ಬೆಂಗಳೂರು : ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಸ್ಪರ್ಧಿಸಿದ್ದು, ಗೆಲುವಿನ ದಾರಿಯನ್ನು ಕಾಯುತ್ತಿದ್ದಾರೆ ಸಧ್ಯದ ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 7940, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 5586, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 2667 ಸದಸ್ಯರು ಗೆಲುವು ಹೊಂದಿದ್ದಾರೆ. ಇತರರು 2557 ರಲ್ಲಿ ಗೆಲುವು ಸಾಧಿಸಿದ್ದಾರೆ. 82,616 ಸ್ಥಾನಗಳ ಪೈಕಿ 18, 450 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಬ್ಯಾಲೇಟ್ ಪೇಪರ್ ಕೌಂಟಿಂಗ್ ಆದ್ದರಿಂದ ತಡರಾತ್ರಿವರೆಗೂ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹೋರಾಟಗಳ ಮೂಲಕ ಜನರಿಗೆ ನ್ಯಾಯ ಕೊಡಿಸಿ, ಸಾರ್ವಜನಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುವ ಸಂಘಟನೆಗಳ ನಾಯಕರು ಈ ಬಾರಿಯ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. (ಸಂಜೆ 7 ರ ವರೆಗಿನ ಮಾಹಿತ ಪ್ರಕಾರ) ಪೂರ್ಣ ಪ್ರಮಾಣದ ಫಲಿತಾಂಶ ಇನ್ನೂ ಘೊಷಣೆಯಾಗಿಲ್ಲ. ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ್, ಕೊಪ್ಪಳ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಜಿಲ್ಲೆಗಳಲ್ಲಿ 200 ಕ್ಕೂ ಹೆಚ್ಚು ಜನಪರ ಹೋರಾಟಗಾರ ಗೆಲುವು ಸಾಧಿಸಿರುವ ವರದಿ ಲಭ್ಯವಾಗಿದೆ.
CITU ಗದಗ ಜಿಲ್ಲಾ ಸಮಿತಿಯ ಉಪಾಧ್ಯಕ್ಷರು ಗ್ರಾಮ ಪಂಚಾಯತ ನೌಕರರ ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಮಂತೂರರವರು ಬೆಳವಣಿಕಿ ಗ್ರಾಮಪಂಚಾಯತ ಚುನಾವಣೆಯಲ್ಲಿ ಸತತವಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ. ಜನಪರ ಮತ್ತು ಭ್ರಷ್ಟಾಚಾರರಹಿತ ಆಡಳಿತಕ್ಕೆ ಬೆಳವಣಿಕಿ ಗ್ರಾಮದ ಜನತೆ ನಾಲ್ಕನೇ ಬಾರಿ ಗೆಲ್ಲಿಸಿದ್ದಾರೆ ಎಂದು ಅವರು ಪ್ರತಿಕ್ರೀಯಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ವಾಸುದೇವ ರವರು ಚನ್ನರಾಯಪಟ್ಟಣ ತಾಲ್ಲೂಕು ಕಲ್ಕೆರೆ ಗ್ರಾಮ ಪಂಚಾಯತಿ ಸದಸ್ಯರಾಗಿ ಗೆಲುವು ಸಾಧಿಸಿದ್ದಾರೆ. ಅನೇಕ ಯುವಜನ ಹೋರಾಟಗಳ ಮೂಲಕ ಇವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಎಸ್.ಎಫ್.ಐ ನ ರಾಜ್ಯ ಸಮಿತಿ ಸದಸ್ಯರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಡಿವೈಎಫ್ಐ ಮುಖಂಡರಾದ ಭುಜಂಗ ರೈ , ಮಹಾಬಲ T ದೆಪ್ಪಲಿಮಾರ್, ರಾಜೇಶ್ವರಿ ಸೇರಿದಂತೆ 10 ಕ್ಕೂ ಹೆಚ್ಚು ಯುವಜನ ಗೆಲುವನ್ನು ಸಾಧಿಸಿದ್ದಾರೆ.
ರಾಯಚೂರಿನ ಲಿಂಗಸ್ಗೂರ ತಾಲ್ಲೂಕಿನ ಗೆಲ್ಲಲಗಟ್ಟ ಗ್ರಾ.ಪಂ ನ ವಿರಾಪೂರ ವಾರ್ಡ್ ನಲ್ಲಿ ಎಸ್.ಎಫ್.ಐ ರಾಯಚೂರು ಜಿಲ್ಲಾಧ್ಯಕ್ಷ ರಮೇಶ್ ವಿರಾಪೂರ ಗೆಲುವು ಸಾಧಿಸಿದ್ದಾರೆ. ಉಕ ಜಿಲ್ಲೆಯ KPRS ಜಿಲ್ಲಾ ಮುಖಂಡರಾದ ಶ್ಯಾಮನಾಥ್ ರವರು ಗೆಲುವನ್ನು ಸಾಧಿಸಿದ್ದಾರೆ.
ಉತ್ತರ ಕನ್ನಡದ ಜನವಾದಿ ಮಹಿಳಾ ಸಂಘಟನೆಯ ಹಾಗೂ ಸಿಐಟಿಯು ನಾಯಕಾರದ ಮೋಹಿನಿ ಯಾನೆ ಪ್ರಭಾ ಮಡ್ಗಾಂವ್ಕರ್ (ಮೋಹಿನಿ ನಮ್ಸೇಕರ್) ಘೋಟೆಗಾಳಿ ಗ್ರಾಮ ಪಂಚಾಯತಿ ಯ ಭೈರೆ ವಾರ್ಡನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೋಹಿನಿ ತಾಯಿ ಎಂದೇ ಕ್ಷೇತ್ರದಲ್ಲಿ ಮನೆಮನೆಗೂ ಪ್ರಸಿದ್ಧರಾದ ಇವರು ಮೂವತ್ತೈದು ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸಮುದಾಯದ ಸೇವೆ ಸಲ್ಲಿಸಿದ್ದಾರೆ. ಹಳ್ಳಿಯಿಂದ ದೆಹಲಿ ವರೆಗಿನ ಕಾರ್ಮಿಕರ ಚಳುವಳಿಯಲ್ಲಿ, ತಾಲೂಕಿನ ಮತ್ತು ಜಿಲ್ಲೆಯ ರೈತ ಮತ್ತು ಮಹಿಳಾ ಚಳುವಳಿಯಲ್ಲಿ ಇವರು ಮುಂಚೂಣಿ. ಸಿಐಟಿಯು ನ ಜಿಲ್ಲಾ ಪದಾಧಿಕಾರಿಯಾಗಿ, ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಖಜಾಂಚಿಯಾಗಿ, ದುಡಿಯುವ ಮಹಿಳೆಯರ ಸಹ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ. ಯೋಜನಾ ಕಾರ್ಮಿಕರ ದೆಹಲಿ ಮಟ್ಟದಲ್ಲಿ ನಡೆದ ಹತ್ತಾರು ಹೋರಾಟಗಳಿಗೆ ಜಿಲ್ಲೆಯಿಂದ ಸಂಘಟನೆಯ ನಾಯಕತ್ವ ವಹಿಸಿದವರು. ಕಾರವಾರ ಮತ್ತು ಬೆಂಗಳೂರಿನಲ್ಲಿ ನಡೆದ ಅಂಹನವಾಡಿ ನೌಕರರ ಅಹೋರಾತ್ರಿ ಆಂದೋಲನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಉಡುಪಿ ಜಿಲ್ಲೆಯ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ರಾಮಚಂದ್ರ ನಾವಡ್ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಕೂಲಿಕಾರ ಸಂಘಟನೆಯ ಮುಖಂಡರಾದ ರಾಜು ಪಡುಕೋಣೆ ಸಹ ಗೆಲುವನ್ನು ಸಾಧಿಸಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಕೂಲಿಕಾರ ಮತ್ತು ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರು ಇಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳುವಳ್ಳಿಯ ತಳಗವಾದಿಯ ಹತ್ತು ಕ್ಷೇತ್ರಗಳಲ್ಲಿ ಜನಪರ ಹೋರಾಟಗಾರರು ಗೆಲುವನ್ನು ಸಾಧಿಸಿದ್ದಾರೆ. ಹಾವೇರಿಯಲ್ಲಿ ಪತ್ರಕರ್ತ ಹಾಗೂ ಯುವ ಹೋರಾಟಗಾರ ನಿಂಗಪ್ಪ ಆರೇರ್ ಗೆಲುವು ಸಾಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕಿನಲ್ಲಿ ರೈತ- ಕಾರ್ಮಿಕ- ಕೂಲಿಕಾರ ಸಂಘಟನೆಯ 50 ಕ್ಕೂ ಹೆಚ್ಚು ನಾಯಕರು ಗ್ರಾ.ಪಂ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ನಿರಂತರವಾಗಿ ಜನರಿಗೆ ಅಗತ್ಯವಾದ ಸೌಲಭ್ಯ, ಜನರ ಬಗ್ಗೆ ಕಾಳಜಿ ವಹಿಸಿ ಹೋರಾಟ ನಡೆಸಿದ್ದರಿಂದ ಈ ಗ್ರಾ.ಪಂ ಚುನಾವಣೆಯಲ್ಲಿ ಗೆಲುವನ್ನು ಜನರು ನಮಗೆ ನೀಡಿದ್ದಾರೆ ಎಂದು ವಿಜೇತ ಅಭ್ಯರ್ಥಿ ರಘುರಾಂ ರೆಡ್ಡಿ ತಿಳಿಸಿದ್ದಾರೆ. ಪಂಚಾಯತ್ ರಾಜ್ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು, ಗ್ರಾಮಗಳನ್ನು ಬಲಗೊಳಿಸುವುದು, ಸಮರ್ಪಕವಾದ ಸವಲಭ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯ ಎಂದು ಇವರು ಘೊಷಿಸಿಕೊಂಡಿದ್ದಾರೆ.