ಹಿರಿಯ ನಟ ಶನಿಮಹದೇವಪ್ಪ ನಿಧನ

ಬೆಂಗಳೂರು ಜ 03 :  ರಂಗಭೂಮಿ ಮೂಲಕ ನಟನೆ ಆರಂಭಿಸಿ, ಸಿನಿಮಾಗಳ ವೈವಿಧ್ಯಮಯ ಪಾತ್ರಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದ ಹಿರಿಯ ಚಿತ್ರನಟ ಶನಿ ಮಹದೇವಪ್ಪ ನಿಧನರಾಗಿದ್ದಾರೆ.  ಸುಮಾರು ಐದು ದಶಕಗಳ ನಟನಾ ಜೀವನದಲ್ಲಿ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಶನಿಮಹದೇವಪ್ಪರ ಹುಟ್ಟೂರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಹೆಸರಾದರು.

ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು. ‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು.

‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ… ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿಮಹದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಳೆದೊಂದು ವರ್ಷದಿಂದ  ಶನಿಮಹದೇವಪ್ಪ ನವರು ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.  ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *