ಡಿಸೆಂಬರ್ ೧೮, ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನ : ಅಲ್ಪಸಂಖ್ಯಾತರ ಹಕ್ಕುಗಳ ದಮನ ನಿಲ್ಲುವುದು ಯಾವಾಗ ?

ಅಲ್ಪಸಂಖ್ಯಾತರ ಹಕ್ಕುಗಳ ದಮನ ನಿಲ್ಲುವುದು ಯಾವಾಗ ?

-ಶಮೀಮಾ ಕೆ.ಪಿ .

 ಡಿಸೆಂಬರ್ ೧೮ ರಂದು ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ದಿನವನ್ನು ಅಚರಿಸಲಾಗುತ್ತಿದೆ. ಡಿಸೆಂಬರ್ ೧೦ರ ಮಾನವ  ಹಕ್ಕುಗಳ  ದಿನಾಚರಣೆಯ ನಂತರದಲ್ಲಿ  ಬರುವ  ಈ ದಿನಾಚರಣೆಯು  ಸದ್ದಿಲದೆ  ಕಳೆದು ಹೋಗುತ್ತದೆ.  ಭಾಷಾ, ಧಾರ್ಮಿಕ,  ವರ್ಣ, ಲೈಂಗಿಕ ಇತ್ಯಾದಿ ಎಲ್ಲ ಅಲ್ಪಸಂಖ್ಯಾತರ ಸ್ಥಾನಮಾನ ಬಗ್ಗೆ ಗಮನಿಸಿ, ಅವರ ಹಕ್ಕುಗಳನ್ನು ರಕ್ಷಿಸಲು  ಪೂರಕವಾಗಿ ಅರಂಭವಾದ್ದುದು ಈ ದಿನ. ಅಂದರೆ ೧೯೯೨ ರ ಡಿಸೆಂಬರ್ ೧೮ ರಂದು   ಧಾರ್ಮಿಕ, ಭಾಷಾ , ರಾಷ್ಟ್ರೀಯ ಮತ್ತು ಜನಾಂಗೀಯ ಅಲ್ಪಸಂಖ್ಯಾತರ  ಹಕ್ಕುಗಳ  ಹೇಳಿಕೆಯನ್ನು ವಿಶ್ವ ಸಂಸ್ಥೆಯಲ್ಲಿ  ಅಂಗಿಕರಿಸಲಾಯಿತು. ಇದರ ಅನ್ವಯ   ಅಲ್ಪ ಸಂಖ್ಯಾತರ ಧಾರ್ಮಿಕ, ಭಾಷಾ,  ಮತ್ತು ರಾಷ್ಟ್ರೀಯ, ಸಾಂಸ್ಕೃತಿಕ  ಐಡೆಂಟಿಟಿಗಳನ್ನು  ಗೌರವಿಸಬೇಕು  ಮತ್ತು  ರಕ್ಷಿಸಬೇಕು ಎಂದಿದೆ.  ಅದರ ವಾಸ್ತವಿಕ ಜಾರಿಯ ಇತಿಹಾಸದ  ಕುರಿತ ಸಂಕ್ಷಿಪ್ತ ನೋಟ ಆಶಾದಾಯಕವಾಗಿಲ್ಲ.

ಜಗತ್ತಿನಾದ್ಯಂತ  ಅಲ್ಪ ಸಂಖ್ಯಾತ  ಹಕ್ಕುಗಳ ಮೇಲೆ ನಿರಂತರವಾಗಿ ದಾಳಿ ದಬ್ಬಾಳಿಕೆ ದೌರ್ಜನ್ಯಗಳು  ಸವiಕಾಲೀನ ಸಂದರ್ಭದಲ್ಲಿ  ಕಾಣಸಿಗುತ್ತವೆ. ಅಲ್ಪಸಂಖ್ಯಾತರೆಂದರೆ  ಜನಾಂಗೀಯ, , ವರ್ಣಿಯ, ಧಾರ್ಮಿಕ, ಭಾಷಾ  ಮತ್ತು ಲೈಂಗಿಕ  ಅಧಾರದಲ್ಲಿ ಸಂಖ್ಯೆಯಲ್ಲಿ ಕಡಿಮೆ ಇರುವ  ಜಗತ್ತಿನಾದ್ಯಂತ ಹರಡಿಕೊಂಡಿರುವ  ಜನ ಸಮುದಾಯಗಳು. ಸ್ವಾಭಾವಿಕ ನ್ಯಾಯದಡಿಯಲ್ಲಿ, ಮಾನವ ಹಕ್ಕುಗಳಡಿಯಲ್ಲಿ, ಅಂತರರಾಷ್ಟ್ರೀಯ ಕಾನೂನು/ಒಡಂಬಡಿಕೆಗಳು ಹಾಗು  ದೇಶಗಳ ಸಂವಿಧಾನದಡಿಯಲ್ಲಿ   ನೀಡಲಾಗಿರುವ  ಹಕ್ಕುಗಳನ್ನು  ಚಲಾಯಿಸಲಾಗದ  ದಯನೀಯ ಸಿತ್ಥಿಯಲ್ಲಿ ಇಂದು  ಅಲ್ಪಸಂಖ್ಯಾತರಿದ್ದಾರೆ ಎಂದರೆ ಅತಿಶಯೋಕ್ತಿಯೆನಲ್ಲ.

ಅಲ್ಪಸಂಖ್ಯಾತರ ಹಕ್ಕು ಭಾದ್ಯತೆಗಳಿಗಾಗಿ ನಾಗರಿಕ ಸಮಾಜದಲ್ಲಿ  ಕಳೆದೆರಡು ಶತಮಾನಗಳಿಂದಲೇ ಚಳುವಳಿಗಳು ನಡೆಯುತ್ತಿರುವುದನ್ನು  ಗುರುತಿಸಬಹುದಾಗಿದೆ.  ಕ್ರಿ. ಶ ೧೮೧೪ ರಲ್ಲಿ ವಿಯೆನ್ನಾ ಕಾಂಗ್ರೇಸ್ ನಲ್ಲಿ  ಜರ್ಮನಿಯ ಅಲ್ಪ ಸಂಖ್ಯಾತರಾದ ಯಹೂದಿಗಳು ಮತ್ತು ಪೋಲಾಂಡ್ ನಾಗರೀಕರ  ಹಕ್ಕುಗಳ ಬಗ್ಗೆ  ಚರ್ಚಿಸಲಾಗಿತ್ತು.  ಈ ಕಾಂಗ್ರೇಸ್ ಪ್ರಷ್ಯಾ, ರಷ್ಯಾ,  ಆಸ್ಟ್ರಿಯಾ ಮುಂತಾದ ರಾಷ್ಟçಗಳಲ್ಲಿ  ಅಲ್ಪಸಂಖ್ಯಾತರ  ಹಕ್ಕುಗಳನ್ನು ರಕ್ಷಿಸಬಹುದೆಂಬ ಆಶಯವನ್ನು  ವ್ಯಕ್ತಪಡಿಸಿತ್ತು. ಆದರೂ  ಅಲ್ಲಿನ ಅಳರಸರು ಈ ಅಶಯಗಳನ್ನು  ಧಿಕ್ಕರಿಸಿ ಮತ್ತಷ್ಟು ವ್ಯವಸ್ಥಿತವಾಗಿ ತಾರತಮ್ಯಗಳನ್ನು  ಮುಂದುವರಿಸಿದರು.

ಹೀಗೆ  ಇತಿಹಾಸದ  ಪುಟಗಳನ್ನು  ಅವಲೋಕಿಸುತ್ತಾ ಹೋದಲ್ಲಿ  ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿ ದಬ್ಭಾಳಿಕೆಗಳು ಮುಂದುವರಿದಿರುವುದು ಮತ್ತು ಅ ಕುರಿತು ಚರ್ಚೆ, ಪ್ರತಿರೋಧಗಳು ಬೆಳೆದಿರುವುದನ್ನು  ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಕ್ರಿ. ಶ. ೧೮೪೪ ರಲ್ಲಿ  ಪ್ರಥಮಬಾರಿಗೆ ಹಂಗೇರಿಯ ಪಾರ್ಲಿಮೆಂಟ್ ಅಲ್ಪ ಸಂಖ್ಯಾತರ ಹಕ್ಕುಗಳಿಗೆ ಮನ್ನಣೆ ನೀಡಿತು. ಕ್ರಿ.ಶ.೧೮೬೭ ರಲ್ಲಿ  ಆಸ್ಟ್ರಿಯ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸಂಹಿತೆಗಳನ್ನು  ರಚಿಸಲಾಯಿತು.

16 Apr 1945, Buchenwald Concentration Camp, Buchenwald, Germany

ಈ ನಡುವೆ ಪ್ರಥಮ ಜಾಗತಿಕ ಮಹಾಯುದ್ದದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ  ಅಲ್ಪಸಂಖ್ಯಾತರ ಸಂರಕ್ಷಣೆಯ ವಿಚಾರವು ಚರ್ಚೆಗೆ ಬಂದು ವರ್ಸೆಲ್ ಶಾಂತಿ ಸಮ್ಮೇಳನದ  ಉನ್ನತ ಸಮಿತಿಯು  ‘’ದ ಕಮಿಟಿ  ಆನ್  ನ್ಯೂ ಸ್ಟೇಟ್ಸ್ & ಫೋರ್ ದ ಪ್ರೋಟಕ್ಷನ್ ಆಫ್ ಮೈನಾರಿಟಿಸ’  ಅನ್ನು ಸ್ಥಾಪಿಸಲಾಯಿತು. ಇದರ ಭಾಗವಾಗಿ ಎಲ್ಲಾ ಸದಸ್ಯ ದೇಶಗಳು ಕೂಡ  ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಘೋಷಣೆ ನೀಡುವ ರಾಜ ತಾಂತ್ರಿಕ ಅನಿವಾರ್ಯತೆಗೆ ಒಳಗಾದವು.

ಎರಡನೇ  ಜಾಗತಿಕ ಮಹಾ ಯುದ್ದದ ಸುತ್ತ ಮುತ್ತ  ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್  ತನ್ನ ರಾಜಕೀಯ  ವೈರಿಗಳಿಗೆ  ಹಾಗು ಅಲ್ಪ ಸಂಖ್ಯಾತರ ಮೇಲೆ ನಡೆಸಿದ ಅಮಾನವೀಯ, ರಾಕ್ಷಸಿಯ ದಾಳಿಗಳು ಇಂದು ಸಹ  ಇತಿಹಾಸದ  ಪುಟಗಳಲ್ಲಿ  ರಕ್ತಸಿಕ್ತವಾದ ಅಧ್ಯಾಯಗಳಾಗಿ ಉಳಿದಿವೆ.  ರಷ್ಯದ ಕೆಂಪು ಸೇನೆ  ಹಿಟ್ಟರ್  ಸೃಷ್ಟಿಸಬಹುದಾದ  ಮತ್ತಷ್ಟು ನರಕಯಾತನೆಗಳನ್ನು  ತಡೆಯದೆ ಹೋಗಿದ್ದಲ್ಲಿ  ಜಗತ್ತಿನ ಲಕ್ಷಗಟ್ಟಲೆ  ಅಮಾಯಕರು  ಬಲಿಯಾಗುತ್ತಿದ್ದರು. ೨ನೇ ಮಹಾ ಯುದ್ದದ ನಂತರದಲ್ಲಿ  ಅಲ್ಪಸಂಖ್ಯಾತರ ಹಕ್ಕುಗಳು  ಅಂತರರಾಷ್ಟ್ರೀಯ  ಮಾನವ ಹಕ್ಕುಗಳ  ಒಡಂಬಡಿಕೆಯ ಭಾಗವಾದ ಕಾರಣ ಈ  ಹಕ್ಕುಗಳಿಗೆ  ಜಾಗತಿಕ ಮಾನ್ಯತೆ  ದೊರೆಯುವಂತಾಯಿತು.

ಈ ಹಿನ್ನೆಲೆಯಲ್ಲಿ ವಿವಿಧ ಅಲ್ಪಸಂಖ್ಯಾತರ ಹಕ್ಕುಗಳ ಅಂತರರಾಷ್ಟ್ರೀಯ ಕಾನೂನುಗಳ ಉಗಮಕ್ಕೆ  ದಾರಿಯಾಯಿತು. ಧಾರ್ಮಿಕ, ಭಾಷಿಕ, ಜನಾಂಗೀಯ ಹಾಗು  ಮೂಲನಿವಾಸಿಗಳ ಹಕ್ಕುಗಳನ್ನು ಸಹ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಭಾಗವಾಗಿ ಪರಿಗಣಿಸ ಬೇಕಾಗಿದೆ. ಮಕ್ಕಳು, ಮಹಿಳೆಯರು, ನಿರಾಶ್ರಿತರ ಹಕ್ಕುಗಳು, ಹಾಗು ಅಲ್ಪಸಂಖ್ಯಾತರ ಹಕ್ಕುಗಳು, ದುರ್ಬಲ ಜನ ಸಮುದಾಯಗಳು  ಮತ್ತು ಸಮಾಜದಂಚಿನಲ್ಲಿರುವವರ ರಕ್ಷಣೆಗೆ  ಹಾಗು ಜನಾಂಗೀಯ ಹತ್ಯೆಗಳ ತಡೆಗೆ  ಅಂತರರಾಷ್ಟ್ರೀಯ ಕಾನೂನಿನ ಚೌಕಟ್ಟು ರೂಪಗೊಳ್ಳಲು ೨೦ನೇ  ಶತಮಾನದಲ್ಲಿ  ಸಾಧ್ಯವಾಯಿತು.

ನಾಗರಿಕ ಹಾಗು ರಾಜಕೀಯ ಹಕ್ಕುಗಳ  ಕುರಿತು  ಅಂತರರಾಷ್ಟ್ರೀಯ ಒಡಂಬಡಿಕೆಗಳು ೧೯೪೮ ರಲ್ಲಿ   ಅಂಗೀಕರಿಸಲಾದ ‘’ಸಾರ್ವತ್ರಿಕ ಮಾನವ ಹಕ್ಕುಗಳ  ಘೋಷಣೆ”ಯ ಭಾಗವಾಗಿರುವುದರಿಂದ ಜಗತ್ತಿನ  ಬಹುತೇಕ ರಾಷ್ಟ್ರಗಳ ಮೇಲೆ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆಯ ಒತ್ತಡ ಉಂಟಾಯಿತು.

ಭಾರತದಲ್ಲಿ  ಅಲ್ಪಸಂಖ್ಯಾತರು: ಭಾರತದಲ್ಲಿ ವಿಭಿನ್ನ  ಅಲ್ಪಸಂಖ್ಯಾತರಿದ್ದಾರೆ. ಅದರೆ ಧಾರ್ಮಿಕ ಅಲ್ಪಸಂಖ್ಯಾತರ    ಹಕ್ಕುಗಳ ದಮನವೇ  ಪ್ರಧಾನ ಸ್ಥಾನ ಪಡೆಯುತ್ತದೆ. ದೇಶದ ಜನಸಂಖ್ಯೆಯ ೧೫%  ಧಾರ್ಮಿಕ ಅಲ್ಪಸಂಖ್ಯಾತರು ಇದ್ದಾರೆ. ಮುಸ್ಲಿಮರು, ಬೌದ್ದರು, ಜೈನರು, ಸಿಖ್ಕರು, ಕ್ರೈಸ್ತ ರು, ಝೋರಾಷ್ಟ್ರೀಯರನ್ನು  ಧಾರ್ಮಿಕ ಅಲ್ಪಸಂಖ್ಯಾತರು ಎಂದು ಗುರುತಿಸಲಾಗಿದೆ.  ಭಾರತದ ಸಂವಿಧಾನವು  ದೇಶದ  ಎಲ್ಲಾ ನಾಗರೀಕರಿಗೆ ಸಮಾನ  ಹಕ್ಕುಗಳನ್ನು ನೀಡಿದೆ. ಆದರೂ  ಸಂವಿಧಾನ ಸಮರ್ಪಿಸಿಕೊಂಡು  ೭೧ ವರ್ಷಗಳು ಸಂದರೂ ಸಂವಿಧಾನಿಕ ಅಶಯಗಳನ್ನು  ಜಾರಿಗೆ  ತರುವಲ್ಲಿ ಕೊರತೆಗಳು ಸಾಕಷ್ಟಿವೆ. ಸಂವಿಧಾನದ ೧೫ನೇ  ವಿಧಿಯು  ‘’ದೇಶದ   ಯಾವುದೇ ನಾಗರಿಕರ ನಡುವೆ  ತಾರತಮ್ಯವನ್ನು ಮಾಡುವಂತಿಲ್ಲ.’’ ಅಂದರೆ  ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಂತೆ  ‘’ಸರ್ವರಿಗೂ ಸಮಪಾಲು. ಸರ್ವರಿಗೂ ಸಮ ಬಾಳು’ ಎನ್ನುವುದನ್ನು ಸರ್ಕಾರ ಖಾತ್ರಿ ಪಡಿಸಬೇಕಾಗಿದೆ,  ಅದರೆ ಆಳುವ ಸರಕಾರಗಳು ಸಹ ಧಾರ್ಮಿಕ ಅಲ್ಪಸಂಖಾತ್ಯರ,  ಮಹಿಳೆಯರ, ಮಕ್ಕಳ, ದಲಿತರ, ಆದಿವಾಸಿಗಳ ಮೇಲೆ ನಿರಂತರ  ತಾರತಮ್ಯಗಳು, ದಾಳಿ ದಬ್ಬಾಳಿಕೆಗಳನ್ನು ನಡೆಯುತ್ತಿವೆ.

ಈ  ದಾಳಿಗಳನ್ನು   ವಿಶ್ಲೇಷಣೆಗೆ ಒಳಪಡಿಸಿದಲ್ಲಿ   ಅದರ ಹಿಂದೆ   ರಾಜಕೀಯ  ಹಿತಾಸಕ್ತಿಗಾಗಿ   ಸಂವಿಧಾನವನ್ನು  ಗಾಳಿಗೆ ತೂರಿ  ಜನತೆಯನ್ನು  ಧರ್ಮಾಧಾರಿತವಾಗಿ ವಿಭಜನೆ ಮಾಡಲು , ಹಸಿ ಹಸಿ ಸುಳ್ಳುಗಳನ್ನು ಪ್ರಚಾರಮಾಡಿ, ಈ  ಜನ ಸಮುದಾಯಗಳ ಮೇಲೆ ನಿರಂತವಾಗಿ ದಾಳಿಗಳು ನಡೆಸುತ್ತಿವೆ ಎಂಬುದು ಸಾಬೀತಾಗುತ್ತದೆ. ಓರಿಸ್ಸಾದ ಕ್ರೈಸ್ತ ಪಾದ್ರಿಯನ್ನು ಜೀವಂತವಾಗಿ  ಸುಟ್ಟ ಘಟನೆಯಿಂದ ಅರಂಭಿಸಿ ಅಕ್ಲಾಖ್ ನ   ಸಾವಿನ ತನಕ  ಸಾವಿರಾರು ಅಮಾಯಕ  ಜೀವಗಳನ್ನು   ಬಲಿ ಪಡೆಯಲಾಗಿದೆ. ದೇಶದಲ್ಲಿ  ಈಗಲೂ ಅಲ್ಪಸಂಖ್ಯಾತರು  ಗುರುತಿಸುವಿಕೆ [ಐಡೆಂಟಿಟಿ], ರಕ್ಷಣೆ [ಸೆಕ್ಯೂರಿಟಿ], ಸಮಾನತೆ  [ಇಕ್ವಾಲಿಟಿ]  ಪಡೆಯುವಲ್ಲಿನ ಸಮಸ್ಯೆಗಳಿಂದ ಬಳಲುತಿದ್ದ್ದಾರೆ.

ದೇಶದ  ಸಂವಿಧಾನವು  ಧಾರ್ಮಿಕ ಆಚರಣೆಯ, ಆಯ್ಕೆಯ ಸ್ವಾತಂತ್ರವನ್ನು  ನೀಡಿದೆ.  ಅದರೂ  ಅಲ್ಪಸಂಖ್ಯಾತರ ಅಚರಣೆಗಳು, ನಂಬಿಕೆಗಳ  ನೆಪದಲ್ಲಿ ಪದೇ ಪದೇ   ಸ್ಥಾಪಿತ   ರಾಜಕೀಯ ಹಿತಾಸಕ್ತ ಗುಂಪುಗಳಿಂದ ದಾಳಿಗೆ  ಒಳಗಾಗುತ್ತಿವೆ.  ಅಲ್ಪಸಂಖ್ಯಾತರಿಂದ ತಾವು  ಮಾಡದ  ತಪ್ಪಿಗೆ  ಉತ್ತರದಾಯಿತ್ವ ಬಯಸುವ ಮನಸ್ಥಿತಿಯನ್ನು ಈ ಗುಂಪುಗಳು ಹೊಂದಿವೆ. ಆಹಾರದ ಹಕ್ಕು, ಪ್ರತಿರೋಧ ತೋರುವ ಹಕ್ಕು,  ವೃತ್ತಿ ಅಯ್ಕೆಯ ಹಕ್ಕು, ಅಭಿವ್ಯಕ್ತಿಯ ಹಕ್ಕುಗಳು ಸಹ  ಈ  ಮನಸ್ಥಿತಿಯ ಗುಂಪುಗಳಿಂದ ದಮನಕ್ಕೆ  ಒಳಗಾಗುತ್ತಿವೆ.

ಮಾನವ ಹಕ್ಕುಗಳ ಮೇಲಿನ ಪ್ರಭುತ್ವ ಪ್ರಯೋಜಿತವಾದ ದಾಳಿಗಳು  ಹೆಚ್ಚುತ್ತಿವೆ, ಹಾಗು ಈ ಸಂವಿಧಾನಬಾಹಿರ ನಡೆಗಳು ಇರುವ  ಗುಂಪುಗಳ ರಕ್ಷಣೆಗೆ ಸರ್ಕಾರಗಳು  ನಿಲ್ಲುತ್ತಿವೆ. ನ್ಯಾಯಾಂಗಕ್ಕೆ  ಸಕಲ ಗೌರವಗಳನ್ನು ನೀಡುತ್ತಲೆ   ನ್ಯಾಯಾಂಗವು   ಇಂದು  ಇದರ ಪ್ರಭಾವಲಯದ ಹೊರಗುಳಿದಿದೆಯೇ  ಎಂದು ಪ್ರಶ್ನಿಸುವಂತಾಗಿದೆ.

ಅಲ್ಪಸಂಖ್ಯಾತರ ಹಕ್ಕುಗಳು  ಮಾನವ ಹಕ್ಕುಗಳ ಭಾಗ ಎಂದು  ಸಮಾಜ  ಪರಿಭಾವಿಸಿ ಅದರ   ರಕ್ಷಣೆಗೆ ನಿಲ್ಲದೆ  ಒಟ್ಟಾರೆ ಸಮಾಜವು ಶಾಂತಿ – ಸೌಹಾರ್ಧತೆ, ಬ್ರಾತೃತ್ವ, ಸಹಬಾಳ್ವೆಗಳಿಲ್ಲದೆ  ನಲುಗಿಹೋಗುತ್ತದೆ,  ನಾಗರಿಕ ಸಮಾಜ  ಈ ನಿಟ್ಟಿನಲ್ಲಿ ಎಚ್ಚೆತ್ತು ಕೊಳ್ಳಬೇಕಾಗಿದೆ.

 

Donate Janashakthi Media

Leave a Reply

Your email address will not be published. Required fields are marked *