ರಂದು ದೀಪ್ ಸಿಧು ಫೇಸ್‌ಬುಕ್‌ನಲ್ಲಿ ಪಂಜಾಬ್‌ನಿಂದ ದೆಹಲಿಗೆ ಹೋಗುವ ಮಾರ್ಗದಲ್ಲಿ ಹಲವಾರು ಟ್ರಾಕ್ಟರುಗಳನ್ನು ಲೈವ್‌ಸ್ಟ್ರೀಮ್‌ ಮಾಡಿ ಪಿಕ್ಚರ್ ತೋ ಅಭಿ ಬಾಕಿ ಹೈ , ಮೇರೆ  ದೋಸ್ತ್.” ಎಂದಿದ್ದ. ಜನವರಿ 23 ರಂದು ಆತ ಪಂಜಾಬಿಯಲ್ಲಿ ವೆಬ್ ಚಾನೆಲ್ ಸಂದರ್ಶನವೊಂದನ್ನು ಹಂಚಿಕೊಂಡಿದ್ದ, ಅದರಲ್ಲಿ  “ಜನವರಿ 26 ರಂದು ಏನಾಗಲಿದೆ ಎಂದು ನಾವು ಯೋಜಿಸಲು ಸಾಧ್ಯವಿಲ್ಲ. ಇದು ನಮ್ಮ ಲೆಕ್ಕಾಚಾರಗಳಿಂದ ಹೊರಗಿದೆ . ಇದು ಅನಿರೀಕ್ಷಿತವಾಗಿರುತ್ತದೆ. ಜನವರಿ 26 ರಂದು ಏನಾಗುತ್ತದೆ ಎಂಬುದು ಸರ್ವಶಕ್ತನಿಗೆ ಬಿಟ್ಟದ್ದು.” ಸಿಧು ಮಟ್ಟಿಗೆ ‘ಸರ್ವಶಕ್ತ’ನೆಂದರೆ ಮೋದಿ ಆಳ್ವಿಕೆ!

ದೆಹಲಿ ರೈತ ಹೋರಾಟಕ್ಕೆ ಹೆಚ್ಚುತ್ತಿದೆ ಜನ ಬೆಂಬಲ

ಕೆಂಪು ಕೋಟೆಯ ಸುತ್ತಲೂ ಬೃಹತ್ ಪೊಲೀಸ್ ಮತ್ತು ಸೈನ್ಯದ ಭದ್ರತೆಯನ್ನು ನೋಡಿದರೆ, ಅದೂ ಸಹ ಗಣರಾಜ್ಯದ ದಿನದಂದು, ಕೆಲವು ಯುವಕರು ಅಲ್ಲಿ ಯಾವುದೇ ಬಾವುಟವನ್ನು ಹಾರಿಸುವುದು ಹೇಗೆ ಸಾಧ್ಯ? ‘ಮೇಲಿನಿಂದ ಸೂಚನೆಗಳು’ ಇಲ್ಲದೆ ಇದು ಸಂಭವವಿರಲಿಲ್ಲ ಎಂಬುದು ಸ್ವಯಂವೇದ್ಯ. ನಿಶಾನ್ ಸಾಹಿಬ್ ಬಾವುಟವನ್ನು ತಕ್ಷಣವೇ ಕೆಳಕ್ಕೆ ಎಳೆಯಲಾಗಲಿಲ್ಲ, ಒಂದೆರಡು ಗಂಟೆಗಳ ಕಾಲ ಹಾರಾಡುತ್ತಿರಲು ಬಿಡಲಾಯಿತು,  ಸರಕಾರದ ಸೇವಕನಾಗಿ ಬಿಟ್ಟಿರುವ ಕೃಪಾಪೋಷಿತ  ಮಾಧ್ಯಮಗಳಿಗಾಗಿ ಎಂಬುದು ಸ್ಪಷ್ಟ. ಇದು ಪಂಜಾಬ್ ಮತ್ತು ದೇಶದ ಉಳಿದ ಭಾಗಗಳ ನಡುವೆ ಧಾರ್ಮಿಕ ಒಡಕು ಮೂಡಿಸುವುದು ಮತ್ತು ರೈತರ ಐಕ್ಯ ಹೋರಾಟವನ್ನು ಛಿದ್ರಗೊಳಿಸುವ  ಸ್ಪಷ್ಟ ಪಿತೂರಿಯಾಗಿತ್ತು

ವ್ಯಂಗ್ಯಚಿತ್ರಕೃಪೆ: ಅಲೋಕ್‍ ನಿರಂತರ್

ಇನ್ನು, ಕೆ.ಎಂ.ಎಸ್‍.ಸಿ. ನವೆಂಬರ್ 26 ರಂದು ಸಿಂಘು  ಗಡಿಯಲ್ಲಿ ಪ್ರಾರಂಭವಾದ ಪ್ರತಿಭಟನೆಯಲ್ಲಿ ಸೇರಲಿಲ್ಲ. ಅದರ ಅನುಯಾಯಿಗಳು ಎರಡು ವಾರಗಳ ನಂತರ ಸೇರಿಕೊಂಡರು ಮತ್ತು ಅವರನ್ನು ಪೊಲೀಸರೇ ಸ್ವತಃ ಇತರರಿಂದ ಪ್ರತ್ಯೇಕ ಆವರಣಕ್ಕೆ ಕರೆದೊಯ್ದರು. ಟ್ರ್ಯಾಕ್ಟರ್ ಪೆರೇಡ್‌ನ ಗೊತ್ತುಪಡಿಸಿದ ಮಾರ್ಗವನ್ನು ಉಲ್ಲಂಘಿಸಉವುದಾಗಿಯೂ ಹೊರ ವರ್ತುಲ ರಸ್ತೆಯ ಉದ್ದಕ್ಕೂ ನೇರವಾಗಿ ದಿಲ್ಲಿಗೆ ಹೋಗುವುದಾಗಿ ಅವರು ಪದೇ ಪದೇ ವಾದಿಸಿದರು. ಗೊತ್ತುಪಡಿಸಿದ ಸಮಯಕ್ಕೆ ಎರಡು ಗಂಟೆಗಳ ಮೊದಲು ಅವರು ಬೆಳಿಗ್ಗೆ 8 ಗಂಟೆಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಪೊಲೀಸರು ಅವರನ್ನು ತಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ, ರೈತರು ದಿಲ್ಲಿ ತಲುಪಿದಾಗ, ತಮ್ಮ  ದಮನಚಕ್ರವನ್ನು ಹರಿಯಬಿಟ್ಟರು.

ಪೊಲೀಸರ ವಿರುದ್ಧ ಇನ್ನೂ ಹಲವು ದೂರುಗಳಿವೆ. ಪಲ್ವಲ್ ಗಡಿಯಲ್ಲಿ, ಮಾರ್ಗವು 45 ಕಿ.ಮೀ ಎಂದು ನಿರ್ಧರಿಸಿದ್ದರೂ, ಪರೇಡರ್‌ಗಳು ಕೇವಲ 15 ಕಿ.ಮೀ ದೂರವನ್ನು ಕ್ರಮಿಸಿದಾಗ ಪೊಲೀಸರು ಲಾಠಿ ಪ್ರಹಾರ  ಪ್ರಾರಂಭಿಸಿದರು. ಗಾಜಿಪುರ ಗಡಿಯಲ್ಲಿ, ಗೊತ್ತುಪಡಿಸಿದ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಪೊಲೀಸರು ನಿರಾಕರಿಸಿದರು ಮತ್ತು ಐಕ್ಯ ಹೋರಾಟದ  ಹೊರ ಅಂಚಿನಲ್ಲಿದ್ದವರಿಗೆ ಮತ್ತೊಂದು ಮಾರ್ಗದಲ್ಲಿ ಹೋಗಲು ಅವಕಾಶ ನೀಡಿದರು.

ಬಿಜೆಪಿ ಕೇಂದ್ರ ಸರಕಾರದ ಪಿತೂರಿ

ಈ ಚಿತಾವಣೆ-ಏಜೆಂಟರನ್ನು ರೈತರ ಎರಡು ತಿಂಗಳ ಸುದೀರ್ಘ ಶಾಂತಿಯುತ ಹೋರಾಟಕ್ಕೆ ಅಪಖ್ಯಾತಿ ತರಲು, ಮಸಿ ಬಳೆಯಲು ಬಿಜೆಪಿ ಸರಕಾರ ತಯಾರು ಮಾಡಿತ್ತು  ಎಂಬ ತೀರ್ಮಾನಕ್ಕೆ  ಬರಲೇ ಬೇಕಾಗುತ್ತದೆ. ಜನವರಿ 22 ರಂದು, ಎಸ್‌.ಕೆ.ಎಂ. ಜೊತೆಗಿನ 11 ನೇ ಸುತ್ತಿನ ಮಾತುಕತೆಯಲ್ಲಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರ ನಿಯೋಗಕ್ಕೆ “ಅಂದರೆ ಈಗ ನೀವು ಜನವರಿ 26 ಕ್ಕೆ ನಿಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತೀರಿ, ನಾವು ನಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತೇವೆ” ” ಎಂದು ಹೇಳಿರುವುದಾಗಿ  ವರದಿಯಾಗಿದೆ. ಅವರ ‘ಸಿದ್ಧತೆಗಳು’ ಏನು ಎಂಬುದೀಗ ಇಡೀ ಜಗತ್ತಿಗೆ ಕಾಣುವಂತೆ ಬಯಲಾಗಿದೆ. ಮುಖ್ಯವಾಹಿನಿಯ ಮಾಧ್ಯಮಗಳ ಕೆಲವು ವಿಭಾಗಗಳು ಮತ್ತು ಸಾಮಾಜಿಕ ಮಾಧ್ಯಮಗಳ ಇನ್ನೂ ಅನೇಕ ವಿಭಾಗಗಳು ಬಿಜೆಪಿ ಆಡಳಿತದ ಈ ಹಿಂಸಾಚಾರದ ಪಿತೂರಿಯನ್ನು ಬಹಿರಂಗಪಡಿಸಿವೆ ಎಂಬುದು ಸಮಾಧಾನದ  ಸಂಗತಿ.

ಇನ್ನೂ ನಾಲ್ಕು ರೀತಿಗಳಲ್ಲಿ ಮೋದಿ ಮತ್ತು ಶಾ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ದೂಷಣಾರ್ಹವಾಗಿದೆ.

ಮೊದಲನೆಯದಾಗಿ, ಲಕ್ಷಾಂತರ ರೈತರ ಅಭೂತಪೂರ್ವ ರಾಷ್ಟ್ರವ್ಯಾಪಿ ಹೋರಾಟವನ್ನುದಿಲ್ಲಿಯ ಕೊರೆಯುವ ಚಳಿಯಲ್ಲಿ ಎರಡು ತಿಂಗಳ ಕಾಲ ಎಳೆಯುವಂತೆ ಮಾಡಿ ತನ್ನ ದುರಾಗ್ರಹವನ್ನು, ಕಟು ಸಂವೇದನಾಹೀನತೆಯನ್ನು ಮತ್ತು ಅದಕ್ಕಿಂತಲೂ ಹೆಚ್ಚಾಗಿ , ಅಂಬಾನಿ-ಅದಾನಿ ನೇತೃತ್ವದ ಕಾರ್ಪೊರೇಟ್ ಕೂಟಕ್ಕೆ ತನ್ನ ಸಂಪೂರ್ಣ ಻ಡಿಯಾಳುತನವನ್ನು ಬಹಿರಂಗಪಡಿಸಿದೆ. ಈ ಕೂಟದ ಒತ್ತಡದಿಂದಲೇ ಅದು  ಈ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಸಂಹಿತೆಗಳನ್ನು ತಂದಿರುವುದು.

ಎರಡನೆಯದಾಗಿ, 2020 ರ ನವೆಂಬರ್ 26 ರಂದು ದಿಲ್ಲಿ ಪ್ರವೇಶಿಸುವ ಶಾಂತಿಯುತ ಹೋರಾಟ ಪ್ರಾರಂಭವಾದಾಗ ಆಶ್ರುವಾಯು, ಜಲ ಫಿರಂಗಿಗಳು ಮತ್ತು ಲಾಠಿ ಪ್ರಹಾರಗಳ ಮೂಲಕ ತನ್ನದೇ ರೈತರ ವಿರುದ್ಧ ಭಾರಿ ಹಿಂಸಾಚಾರವನ್ನು ಪ್ರಾರಂಭಿಸಿದ್ದು ಹರಿಯಾಣದ ಬಿಜೆಪಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ಕೇಂದ್ರ ಸರ್ಕಾರವೇ.

ಮೂರನೆಯದಾಗಿ, ಧೀರ ರೈತ ಹೋರಾಟವನ್ನು ಖಲಿಸ್ತಾನಿಗಳು, ಮಾವೋವಾದಿಗಳು ಮತ್ತು ನಕ್ಸಲರ ಕೈವಾಡವೆಂದು ಮತ್ತು ಪಾಕಿಸ್ತಾನ ಮತ್ತು ಚೀನಾದ ಏಜೆಂಟರು ಕೂಡ ಎಂದು ಕರೆಯುವ ಮೂಲಕ ಅದಕ್ಕೆ ಅಪಖ್ಯಾತಿ ತರಲು ಮತ್ತು ಮಸಿ ಬಳಿಯಲು ಸತತವಾಗಿ ಪ್ರಯತ್ನಿಸಿದ್ದು ಬಿಜೆಪಿ-ಆರೆಸ್ಸೆಸ್‍ ನ ಉನ್ನತ ನಾಯಕರುಗಳೇ.

ನಾಲ್ಕನೆಯದಾಗಿ, ಗೃಹಮಂತ್ರಿಗಳ ಅಡಿಯಲ್ಲಿರುವ ದಿಲ್ಲಿ ಪೋಲಿಸ್ ರೈತರ ಹೋರಾಟವನ್ನು ಸದೆಬಡೆಯುವುದಕ್ಕಾಗಿ ಹಲವಾರು ರೈತರು ಮತ್ತು ಎಸ್‍.ಕೆ.ಎಂ.ನ ಹಲವಾರು ನಾಯಕರ ವಿರುದ್ಧ 25 ಎಫ್.ಐ.ಆರ್‍ ಗಳನ್ನು ಹಾಕಿದೆ. ರೈತರ ಹೋರಾಟವು ಹಿಂದಿನ ಎಲ್ಲಾ ಪಿತೂರಿಗಳ ಮೇಲೆ ಜಯ ಸಾಧಿಸಿದೆ; ಈ ಬಾರಿಯೂ  ಅದು ಖಂಡಿತವಾಗಿಯೂ ಮತ್ತೆ ಜಯಗಳಿಸುತ್ತದೆ.

ಮುಂದಿನ ದಾರಿ

ಜನವರಿ 27 ರಂದು ನಡೆದ ಸಭೆಯಲ್ಲಿ ಈ ಎಲ್ಲ ಘಟನೆಗಳಿಂದ ಸರಿಯಾದ ತೀರ್ಮಾನಗಳಿಗೆ ಬಂದ ಎಸ್‌.ಕೆ.ಎಂ. ನಾಯಕರು ಅದೇ ದಿನ ಸಂಜೆ ಸಿಂಘು ಗಡಿಯಲ್ಲಿ ಒಂದು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದಿಲ್ಲಿಯ ಸುತ್ತಮುತ್ತಲಿನ ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗಳ ಪ್ರಧಾನವಾಗಿ ಶಾಂತಿಯುತ ಸ್ವರೂಪವನ್ನು ಶ್ಲಾಘಿಸುತ್ತಲೇ, ಎಸ್‍.ಕೆ.ಎಂ. ಬಿಜೆಪಿ ಸರ್ಕಾರ ಮತ್ತು ಪೊಲೀಸರೊಂದಿಗೆ ಶಾಮೀಲಾದ ಕೆಲವರಿಂದ ಉಂಟಾದ ಹಿಂಸಾಚಾರಕ್ಕೂ ತಮಗೂ ಏನೆನೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತು.
ಅಂತವರನ್ನು ಸ್ಪಷ್ಟವಾಗಿ  ಹೆಸರಿಸಿ  ಅವರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿತು.


ಜನವರಿ 26  ಒಂದು ಎಸ್‍.ಕೆ.ಎಂ.ನ ಕರೆಯಾದ್ದರಿಂದ ಅಂದಿನಿಂದ  ಏನೇನಾಯಿತೋ ಅದಕ್ಕೆ  ನೈತಿಕ ಹೊಣೆಗಾರಿಕೆಯನ್ನು ಅದು ಧೈರ್ಯದಿಂದ ಒಪ್ಪಿಕೊಂಡಿತು, ಅದಕ್ಕಾಗಿ ವಿಷಾದ ವ್ಯಕ್ತಪಡಿಸಿತು ಮತ್ತು ಫೆಬ್ರವರಿ 1 ರಂದು ಕೇಂದ್ರ ಬಜೆಟ್‍ ಮಂಡನೆಯ ವೇಳೆಯಲ್ಲಿ ದಿಲ್ಲಿಗೆ ರೈತರ ಮೆರವಣಿಗೆಯನ್ನು ನಡೆಸಬೇಕೆಂದು ನಿಗದಿ ಮಾಡಿದ್ದನ್ನು ಮುಂದೂಡಲು ನಿರ್ಧರಿಸಿತು. ಆದರೆ ಜನವರಿ 30 ರಂದು ಆರ್‌.ಎಸ್‌.ಎಸ್. ನ ನಾಥುರಾಮ್ ಗೋಡ್ಸೆ ಮತ್ತು ಆತನ ಸಹಚರರಿಂದ ಹತ್ಯೆಗೀಡಾದ ಮಹಾತ್ಮ ಗಾಂಧಿಯವರ ಹುತಾತ್ಮ ವಾರ್ಷಿಕಾಚರಣೆಯನ್ನು ದೇಶಾದ್ಯಂತ ಸತ್ಯ, ಶಾಂತಿ ಮತ್ತು ಅಹಿಂಸೆಗಾಗಿ ದೊಡ್ಡ ಸಾರ್ವಜನಿಕ ಸಭೆಗಳು ಮತ್ತು ಒಂದು ದಿನದ ಉಪವಾಸದ ಮೂಲಕ  ನಡೆಸಬೇಕು  ಎಂದು ಕರೆ ನೀಡಿತು.

ಎಲ್ಲಕ್ಕಿಂತ ಮುಖ್ಯವಾಗಿ, ರೈತರ ಹೋರಾಟವು ಅದರ ಬೇಡಿಕೆಗಳನ್ನು ಗೆದ್ದುಕೊಳ್ಳುವ ವರೆಗೂ ದೇಶಾದ್ಯಂತ ಮುಂದುವರಿಯುತ್ತದೆ ಮತ್ತು ತೀವ್ರಗೊಳ್ಳುತ್ತದೆ ಎಂದು ಅದು ಘೋಷಿಸಿತು.

ವ್ಯಂಗ್ಯಚಿತ್ರಕೃಪೆ:  ಸತೀಶ ಆಚಾರ್ಯ, ನ್ಯೂಸ್‍ ಸ್ಟ್ರಿಂಗ್

 

 

Donate Janashakthi Media

Leave a Reply

Your email address will not be published. Required fields are marked *