ಅಮಿತ್ ಶಾ ಗೋ ಭ್ಯಾಕ್ ಘೋಷಣೆ ಮೊಳಗಿಸಿದ ರೈತರು.
ಬೆಳಗಾವಿ ಜ 17: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ. ಕೇಂದ್ರ ಸರಕಾರ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳದೆ ವಿನಾಕಾರಣ ದಿನಗಳನ್ನು ದೂಡುತ್ತಿದೆ. ಮೋದಿ ಸರಕಾರದ ಅಡ್ಡಗೋಡೆಗಳನ್ನು ಒಡೆದು ರೈತರು ಪ್ರತಿಭಟನೆ ನಡುಸುತ್ತಿದ್ದಾರೆ. ಕಾಯ್ದೆ ವಾಪಸ್ಸು ಪಡೆಯುವವರೆಗೂ ಹೋರಾಟ ನಿಲ್ಲದು ಎಂದು ರಾಜ್ಯ ರೈತ ಸಂಘಧ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಹಿರಂಗ ಚರ್ಚೆಗೆ ಬರಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ರೈತರ ಪ್ರತಿಭಟನೆ ನಡೆಸುತ್ತಿದ್ದರು ಈ ವೇಳೆ ಹಲವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಇದು ರೈತ ವಿರೋಧಿ ಸರಕಾರ ಎಂದು ಚೂನಪ್ಪ ಆಪಾಧಿಸಿದ್ದಾರೆ.
ಬೆಳ್ಳಂಬೆಳಿಗ್ಗೆಯೇ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ರೈತ ಮುಖಂಡರು, ಕೇಂದ್ರದ ರೈತ ವಿರೋಧಿ ಧೋರಣೆ ವಿರುದ್ಧ ಧಿಕ್ಕಾರ ಕೂಗಿದರು. ಇಬ್ಬರು ರೈತರು ಅರೆಬೆತ್ತಲೆಯಾಗಿ ಉರುಳುಸೇವೆ ಮಾಡಿದರು. ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
‘ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಚಳವಳಿ ತೀವ್ರಗೊಂಡಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಸಲು ಕ್ರಮ ವಹಿಸಿಲ್ಲ. ರೈತರ ಭವಿಷ್ಯದ ವಿಷಯದಲ್ಲೂ ಸರ್ಕಾರ ಹಟಮಾರಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ವಿವಾದಿತ ಕಾಯ್ದೆಗಳ ಬಗ್ಗೆ ರೈತರಿಗೆ ಹಲವು ಅನುಮಾನ ಮತ್ತು ಗೊಂದಲಗಳಿವೆ. ಅವುಗಳನ್ನು ಅಮಿತ್ ಶಾ ಇಲ್ಲಿಗೆ ಬಂದು, ನಮ್ಮೊಂದಿಗೆ ಸಂವಾದ ನಡೆಸಿ ಬಗೆಹರಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಪ್ರತಿಭಟನೆ ವೇಳೆ ಕೆಲ ರೈತರು ಗೋ ಬ್ಯಾಕ್ ಅಮಿತ್ ಶಾ’ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮುಖಂಡ ಪ್ರಕಾಶ ನಾಯ್ಕ ಮೊದಲಾದವರನ್ನು ಬಂಧಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆಂದು ಮೂಲಗಳು ತಿಳಿಸಿವೆ.