ಕರ್ಷಕ ಸಮುದಾಯವನ್ನು ವಿಭಜಿಸಲಿಕ್ಕಾಗಿಯೇ ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರಯತ್ನ

ಸೆಪ್ಟೆಂಬರ್ 2020 ರಲ್ಲಿ ಇತರ ಎಂಟು ಸಂಸದೀಯ ಸಮಿತಿಗಳನ್ನು ಕೇಂದ್ರವು ಪುನರ್ರಚಿದರೂ, ಒಬಿಸಿಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿಯ ಪುನರ್ರಚನೆಯನ್ನು ಕೈಗೊಳ್ಳಲಿಲ್ಲ. ಇದು ಒಂದು ಅಕಸ್ಮಾತ್ತಾಗಿ ಆಗಿರುವಂತದ್ದು ಎಂದು ಭಾವಿಸುವಂತಿಲ್ಲ. ಕೇಂದ್ರ ಸರಕಾರದ ಕೃಷಿಕಾಯ್ದೆಗಳ ವಿರುದ್ಧ, ವಿಶೇಷವಾಗಿ ಹಿಂದಿ ಭಾಷಿಕ ಪ್ರದೇಶದಾದ್ಯಂತ ಭುಗಿಲೆದ್ದಿರುವ ರೈತ ಆಕ್ರೋಶದ ಹಿನ್ನೆಲೆಯಲ್ಲಿ ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರಯತ್ನವು ಮುಂದಿನ ದಿನಗಳಲ್ಲಿ ವಿವಿಧ ಒಬಿಸಿ ಸಮುದಾಯಗಳನ್ನು ಪರಸ್ಪರರ ವಿರುದ್ಧ ನಿಲ್ಲಿಸುತ್ತದೆ. ಅಂತಿಮವಾಗಿ ಇದು ಕರ್ಷಕ ಪ್ರತಿಭಟನೆಯನ್ನು ದುರ್ಬಲಗೊಳಿಸುತ್ತದೆ ಎಂದು ಬಿಜೆಪಿ ಯೋಚಿಸುತ್ತಿರುವಂತಿದೆ ಎನ್ನುತ್ತಾರೆ ಅಖಿಲ ಭಾರತ ಕಿಸಾನ್‍ ಸಭಾದ ಮುಖಂಡರೂ, ಸಿಪಿಐ(ಎಂ) ಸಂಸತ್‍ ಸದಸ್ಯರೂ ಆಗಿರುವ ಲೇಖಕ ಕೆ.ಕೆ.ರಾಗೇಶ್.

 ಈಗ, ಪೌರತ್ವ ತಿದ್ದುಪಡಿ ಮಸೂದೆ 2020 ಮತ್ತು ಕೃಷಿ ಮಸೂದೆಗಳು ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಾಯೋಜನೆ ಮತ್ತು ಸೌಕರ್ಯ) ಮಸೂದೆ, 2020 ಮತ್ತು ಬೆಲೆ ಆಶ್ವಾಸನೆ ಮತ್ತು ಬೇಸಾಯ ಸೇವೆಗಳ ಮೇಲೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆ, 2020 ರ ನಂತರ ಬಿಜೆಪಿ ಮತ್ತು ಸಂಘ ಪರಿವಾರದವರ ಗುರಿ ಏನು?  ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಕಲ್ಯಾಣದ ಸಂಸದೀಯ ಸಮಿತಿಯನ್ನು ಪುನರ್ರಚಿಸಲು ಕೇಂದ್ರದ ವಿಳಂಬವು ಯಾವ ಸುಳಿವುಗಳನ್ನು ನೀಡುತ್ತದೆ ?

ಕೆನೆಪದರವನ್ನು ಲೆಕ್ಕ ಹಾಕಲು ವೇತನವನ್ನು ಒಂದು ಅಂಶವಾಗಿ ಸೇರಿಸುವ ಪ್ರಯತ್ನಗಳು ಮತ್ತು ಕೇಂದ್ರ ಸೇವೆಗಳಿಗಾಗಿ ಒಬಿಸಿಗಳ ಉಪ-ವರ್ಗೀಕರಣದ ಮೆಲೆ ರಾಜಕೀಯ ಹಗೆ ಸಾಧನೆಯ ಪ್ರಯತ್ನಗಳು ಲೆಕ್ಕಾಚಾರ ಮಾಡಲು ವೇತನವನ್ನು ಒಂದು ಅಂಶವಾಗಿ ಸೇರಿಸುವ ಪ್ರಯತ್ನಗಳು, ಮೀಸಲಾತಿಯ ಸಂದರ್ಭದಲ್ಲಿ  ಏನನ್ನಾದರೂ ಹೇಳುತ್ತಿವೆಯೇ?

ಏಕೆಂದರೆ,  ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಾಯೋಜನೆ ಮತ್ತು ಸೌಕರ್ಯ)  ಮತ್ತು ಬೆಲೆ ಆಶ್ವಾಸನೆ ಮತ್ತು ಬೇಸಾಯ ಸೇವೆಗಳ ಮೇಲೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆಗಳನ್ನು ಶಾಸನಗಳಾಗಿ ಮಾಡಿದ ಮೆಲೆ ದೇಶದಲ್ಲಿ ಕರ್ಷಕ ಅಸಂತೃಪ್ತಿ,  ಬಲವಾಗಿ ಕೇಂದ್ರದ ವಿರುದ್ಧ ಹೊರಹೊಮ್ಮಿದೆ.   ಹಿಂದಿ ಹೃದಯಭೂಮಿಯಲ್ಲಿನ ಕೃಷಿ ಸಮುದಾಯದ ಹೆಚ್ಚಿನ ಭಾಗವು ಒಬಿಸಿ ಸಮುದಾಯಗಳಿಗೆ ಸೇರಿದೆ.  ಇಲ್ಲಿ, ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರ ಯತ್ನವು ಮುಂದಿನ ದಿನಗಳಲ್ಲಿ ವಿವಿಧ ಒಬಿಸಿ ಸಮುದಾಯಗಳನ್ನು ಪರಸ್ಪರರ ವಿರುದ್ಧ ನಿಲ್ಲಿಸುತ್ತದೆ ಎಂದು ಬಿಜೆಪಿ ಭಾವಿಸಿದೆ.  ಈ ಪ್ರಕ್ರಿಯೆಯಲ್ಲಿ, ಪಕ್ಷವು ಒಬಿಸಿಗಳ ಒಂದು ಭಾಗವನ್ನು “ಅತ್ಯಂತ ಅಂಚಿಗೆ ತಲ್ಲಲ್ಪಟ್ಟವರನ್ನು ಉದ್ದೇಶಿತವಾದ ಮೀಸಲಾತಿ “ಯ ನೆಪದಲ್ಲಿ ಒಲಿಸಿಕೊಳ್ಳುವ ಮತ್ತು ಮೌನಗೊಳಿಸುವ ಗುರಿಯನ್ನು ಹೊಂದಿದೆ. ಇದು ಅಂತಿಮವಾಗಿ ಕರ್ಷಕ ಪ್ರತಿಭಟನೆಯನ್ನು ದುರ್ಬಲಗೊಳಿಸುತ್ತದೆ.

ಒಬಿಸಿಗಳ ಕಲ್ಯಾಣದ ಕುರಿತ ಸಮಿತಿಯ ಪುನರ್ರಚನೆಯ ನಿರ್ಧಾರವು ದೇಶದಲ್ಲಿ ಒಬಿಸಿಗಳ ಬೃಹತ್ಜನಸಂಖ್ಯೆಯ, ವಿಶೇಷವಾಗಿ ಅವರಲ್ಲಿರುವ ಯುವಕರ ಆಕಾಂಕ್ಷೆಗಳಿಗೆ ಹಾನಿಕಾರಕವಾಗಿದೆ.  ಸಮಿತಿಯು “ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ಪಡೆಯಲು ಕೇಂದ್ರ ಸರ್ಕಾರವು ಕೈಗೊಂಡ ಕ್ರಮಗಳನ್ನು ಪರಿಶೀಲಿಸುವ” ಆದೇಶವನ್ನು ಹೊಂದಿದೆ.  ಆದ್ದರಿಂದ ಈ ಸಮಿತಿಯ ಅನುಪಸ್ಥಿತಿಯು ಸಂಘಪರಿವಾರದ ಮೀಸಲಾತಿ ವಿರೋಧಿ ಚಾಳಿಯನ್ನು ಒಳಗೆ ತುರುಕಿಸಿ ಪ್ರತಿಪಾದಿಸಲು ಕೇಂದ್ರವು ಶೀಘ್ರದಲ್ಲೇ, ಎಲ್ಲಾ ಅಂಗೀಕೃತ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಮೂಲೆಗೊತ್ತಿ, ತನ್ನ ರಾಜಕೀಯ ಕಾರ್ಯಸೂಚಿಯನ್ನು ಬಲಪಡಿಸಲು ಮುಂದಾಗಬಹುದೆಂಬ ಅನುಮಾನವನ್ನು ಹುಟ್ಟುಹಾಕುತ್ತದೆ!

ಒಬಿಸಿಗಳನ್ನು ಕುರಿತಾದ ಸಂಸದೀಯ ಸಮಿತಿಯನ್ನು ರಚಿಸುವ ನಿಯಮಗಳು “ಸಮಿತಿಯ ಸದಸ್ಯರು ಮೊದಲ ಸಭೆಯ ದಿನಾಂಕದಿಂದ ಒಂದು ವರ್ಷದ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ, ಅದನ್ನು ನಂತರ ಒಂದು ಸಮಯದಲ್ಲಿ ಒಂದು ವರ್ಷದವರೆಗೆ ಪುನರ್ರಚಿಸಲಾಗುವುದು” ಎಂದು ನಿರೂಪಿಸಿವೆ.  ಸೆಪ್ಟೆಂಬರ್ 2020 ರಲ್ಲಿ ಇತರ ಎಂಟು ಸಮಿತಿಗಳನ್ನು ಕೇಂದ್ರವು ಪುನರ್ರಚಿದರೂ, ಒಬಿಸಿಗಳ ಸಮಿತಿಯ ಪುನರ್ರಚನೆಯನ್ನು ಕೈ ಬಿಡುವ ನಿರ್ಧಾರವು ಅನುಮಾನಾಸ್ಪದವಾಗಿತ್ತು. ಈ ಸಮಿತಿಯ ಪುನರ್ರಚನೆ ಮಾಡದಿರುವುದು ಒಂದು ಅಕಸ್ಮಾತ್ತಾಗಿ ಕೈಗೊಂಡ ‍ಕ್ರಮ ಎಂದು ಭಾವಿಸಲಾಗುತ್ತಿಲ್ಲ. ಏಕೆಂದರೆ, ಒಬಿಸಿಗಳ ಹಿಂದಿನ ಸಮಿತಿಯು ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸುವುದರ ವಿರುದ್ಧ ಬಲವಾದ ನಿಲುವು ತಳೆದು ಬಿಜೆಪಿ ನಾಯಕತ್ವದ ಕೆಂಗಣ್ಣಿಗೆ ಕಾರಣವಾಗಿತ್ತು.

ಒಬಿಸಿಗಳ ಕುರಿತ ಸಮಿತಿಯು, 2019ರ ಫೆಬ್ರವರಿಯಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ, 1997 ರಿಂದ ಆದಾಯ ಮಾನದಂಡಗಳ ನಾಲ್ಕು ಪರಿಷ್ಕರಣೆಗಳ ಹೊರತಾಗಿಯೂ, ಒಬಿಸಿಗಳಿಗೆ ಕಾಯ್ದಿರಿಸಲಾಗಿರುವ 27 ಶೇಕಡಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿಲ್ಲ ಎಂದಿತ್ತು. ಸಮಿತಿಯ ವರದಿಯ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದ ಉಚ್ಚತಮ ಗುಂಪಾದ ‘ಎ’ಗ್ರೂಪಿನಲ್ಲಿ, ಕೇವಲ 13 ಶೇಕಡಾ ಒಬಿಸಿಗಳಿದ್ದಾರೆ.  ಗ್ರೂಪ್ ಎ, ಬಿ, ಸಿ ಅನ್ನು ಒಳಗೊಂಡಿರುವ 32.58 ಲಕ್ಷ ಸರ್ಕಾರಿ ನೌಕರರಲ್ಲಿ ಒಬಿಸಿಗಳಿಂದ ಬಂದವರ ಸಂಖ್ಯೆ 7 ಲಕ್ಷ ಅಥವಾ 27 ಶೇ. ಕೋಟಾದ ಪ್ರತಿಯಾಗಿ 21 ಶೇಕಡಾ ಎಂದು ವಿವಿಧ ಅಂದಾಜುಗಳು ತೋರಿಸುತ್ತವೆ.  ಗ್ರೂಪ್  ಸಿ  ಯಲ್ಲಿ ಒಬಿಸಿಗಳ ಪ್ರಮಾಣ ಗರಿಷ್ಟವಿದ್ದು (6.4 ಲಕ್ಷ ಅಥವಾ ಶೇಕಡಾ 22.65), ಇವರು ಮುಖ್ಯವಾಗಿ ಸಫಾಯಿ ಕರ್ಮಚಾರಿಗಳು ಅಥವಾ ನೈರ್ಮಲ್ಯ ವಿಭಾಗದ ಸಿಬ್ಬಂದಿ. ಇದು ಕೂಡ ನಿಗದಿತ ಶೇಕಡಾ 27 ರಷ್ಟು ಒಬಿಸಿ ಉದ್ಯೋಗಕ್ಕಿಂತ ಬಹಳ ಕಡಿಮೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧಕ ವರ್ಗದ ಹುದ್ದೆಗಳಲ್ಲಿ ಒಬಿಸಿ ಭಾಗವಹಿಸುವಿಕೆಯು ನಿಗದಿತ ಶೇಕಡಾ 27 ರಷ್ಟು ಮೀಸಲಾತಿಗೆ ಹತ್ತಿರದಲ್ಲೂ ಇಲ್ಲ.  ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ವಾರ್ಷಿಕ ವರದಿ 2018-19 ಹೇಳುವಂತೆ ಒಬಿಸಿ ಸಹಾಯಕ ಪ್ರಾಧ್ಯಾಪಕರು ಕೇವಲ ಶೇಕಡಾ 11 ರಷ್ಟಿದ್ದಾರೆ ಮತ್ತು ಉನ್ನತ ಮಟ್ಟದ ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರಲ್ಲಿ ಒಬಿಸಿ ಬೋಧಕರ ಪ್ರಾತಿನಿಧ್ಯವಿಲ್ಲ.  ಇದಲ್ಲದೆ, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ನೀಡಲಾದ ಮಾಹಿತಿಯ ಪ್ರಕಾರ, 2015-16ನೇ ಸಾಲಿನಂತೆ ದೇಶದ ಒಟ್ಟು 496 ಉಪಕುಲಪತಿಗಳಲ್ಲಿ ಕೇವಲ 36 ಮಂದಿ ಮಾತ್ರ ಒಬಿಸಿಯಿಂದ ಬಂದವರು.  ಕಳೆದ ಎರಡೂವರೆ ದಶಕಗಳಿಂದ 27 ಪ್ರತಿಶತದಷ್ಟು ಮೀಸಲಾತಿ ಅಸ್ತಿತ್ವದಲ್ಲಿದ್ದರೂ, ಪ್ರವೇಶ ಹಂತದಲ್ಲೂ ಸಹ ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಯ ಪ್ರಾತಿನಿಧ್ಯವು ಶೇಕಡಾ 27 ಕ್ಕಿಂತ ಕಡಿಮೆ ಇದೆ ಎಂದು ಇದು ಸಾಕಷ್ಟು ಹೇಳುತ್ತದೆ.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಕೇಂದ್ರಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಹಿಂದುಳಿದ ಸಮುದಾಯಗಳ ಕಡ್ಡಾಯ ಭಾಗವಹಿಸುವಿಕೆಯನ್ನು ಖಾತರಿ ಪಡಿಸದಿರುವುದಕ್ಕೆ ಹೊಣೆಗಾರರು.

ಜುಲೈ 2020ರ ಮತ್ತೊಂದು ವರದಿಯಲ್ಲಿ, ಮೀಸಲಾತಿ ಸೌಲಭ್ಯಗಳಿಗಾಗಿ ಕುಟುಂಬ ಸದಸ್ಯರ ಅರ್ಹತೆಯನ್ನು ನಿರ್ಧರಿಸುವ ವಾರ್ಷಿಕ ಕುಟುಂಬ ಆದಾಯವನ್ನು ಲೆಕ್ಕಾಚಾರ ಮಾಡುವಾಗ ವ್ಯಕ್ತಿಯ ವೇತನವನ್ನು ಸೇರಿಸಬಾರದು ಎಂದು ಒಬಿಸಿಗಳನ್ನು ಕುರಿತ ಸಮಿತಿ ಶಿಫಾರಸು ಮಾಡಿದೆ.  ಒಬಿಸಿಗಳ ಕೆನೆಪದರ ವಿಭಾಗದ ವಾರ್ಷಿಕ ಆದಾಯದ ಮಿತಿಯನ್ನು ಪ್ರಸ್ತುತ 8 ಲಕ್ಷ ರೂ. ಗಳಿಂದ 15 ಲಕ್ಷಕ್ಕೆ ಹೆಚ್ಚಿಸಲು ಸಮಿತಿ ಶಿಫಾರಸು ಮಾಡಿದೆ.  ಪ್ರಸ್ತುತ, ಒಬಿಸಿಗಳು, ಕೆನೆಪದರವನ್ನು ಹೊರತುಪಡಿಸಿ, ಅವರ ವಾರ್ಷಿಕ ಆದಾಯವು 8 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 27 ರಷ್ಟು ಮೀಸಲಾತಿ ಮತ್ತು ಶಿಕ್ಷಣಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.  ಆದಾಯದ ಲೆಕ್ಕಾಚಾರದಲ್ಲಿ ಸಂಬಳವನ್ನು ಸೇರಿಸುವ ಯಾವುದೇ ಪ್ರಯತ್ನವು “ಕೆನೆಪದರವನ್ನುನಿರ್ಧರಿಸಲು ಕಠಿಣ ಷರತ್ತುಗಳನ್ನುವಿಧಿಸಿದಾಗ, ಶೇಕಡಾ 27 ರಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬ ಸರ್ಕಾರದ ನಿರ್ದೇಶನವನ್ನು ಸಾಧಿಸಲು ಅಗುವುದಿಲ್ಲ ಎಂಬ ಊಹೆ ಮತ್ತು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ”ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು.

 1979 ರಲ್ಲಿ ಜನತಾಪಕ್ಷ ಸರ್ಕಾರವು ಒಬಿಸಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ಸ್ಥಿತಿಯನ್ನು ಪರಿಶೀಲಿಸಲು ಬಿ.ಪಿ.ಮಂಡಲ್  ತೃತ್ವದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು.  ಆಯೋಗವು ಭಾರತೀಯ ಜನಸಂಖ್ಯೆಯ ಶೇಕಡಾ 52 ರಷ್ಟು ಜನರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ನಿರ್ಧರಿಸಿತು ಮತ್ತು ಅವರಿಗೆ ಸರ್ಕಾರಿ ವಲಯದ ಉದ್ಯೋಗಗಳಿಗೆ ಶೇಕಡಾ 27 ರಷ್ಟು ಕೋಟಾವನ್ನು ಶಿಫಾರಸು ಮಾಡಿತು. ವಾಸ್ತವವಾಗಿ, 1993ರ ಕೇಂದ್ರ ಸರ್ಕಾರದ ದಸ್ತಾವೇಜಿನ ಪ್ರಕಾರ, ಸಾಂವಿಧಾನಿಕ ಹುದ್ದೆಗಳಲ್ಲಿರುವವರ (ಭಾರತದ ರಾಷ್ಟ್ರಪತಿಯಂತಹವರು), ಸರ್ಕಾರಿ ಅಥವಾ ಮಿಲಿಟರಿ ಸೇವೆಯಲ್ಲಿನ ಗಣ್ಯ ಅಧಿಕಾರಿಗಳ, ಗಣ್ಯ ಖಾಸಗಿ ವೃತ್ತಿಪರರ (ಡಾಕ್ಟರುಗಳು ಮುಂತಾದವರ), ಪ್ರಮೂಕಾಸ್ತಿ ಮಾಲಕರ ಮತ್ತು ಉನ್ನತ ಆದಾಯದ ವ್ಯಕ್ತಿಗಳ ಮಕ್ಕಳನ್ನು ವಾಸ್ತವಿಕ ಪರಿಗಣನೆಗಳಿಗೆ ಒಳಪಟ್ಟು ಮೀಸಲಾತಿಯಿಂದ ಹೊರಗಿಡಲು ಕೆನೆಪದರದ ಪರಿಕಲ್ಪನೆಯನ್ನು ಪರಿಚಯಿಸಲಾಯಿತು.

ಆಶ್ಚರ್ಯಕರ ಸಂಗತಿಯೆಂದರೆ, ಆಡಳಿತಾರೂಢ ಬಿಜೆಪಿಯ ಸಂಸದರ ನೇತೃತ್ವದಲ್ಲಿ ಇರುವ ಇತರ ಹಿಂದುಳಿದ ವರ್ಗಗಳ ಸಂಸದೀಯ ಸಮಿತಿ ತೆಗೆದುಕೊಂಡ ಬಲವಾದ ಮತ್ತು ತಾರ್ಕಿಕ ನಿಲುವಿನ ಹೊರತಾಗಿಯೂ, ಸಮಿತಿಯ ವರದಿಯ ಶಿಫಾರಸುಗಳನ್ನು ಪರಿಗಣಿಸುವ ಬದಲು ಸಾಮಾಜಿಕ ನ್ಯಾಯ ಸಚಿವಾಲಯವು ಒಬಿಸಿ ಮೀಸಲಾತಿಗಳ ಪರಿಶೀಲನೆಗೆಂದು ಒಬ್ಬ ನಿವೃತ್ತ ಅಧಿಕಾರಿಯ ನೇತೃತ್ವದಲ್ಲಿ ‘ತಜ್ಞರ ಸಮಿತಿ’ಯನ್ನು ರಚಿಸಿತು! ಇನ್ನೂ ಆಶ್ಚರ್ಯವೆಂದರೆ, ಒಬಿಸಿಗಳ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ವಿಷಯದ ಕುರಿತ‘ ತಜ್ಞರ ಸಮಿತಿ’ಯಲ್ಲಿ, ಸಾಮಾಜಿಕ ನ್ಯಾಯ ಸಚಿವಾಲಯವು ಒಬ್ಬ ಒಬಿಸಿ ಸದಸ್ಯರನ್ನು ಸಹಸೇರಿಸಲಿಲ್ಲ!

ಒಬಿಸಿ ಅಭ್ಯರ್ಥಿಗಳ ಉದ್ಯೋಗಾವಕಾಶಗಳಿಗೆ ಬೇರೆ ಸವಾಲುಗಳೂ ಇವೆ. ಪ್ರಸ್ತುತ ಅನೇಕ ಸಾರ್ವಜನಿಕ ವಲಯದ ಘಟಕಗಳನ್ನು ತರಾತುರಿಯಿಂದ ಖಾಸಗಿಯವರಿಗೆ ಕೇಂದ್ರ ಸರಕಾರ ಮಾರುತ್ತಿದೆ. ಇಲ್ಲಿ ಖಾಸಗೀಕರಣದ ನಂತರ ಒಬಿಸಿಗಳಿಗ ಸದ್ಯ ಇರುವ ಮೀಸಲಾತಿ ಕೂಡ ಗತಕಾಲದ ಸಂಗತಿಯಾಗಿ ಬಿಡುತ್ತದೆ!

ಕೇಂದ್ರೀಯ ವಿದ್ಯಾಲಯ(ಕೆವಿಎಸ್) / ನವೋದಯ ವಿದ್ಯಾಲಯ(ಎನ್‍ವಿಎಸ್‍)ಗಳಿಗೆ ಪ್ರವೇಶದಲ್ಲಿ ಎಸ್‌ಸಿ / ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾತಿ ಇರುವಂತೆ, ಒಬಿಸಿಗಳಿಗೆ ಯಾವುದೇ ಮೀಸಲಾತಿಯನ್ನು ಒದಗಿಸಿಲ್ಲ ಎಂದು ಸಮಿತಿಯು ಕೇಂದ್ರದ ವಿರುದ್ಧ ತೀವ್ರ ಟೀಕೆಗಳನ್ನುಹೊಂದಿತ್ತು.  ಸರಕಾರ ಕೇಂದ್ರ ಶಿಕ್ಷಣ ಸಂಸ್ಥೆ (ಪ್ರವೇಶದಲ್ಲಿ ಮೀಸಲಾತಿ) ಕಾಯ್ದೆ 2006 ಅನ್ನು ಜಾರಿಗೆ ತಂದ ನಂತರ ಕಳೆದ ಹದಿಮೂರು ವರ್ಷಗಳಲ್ಲಿ ಒಬಿಸಿ ಮೀಸಲಾತಿಗಳಿಗೆ ಅವಕಾಶವಾಗುವಂತೆ ತಮ್ಮ ಪ್ರವೇಶ ನೀತಿಗಳನ್ನು ಕೆವಿಎಸ್ ಮತ್ತು  ಎನ್‍ವಿಎಸ್‍ ದ್ದುಪಡಿ ಮಾಡಿಲ್ಲ ಎಂದೂ ಸಮಿತಿಗೆ ಕಂಡುಬಂದಿದೆ.

ಮೇಲಿನ ಸಂಗತಿಗಳ ದೃಷ್ಟಿಯಿಂದ, ಒಬಿಸಿಗಳನ್ನು ಕುರಿತ ಹಿಂದಿನ ಸಮಿತಿಯು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರಿಗೆ ಪ್ರವೇಶದಲ್ಲಿ ಶೇಕಡಾ 27 ರಷ್ಟು ಮೀಸಲಾತಿ ನೀಡಬೇಕೆಂದು ಬಲವಾಗಿ ಶಿಫಾರಸು ಮಾಡಿದೆ; ಇದು ಅನುದಾನ ಪಡೆಯುವ ಅಥವ ಪಡೆಯದ ಮತ್ತು ಸಿಬಿಎಸ್‌ಇ ಮತ್ತು ಇತರ ಸಂವಿಧಾನದ 30ನೇ ಕಲಮು, ಪರಿಚ್ಚೇದ(1)ರಲ್ಲಿ ಉಲ್ಲೇಖಿಸಲಾದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಪ್ರಾಧಿಕಾರಗಳಿಗೆ ಸಂಯೋಜಿತವಾದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಬೇಕು ಎಂದು ಅದು ಹೇಳಿತ್ತು.

ಇತ್ತೀಚೆಗೆ, ಕೇಂದ್ರವು- ನ್ಯಾಯಮೂರ್ತಿ ಜಿ.ರೋಹಿಣಿ ಆಯೋಗಕ್ಕೆ ತನ್ನ ಒಂಬತ್ತನೇ ವಿಸ್ತರಣೆಯನ್ನು – ಜನವರಿ 31, 2021 ರವರೆಗೆ ನೀಡಿದೆ ಎಂದು ವರದಿಯಾಗಿದೆ. ಈ ಆಯೋಗವನ್ನು 2017 ರ ಅಕ್ಟೋಬರ್‌ನಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯಿಂದ  “ಯಾವುದೇ ಪ್ರಮುಖ ಪ್ರಯೋಜನವನ್ನು ಪಡೆಯಲಾಗದ” ಹಿಂದುಳಿದ ವರ್ಗಗಳ ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳಿಗೆ ಪ್ರಯೋಜನವಾಗುವಂತೆ ಕೇಂದ್ರ ಪಟ್ಟಿಯಲ್ಲಿರುವ ಒಬಿಸಿಗಳ “ಉಪ-ವರ್ಗೀಕರಣದ ಪ್ರಶ್ನೆಯನ್ನು ಪರಿಶೀಲಿಸಲು” ಎಂದು ರಚಿಸಲಾಗಿತ್ತು.  ಅದರ ವರದಿಯನ್ನು 12 ವಾರಗಳಲ್ಲಿ – ಜನವರಿ 2, 2018 ರೊಳಗೆ ಸಲ್ಲಿಸಬೇಕಾಗಿತ್ತು. ಉಪ-ವರ್ಗೀಕರಣ, ವೈಜ್ಞಾನಿಕವಾಗಿ ಜಾರಿಗೆ ಬಂದರೆ ಒಬಿಸಿ ಮೀಸಲಾತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.  ಆದಾಗ್ಯೂ, ಒಂದು ಭಾಗದ ಮತದಾರರನ್ನು ಸೆಳೆಯಲು ಇದನ್ನು ರಾಜಕೀಯ ಹಗೆಸಾಧನೆಗೆ ಬಳಸಬಾರದು.

ಒಬಿಸಿಗಳೊಳಗಿನ ಎಲ್ಲಾ ಉಪ-ವಿಭಾಗಗಳಿಗೆ ಪ್ರಯೋಜನವನ್ನು ನೀಡುವ ಮೂಲಕ ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಒಬಿಸಿ ಮೀಸಲಾತಿಯನ್ನು ಯಶಸ್ವಿಯಾಗಿ ಖಾತ್ರಿ ಪಡಿಸಿರುವ ಉದಾಹರಣೆಗಳು ಕೇರಳದಂತಹ ರಾಜ್ಯಗಳಿಂದ ಇವೆ. ಇದಲ್ಲದೆ, ಕೇರಳ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇಕಡಾ 10 ರಷ್ಟು ಮೀಸಲಾತಿಯನ್ನು ಖಾತ್ರಿ ಪಡಿಸಿ ಮೀಸಲಾತಿಗಳನ್ನು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಸಮಗ್ರ ಸಾಧನವಾಗಿ ಮಾಡಿದೆ.

ಈ ಒಬಿಸಿ ಮೀಸಲಾತಿಗಳನ್ನು “ಮರುವ್ಯವಸ್ಥೆ’ಗೊಳಿಸುವುದಕ್ಕೆ ಒಂದು ಸಮಕಾಲೀನ ರಾಜಕೀಯ ಮತ್ತು ಆರ್ಥಿಕ ಆಯಾಮವೂ ಇದೆ.  ಸಂಘಪರಿವಾರ ಮತ್ತು ಬಿಜೆಪಿ ಮಂಡ ಲ್ಆಯೋಗದ ವರದಿಯ ಅನುಷ್ಠಾನದಿಂದ ಪ್ರೇರಿತವಾದ ಒಬಿಸಿ ಜಾಗೃತಿಯ ಅವಶೇಷಗಳನ್ನು ಮತ್ತು ಹಿಂದುಳಿದ ಸಮುದಾಯಗಳ ಉತ್ಥಾನವನ್ನು ಧೂಳೀಪಟ ಮಾಡುವ ಗುರಿಯನ್ನು ಹೊಂದಿವೆ.

ರಾಜಕೀಯ ಹಗೆ ಸಾಧನೆಗಾಗಿ ಜಾತಿ/ ಮೀಸಲಾತಿಯನ್ನು “ಮರುವ್ಯವಸ್ಥೆ’ಗೊಳಿಸುವ ತನ್ನ ಹಾದಿಯಲ್ಲಿ “ಹಿಂದುಳಿದ ವ ರ್ಗಗಳ ಪ್ರಾತಿನಿಧ್ಯವನ್ನು ಪಡೆಯಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಪರಿಶೀಲಿಸುವ” ಉದ್ದೇಶವಿರುವ ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿ ಅಡ್ಡಿಯಾಗಬಾರದು ಎಂದು ಬಿಜೆಪಿ ಭಾವಿಸಿರುವಂತಿದೆ.

ನೇರ ನುಡಿಗಳಲ್ಲಿ ಹೇಳುವುದಾದರೆ, ಒಬಿಸಿಗಳು ಸೇರಿದಂತೆ ಜನಸಂಖ್ಯೆಯ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಂಚಿಗೆ ತಳ್ಳಲ್ಪಟ್ಟ ವರ್ಗಗಳನ್ನು ಸಬಲೀಕರಣಗೊಳಿಸಲು ಬಿಜೆಪಿ ಅಷ್ಟೊಂದು ಉತ್ಸುಕವಾಗಿದ್ದರೆ, ಅದು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದುಳಿದ ವರ್ಗಗಳ ಸಂಸದೀಯ ಸಮಿತಿಯ ಪುನರ್ರಚನೆಯನ್ನು ಪರಿಗಣಿಸಬೇಕಾಗಿತ್ತು. ಅಲ್ಲದೆ ಅದು ಕೆನೆಪದರವನ್ನು ಲೆಕ್ಕ ಹಾಕಲು ವೇತನವನ್ನು ಒಂದು ಅಂಶವಾಗಿ ಸೇರಿಸುವ ಕೇಂದ್ರದ ಪ್ರಸ್ತಾವನೆ ಸೇರಿದಂತೆ ಪ್ರಸ್ತುತ ಒಬಿಸಿ ಉದ್ಯೋಗ ಮೀಸಲಾತಿ ನೀತಿಯನ್ನು ದುರ್ಬಲಗೊಳಿಸಲು ಮುಂದಾಗುತ್ತಿರಲಿಲ್ಲ. ಮತ್ತು ಅದು ಖಾಸಗಿ ವಲಯದಲ್ಲಿ ಒಬಿಸಿಗಳು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಖಾತ್ರಿ ಪಡಿಸುವ ಶಾಸನವನ್ನು ತರುವ ಬಗ್ಗೆಯೂ ಪರಿಶೀಲಿಸುತ್ತಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ, ಮೀಸಲಾತಿಯ ಸಂದರ್ಭದಲ್ಲಿ ಕೆನೆಪದರ ಒಬಿಸಿಗಳ ಪರಿಕಲ್ಪನೆಯು ಸಬಲೀಕರಣಕ್ಕೆಸಾಧನವಾಗಬೇಕು.  ದುರದೃಷ್ಟ ವಶಾತ್, ಬಿಜೆಪಿ ಅದನ್ನು ಚುನಾವಣಾ ಲಾಭಕ್ಕಾಗಿ ರಾಜಕೀಯ ಹಗೆ ಸಾಧಕ ಸಾಧನವಾಗಿ ಉಪಯೋಗಿಸ ಬಯಸುತ್ತದೆ.  ಆದ್ದರಿಂದ ಒಬಿಸಿ ಮೀಸಲಾತಿಗಳನ್ನು ಉರುಳಿಸುವ ಸಂಘಪರಿವಾರ-ಬಿಜೆಪಿ ಕೂಟದ ಮೀಸಲಾತಿ ಮರುವ್ಯವಸ್ಥೆ ಕಿಡಿಗೇಡಿತನದಿಂದ ಕೂಡಿದೆಯಷ್ಟೇ.

ಅನುವಾದ :ಎಸ್. ಕೋದಂಡರಾಮು

 

Donate Janashakthi Media

Leave a Reply

Your email address will not be published. Required fields are marked *