ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಧರಣಿ ಇಂದು ಹದಿನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘದ ರೈತ ಮಹಿಳೆಯರು ಭಾಗವಹಿಸಿದ್ದ ಇಂದಿನ ಧರಣಿಯನ್ನು ಹಿರಿಯ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹೀರೆಮಠ್ ರವರು ಉದ್ಘಾಟಿಸಿ, ದೆಹಲಿ ರೈತರ ಹೋರಾಟ ಇಡೀ ದೇಶದಲ್ಲಿ ರೈತ ಹೋರಾಟದ ಕಿಚ್ಚು ಹಚ್ಚುತ್ತಿದೆ. ಇದು ಮುಂದೆ ವ್ಯಾಪಿಸುವ ಸನ್ನಿವೇಶ ಎಲ್ಲೆಡೆ ಕಾಣುತ್ತಿದೆ. ಬೆಂಗಳೂರಿನ ಇಂದಿನ ಧರಣಿಯಲ್ಲಿ ಮಹಿಳೆಯರು ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆ. ಇತಿಹಾಸ ಸೃಷ್ಟಿಸಿರುವ ಎಲ್ಲಾ ಚಳುವಳಿಗಳ ಮುಂಚೂಣಿಯಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ. ಮಹಿಳೆಯರು ಪಾಲ್ಗೊಂಡ ಎಲ್ಲಾ ಚಳುವಳಿಗಳು ಜಯಗಳಿಸಿವೆ ಎಂದು ಅಭಿಪ್ರಾಯ ಪಟ್ಟರು.
ಮೋದಿ ಸರ್ಕಾರದ ಕೃಷಿ ಕಾನೂನುಗಳು ಹಾಗೂ ಯಡಿಯೂರಪ್ಪ ಸರ್ಕಾರದ ಕೃಷಿ ಕಾನೂನುಗಳು ಮಹಿಳಾ ವಿರೋಧಿ ಯಾಗಿವೆ. ಇಂತಹ ಕರಾಳ ಕಾನೂನುಗಳ ವಿರುದ್ಧ ಹೋರಾಟದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾಜವಾದಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಮಾಜಿ ಉಪಸಭಾಪತಿ ಬಿ.ಆರ್ ಪಾಟೀಲ್ ರವರು ಕೂಡ ಮಾತಾನಾಡಿದರು.
ಇದನ್ನು ಓದಿ :ಅನ್ನದಾತರ ಹೋರಾಟ ಬೆಂಬಲಿಸಿ ಸಾಹಿತಿ, ಕಲಾವಿದರ ಧರಣಿ
ಇಂದಿನ ಪ್ರತಿಭಟನಾ ಧರಣಿ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಜಿಟಿ ರಾಮಸ್ವಾಮಿ, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ ಪಾಟೀಲ್ ಮುಖಂಡರಾದ ವನಶ್ರೀ, ನೇತ್ರಾ, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹ ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್ , ಟಿ ಯಶವಂತ, ನಮ್ಮೂರ ಭೂಮಿ ಅಭಿಯಾನದ ಗಾಯಿತ್ರಿ, ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ.ಭಟ್, ಹೆಚ್ ಎಂ ಕೆ ಪಿ ಯ ಕಾಳಪ್ಪ, ಡಿಎಸ್ ಎಸ್ ನ ವಿ.ನಾಗರಾಜ್, ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್, ಆರ್ ಕೆ ಎಸ್ ನ ಶಿವಪ್ರಕಾಶ್ ಮುಂತಾದವರು ವಹಿಸಿದ್ದರು.