ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಧರಣಿ ಇಂದು ಹದಿನಾರನೇ ದಿನಕ್ಕೆ ಕಾಲಿಟ್ಟಿದೆ.
ದಲಿತ ಹಕ್ಕುಗಳ ಹೋರಾಟ ಸಮಿತಿ, ದೇವದಾಸಿ ವಿಮೋಚನಾ ಸಂಘಟನೆ ಹಾಗೂ ಮಸಣ ಕಾರ್ಮಿಕರ ಸಂಘಗಳ ಕಾರ್ಯಕರ್ತರು ಭಾಗವಹಿಸಿದ್ದ ಇಂದಿನ ಧರಣಿಯನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯಾಧ್ಯಕ್ಷರಾದ ನಿತ್ಯಾನಂದಸ್ವಾಮಿ ರವರು ಉದ್ಘಾಟಿಸಿದರು.
ಈ ಧರಣಿ ಕುರಿತು ಮಾತನಾಡಿದ ಅವರು ಈಗ ದೇಶದಾದ್ಯಂತ ಎದ್ದಿರುವ ಈ ಚಳುವಳಿಯ ಪ್ರಧಾನ ಪ್ರಶ್ನೆ ಭೂಮಿ, ನಮಗೆ ಪ್ರಗತಿಪರ ಭೂಸುಧಾರಣೆ ಬೇಕು ಆದರೆ ರೈತ ವಿರೋಧಿಯಾದ ತಿದ್ದುಪಡಿಗಳು ಬೇಡ. ದೇಶದ ಪಶ್ಚಿಮ ಬಂಗಾಳ, ಕೇರಳ ಮುಂತಾದ ರಾಜ್ಯಗಳಲ್ಲಿ ನಡೆದ ಭೂಸುಧಾರಣೆಯಿಂದ ಕೆಲವು ದಲಿತರು ಭೂಮಿಯನ್ನು ಪಡೆದಿದ್ದರು.
ಆದರೆ ದಲಿತರ ಶತಮಾನಗಳ ಭೂಮಿಯ ಕನಸನ್ನ ನುಚ್ಚು ನೂರು ಮಾಡಲು ಮೋದಿ ಸರ್ಕಾರ ಹೊರಟಿದೆ. ದಲಿತರು ಭೂಹೀನರು, ದುರ್ಬಲರಾಗಿರುವುದರಿಂದಲೇ ಅವರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಗತ್ಯವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದರೆ ಬಡವರಿಗೆ ಸುಲಭವಾಗಿ ಅಗತ್ಯ ವಸ್ತುಗಳು ರೇಷನ್ ಡಿಪೋಗಳ ಮೂಲಕ ಸಿಗುವುದಿಲ್ಲ. ಇದರಿಂದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಲೂಟಿ ಮಾಡಲು ಅವಕಾಶವಾಗುತ್ತದೆ. ಇಂತಹ ಜನವಿರೋಧಿ ಕಾಯ್ದೆಗಳನ್ನು ಸಂಪೂರ್ಣ ವಾಪಸ್ ಪಡೆಯಬೇಕು ಎಂದು ನಿತ್ಯಾನಂದಸ್ವಾಮಿ ಆಗ್ರಹಿಸಿದರು.
ಇದನ್ನು ಓದಿ : ಹೊಸ ಕೃಷಿ ಕಾಯ್ದೆಗಳು , ರೈತರ ಶಾಶ್ವತ ಕೃಷಿಯನ್ನು ನಾಶಪಡಿಸುತ್ತವೆ : ಬಂಜಗೆರೆ
ಡಿಸೆಂಬರ್ 16 ರಿಂದ ಇವತ್ತಿನ ದಿನದ ವರೆಗೆ ನಿರಂತರವಾಗಿ ನಡೆಯುತ್ತಿರುವ ಈ ಅನಿರ್ದಿಷ್ಟಾವಧಿ ಧರಣಿಯನ್ನು ಇಂದಿಗೆ ಮುಕ್ತಾಯಗೊಳಿಸಿ ಮುಂದಿನ ಹಂತದ ಹೋರಾಟದ ರೂಪು-ರೇಷೆ ಚರ್ಚಿಸಲು ಜನವರಿ 6 ರಂದು ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಗಹಿಸಿ ಬೆಂಬಲಿಸಿರುವ ಎಲ್ಲಾ ಸಂಘಟನೆಗಳ ಮುಖಂಡರುಗಳ ಸಭೆ ನಡೆಯಲಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಜಿ ಸಿ ಬಯ್ಯಾರೆಡ್ಡಿ ತಿಳಿಸಿದ್ದಾರೆ.
ಇಂದಿನ ಪ್ರತಿಭಟನಾ ಧರಣಿ ನೇತೃತ್ವವನ್ನು ದಲಿತ ಹಕ್ಕುಗಳ ಹೋರಾಟ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಸಹ ಸಂಚಾಲಕರಾದ ಬಿ.ರಾಜಶೇಖರ ಮೂರ್ತಿ, ಮಹದೇವ್, ರಾಜಣ್ಣ ದೇವದಾಸಿ ವಿಮೋಚನಾ ಸಂಘಟನೆ ರಾಜ್ಯ ಅಧ್ಯಕ್ಷೆ ಬಿ.ಮಾಳಮ್ಮ. ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜು, ಮುಖಂಡರಾದ ಹೆಚ್ ಆರ್ ನವೀನ್ ಕುಮಾರ್, ಟಿ ಯಶವಂತ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜಿಎಂ ವೀರಸಂಗಯ್ಯ ಕರ್ನಾಟಕ ಜನಶಕ್ತಿ ಸಂಘಟನೆಯ ವರದರಾಜ್, ರವಿ ಮೋಹನ್ ಆರ್ ಕೆ ಎಸ್ ನ ಶಿವಪ್ರಕಾಶ್, ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ.ಭಟ್ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮುಂತಾದವರು ವಹಿಸಿದ್ದರು.