ಗಾ.ಪಂ ಚುನಾವಣೆ : ಅಭ್ಯರ್ಥಿಗಿಂತ “ಟಾಸ್ ” ಗೆದ್ದದ್ದು ಹೆಚ್ಚು

ಬೆಂಗಳೂರು : ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತ  ಅಭ್ಯರ್ಥಿಗಳು 5344, ಕಾಂಗ್ರೆಸ್  ಬೆಂಬಲಿತ ಅಭ್ಯರ್ಥಿಗಳು 3158, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 1585 ಸದಸ್ಯರು ಗೆಲುವು ಹೊಂದಿದ್ದಾರೆ. ಇತರರು 1245 ರಲ್ಲಿ ಗೆಲುವು ಸಾಧಿಸಿದ್ದಾರೆ.  82,616 ಸ್ಥಾನಗಳ ಪೈಕಿ 17,890 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಬ್ಯಾಲೇಟ್ ಪೇಪರ್ ಕೌಂಟಿಂಗ್ ಆದ್ದರಿಂದ ತಡರಾತ್ರಿವರೆಗೂ ಮತ ಎಣಿಕೆ ನಡೆಯಲಿದೆ. 

ಗ್ರಾ. ಪಂ. ಚುನಾವಣಾ ಫಲಿತಾಂಶದಲ್ಲಿ ಹಲವು ಕ್ಷೇತ್ರಗಳಲ್ಲಿ ಸಮನಾದ ಮತಗಳು ಬಂದ ಹಿನ್ನಲೆಯಲ್ಲಿ ಲಾಟರಿ ಮತ್ತು ಟಾಸ್ ಮೂಲಕ  ವಿಜೇತರನ್ನು ಘೋಷಿಸಲಾಯಿತು. ಅಭ್ಯರ್ಥಿಗಿಂತ ಟಾಸ್ ಗೆಲುವು ಬಹಳ ಕಡೆ ನಡೆದಿದೆ. ಟಾಸ್ ಅಥವಾ ಲಾಟರಿ ನಡೆಸುವಾಗ ಅಭ್ಯರ್ಥಿಗಳ ಎದೆ ಡವಡವ ಅಂದಿದ್ದಂತೂ ನಿಜ. ಮತ ಪಡೆದರೂ ಗೆಲ್ಲಲಾಗಲಿಲ್ಲ  ಎಂದು ಅಭ್ಯರ್ಥಿಗಳು ನಿರಾಸೆಯಾಗಿದ್ದು ಉಂಟು.  ಆ ರೀತೀಯ ಸ್ವಾರಸ್ಯಕರ ಕ್ಷೇತ್ರಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಲಿಂಗತ್ವ ಅಲ್ಪ ಸಂಖ್ಯಾತ ಮಹಿಳೆ ಗೆಲುವು

ಮಂಡ್ಯ ಜಿಲ್ಲೆಯ  ಕೆ.ಆರ್. ಪೇಟೆ ತಾಲ್ಲುಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ ಸರಿಸಮನಾದ ಮತ ಪಡೆದಿದ್ದರಿಂದ ಫಲಿತಾಂಶ ಡ್ರಾ ಆಗಿತ್ತು. ಬಳಿಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲಾಟರಿ ಮೂಲಕ ಜಯ ಸಾಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ 183 ಮತಗಳನ್ನು ಪಡೆದಿದ್ದರು. ಬಳಿಕ ಚುನಾವಣಾ ಅಧಿಕಾರಿಗಳು ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಿದ್ದಾರೆ. ಇದರಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಗೆಲುವು ಸಾಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಶಾನಿ ಗ್ರಾಮದ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಮಹಾಂತೇಶ ಲಾಟರಿ ಬಲದಿಂದ ಗೆಲುವು ಸಾಧಿಸಿದರು. ಮತ ಎಣಿಕೆಯಲ್ಲಿ ಮಹಾಂತೇಶ ಹಾಗೂ ಅವರ ಪ್ರತಿಸ್ಪರ್ಧಿ ಕಳಕಪ್ಪ ಸಮಬಲ (ತಲಾ 88 ಮತಗಳು) ಸಾಧಿಸಿದ್ದರು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಟಾಸ್ ಮೊರೆ ಹೋಗಲಾಯಿತು.  ಟಾಸ್ ಮಹಾಂತೇಶರವರ ಕೈ ಹಿಡಿಯಿತು.

ಇದನ್ನೂ ಓದಿ : ಗ್ರಾ.ಪಂ ಚುನಾವಣೆ ಮತ ಎಣಿಕೆ ಆರಂಭ – ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮುನ್ನಡೆ

ತುಮಕೂರು ಜಿಲ್ಲೆಯ  ತಿಪಟೂರು ತಾಲ್ಲೂಕಿನ ಕರಡಿ ಪಂಚಾಯಿತಿಯ ರಾಮೇನಹಳ್ಳಿ 2 ಕ್ಷೇತ್ರದ ಹಿಂದುಳಿದ ವರ್ಗ- ಬಿ ಅಭ್ಯರ್ಥಿ ಓಂಕಾರಮೂರ್ತಿ ಹಾಗೂ ಪಾಲಕ್ಷಯ್ಯ ನಡುವೆ ಡ್ರಾ ಅಗಿದ್ದು, ಇಬ್ಬರು 194 ಮತಗಳನ್ನು ತೆಗೆದುಕೊಂಡಿದ್ದರು. ನಂತರ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಓಂಕಾರಮೂರ್ತಿ ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.  ಶಿರಾ ತಾಲ್ಲೂಕಿನ ಹೆಂದೊರೆ ಗ್ರಾಮ ಪಂಚಾಯಿತಿಯ ಸಿದ್ದನಹಳ್ಳಿ ಕ್ಷೇತ್ರದಲ್ಲಿ ಗಿರಿಜಮ್ಮ ಅವರಿಗೆ ಲಾಟರಿಯಲ್ಲಿ ಅದೃಷ್ಟ ಒಲಿದು ಬಂತು. ಗಿರಿಜಮ್ಮ ಮತ್ತು ಸುಧಾ ಇಬ್ಬರು ತಲಾ 283 ಮತಗಳನ್ನು ಪಡೆದು ಸಮಬಲ ಸಾಧಿಸಿದಾಗ ನಂತರ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಎರಡನೇ ವಾರ್ಡಿನ ಇಬ್ಬರು ಅಭ್ಯರ್ಥಿಗಳಿಗೆ 311 ಸಮನಾದ ಮತಗಳು ಬಂದ ಕಾರಣ ಟಾಸ್ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಟಾಸ್ ಗೆದ್ದ ಶ್ರೀಶೈಲ ಹಿಪ್ಪರಗಿ ಆಯ್ಕೆಯಾದರು. ಸಮಮತ ಪಡೆದು, ಟಾಸ್ ನಲ್ಲಿ ಸೋತ ಅಭ್ಯರ್ಥಿ ರಾವುತಪ್ಪ ಆಲೂರಗೆ ಸೋಲಾಯಿತು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಡ ಗ್ರಾಮಪಂಚಾಯಿತಿಯ 241 ಮತಗಟ್ಟೆಯಲ್ಲಿ ಅಂಜು ಎಂ. ಮತ್ತು ಬಿ.ಎ.ಕ್ಷಿತಿಜಾ ತಲಾ 375 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದಾರೆ. ಅಂತಿಮವಾಗಿ ಲಾಟರಿ ಮೂಲಕ ಅಂಜು.ಎಂ. ಗೆಲುವು ದಾಖಲಿಸಿದ್ದಾರೆ.

ಚುನಾವಣೆಯಲ್ಲಿ ಹಗಲು ರಾತ್ರಿ ಅಬ್ಬರದ ಪ್ರಚಾರ ನಡೆಸಿ,  ಗೆಲುವಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದೆವು  ಸಮಬಲ ಮತವನ್ನು ಪಡೆದರೂ ಗೆಲುವು ನಮ್ಮದಾಗಿಲ್ಲ. ಚುನಾವಣಾ ನಿಯಮವನ್ನು ಒಪ್ಪಿದ್ದೇವೆ. ಅಧಿಕಾರಿಗಳು ಹೇಳಿದ್ದಕ್ಕೆ ಸಮ್ಮತಿ ಸುಚಿಸಿದ್ದೇವೆ. ಗೆದ್ದು ಸೋತಿರುವುದಕ್ಕೆ ಬೇಸರವಿದೆ. ಆದರೆ ಜನರಿಗೆ ಕೊಟ್ಟ ಭರವಸೆಯಂತೆ ಅಬಿವೃದ್ಧಿ ಕೆಲಸಗಳಿಗಾಗಿ ಶ್ರಮ ಹಾಕುತ್ತೇನೆ.  ಲಾಟರಿಯಲ್ಲಿ ಗೆದ್ದ ಅಭ್ಯರ್ಥಿಗೆ ಸಹಕಾರ ನೀಡುತ್ತೇನೆ ಎಂದು ರಾವೂತಪ್ಪ ಆಲೂರಗೆ ಪ್ರತಿಕ್ರೀಯೆ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *