ಹೇಮಂತ ನಿಂಬಾಳ್ಕರ್ ವರ್ಗಾವಣೆ

ಬೆಂಗಳೂರು ಜ 12: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಡಿ.31ರಂದು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರವು, ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಿತ್ತು.

ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಂಬಾಳ್ಕರ್ ಪಾತ್ರದ ಬಗ್ಗೆ ಅಂದಿನ ಗೃಹ ಕಾರ್ಯದರ್ಶಿ ಡಿ.ರೂಪಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇಬ್ಬರೂ ಐಪಿಎಸ್​ ಅಧಿಕಾರಿಗಳ ನಡುವೆ ಹೇಳಿಕೆ-ಪ್ರತಿಹೇಳಿಕೆಗಳು ಕೆಲ ಸಮಯ ಹರಿದಾಡಿದ್ದವು. ನಂತರ ಇಬ್ಬರನ್ನೂ ವರ್ಗಾವಣೆ ಮಾಡಿ ಸರ್ಕಾರ ವಿವಾದಕ್ಕೆ ಇತಿಶ್ರೀ ಹಾಡಲು ಮುಂದಾಗಿತ್ತು.

ರೂಪಾ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮತ್ತು ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಐಜಿಪಿಯನ್ನಾಗಿ ಸರ್ಕಾರ ವರ್ಗಾವಣೆ ಮಾಡಿತ್ತು.

ತಮ್ಮನ್ನು ವರ್ಗಾವಣೆ ಮಾಡಿರುವುಕ್ಕೆ ರೂಪಾ ಬೇಸರ ವ್ಯಕ್ತಪಡಿಸಿದ್ದರು. ‘ಈ ವರ್ಗಾವಣೆಯು ನನ್ನನ್ನೂ, ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ’ ಎಂದು ಆಕ್ಷೇಪಿಸಿದ್ದರು.

ಆಂತರಿಕ ಭದ್ರತೆ ವಿಭಾಗದ ಐಜಿಪಿಯನ್ನಾಗಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿದ ಕೇವಲ 11 ದಿನಗಳಲ್ಲಿ ಮತ್ತೊಮ್ಮೆ ವರ್ಗಾವಣೆ ಮಾಡಲಾಗಿದೆ. ಹೇಮಂತ್ ನಿಂಬಾಳ್ಕರ್ ಅವರ ಸೇವಾರ್ಹತೆಗೆ ಅನುಗುಣವಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿ ಹುದ್ದೆಯನ್ನು ಉನ್ನತೀಕರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *