ಪಾಟ್ನಾ : ಇಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಎ.ಐ.ಕೆ.ಎಸ್.ಸಿ.ಸಿ ನೇತೃತ್ವದಲ್ಲಿ ಗಾಂಧೀ ಮೈದಾನದಿಂದ ಹೊರಟ ರೈತರ ಬೃಹತ್ ಮೆರವಣಿಗೆ ರಾಜಭವನದತ್ತ ಹೋಗದಂತೆ ತಡೆಯಲು ಹಾಕಿದ್ದ ಮೊದಲ ಪೋಲೀಸ್ ಬ್ಯಾರಿಕೇಡನ್ನು ಮುರಿದು ಮುಂದೆ ಸಾಗಿ ಎರಡನೇ ಬ್ಯಾರಿಕೇಡನ್ನು ಸಮೀಪಿಸುತ್ತಿದ್ದಂತೆ ಪೋಲಿಸರು ಲಾಠೀ ಪ್ರಹಾರ ಆರಂಭಿಸಿದರು.
ಮೆರವಣಿಯುಗೆ ಅಲ್ಲೇ ಒಂದು ಬೃಹತ್ ಸಭೆಯಾಗಿ ಪರಿವರ್ತನೆಗೊಂಡಿತು. ಅದನ್ನು ಉದ್ದೇಶಿಸಿ ಎ.ಐ.ಕೆ.ಎಸ್.ಸಿ.ಸಿ, ಯ ಕಾರ್ಯಕಾರೀ ಗುಂಪಿನ ಮೂವರು ಮುಖಂಡರಾದ ಎಐಕೆಎಸ್‍ನ ಅಧ್ಯಕ್ಷ ಅಶೋಕ ಧವಳೆ, ಎಐಕೆಎಂ ಪ್ರಧಾನ ಕಾರ್ಯದರ್ಶಿ ರಾಜಾರಾಂ ಸಿಂಗ್ ಮತ್ತು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ಅಂಜನ್ ಹಾಗೂ ಎ.ಐ.ಕೆ.ಎಸ್.ಸಿ.ಸಿ, ಯ ರಾಜ್ಯ ಮುಖಂಡರು ಮಾತಾಡಿದರು.
ನಂತರ ಎ.ಐ.ಕೆ.ಎಸ್.ಸಿ.ಸಿ. ಯ ಒಂದು ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ರೈತರ ಬೇಡಿಕೆಗಳಿದ್ದ ಮನವಿ ಪತ್ರವನ್ನು ಸಲ್ಲಿಸಿದರು.
ಅಶೋಕ ಧವಳೆ ಯವರು ನಂತರ ಬಿಹಾರ ರಾಜ್ಯ ಕಿಸಾನ್ ಸಭಾ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತಾಡುತ್ತ, ಡಿಸೆಂಬರ 30ರಂದು ಕೇಂದ್ರ ಸರಕಾರ ಮತ್ತೆ ಮಾತುಕತೆಗೆ ಕರೆದಿದೆ, ಅಲ್ಲಿಯೂ ರೈತರ ಪ್ರಮುಖ ಬೇಡಿಕೆಗಳಿಗೆ ಒಪ್ಪದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸಂಯುಕ್ತ ಕಿಸಾನ್ ಮೋರ್ಚಾ ಹೊಸ ವರ್ಷವನ್ನು ದಿಲ್ಲಿಯ ಸುತ್ತಲಿನ ಐದು ಕಡೆಗಳಲ್ಲಿ ಪೋಲೀಸರು ತಡೆದಿರುವುದರಿಂದಾಗಿ ಒಂದು ತಿಂಗಳಿಂದ ಧರಣಿ ನಡೆಸುತ್ತಿರುವ ರೈತರೊಂದಿಗೆ ಆಚರಿಸಬೇಕು ಎಂದು ದಿಲ್ಲಿ ನಿವಾಸಿಗಳಿಗೆ ಕರೆ ನೀಡಿರುವುದಾಗಿಯೂ ಅವರು ತಿಳಿಸಿದರು.