- ಕನ್ನಡ ಪರ ಸಂಘಟನೆಗಳಿಗೆ ಸಿಗದ ನಿರೀಕ್ಷಿತ ಬೆಂಬಲ
ಬೆಂಗಳೂರು: ಮರಾಠಿ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ಸಿಡಿದೆದ್ದ ಕನ್ನಡ ಪರ ಸಂಘಟನೆಗಳು ಕೊಟ್ಟ ಕರ್ನಾಟಕ ಬಂದ್ ಕರೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಬಂದ್ ಕರೆಯಿಂದ ಸೃಷ್ಟಿಯಾಗಿದ್ದ ಅಬ್ಬರ ಬಂದ್ ದಿನ ಕಂಡಿಲ್ಲ. ಪರಿಣಾಮ ಕೇವಲ ಪ್ರತಿಭಟನೆ, ಬಂಧನಕ್ಕಷ್ಟೇ ಕರ್ನಾಟಕ ಬಂದ್ ಸೀಮಿತವಾಯಿತು.
ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆಯನ್ನು ವಿರೋಧಿ ಕನ್ನಡ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಕರೆ ನೀಡಿದ್ದವು. ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಒಂದುಗೂಡಿದ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಘೋಷಣೆ ಮಾಡಿದವು. ಕೆಲವೊಂದು ಗೊಂದಲದ ನಡುವೆಯೂ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದವು.
ಕರ್ನಾಟಕ ಬಂದ್ ಆರಂಭದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದ್ದವು. ಕನ್ನಡ ಪರ ಸಂಘಟನೆಗಳ ಬಂದ್ ಕರೆಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂಪಿ ರೇಣುಕಾಚಾರ್ಯ ವಿರೋಧ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡನ್ನು ರೋಲ್ ಕಾಲ್‌ಗಳೆಂದು ಕರೆದ ಪರಿಣಾಮ ಬಂದ್ ಕರೆ ಸದ್ದು ಮಾಡಿತ್ತು.
ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ಬಂದ್ ಯಶಸ್ವಿಗೊಳಿಸು ವಂತೆ ಮನವಿ ಮಾಡಿದ್ದರು. ಆದರೆ ಸರ್ಕಾರ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಬಂದ್ ನಡೆಸದಂತೆ ಕನ್ನಡ ಪರ ಹೋರಾಟಗಾರಲ್ಲಿ ಮನವಿ ಮಾಡಿದ್ದರು.
ರಾಜ್ಯಾದ್ಯಂತ ಸಿಗದ ಬೆಂಬಲ
ಮರಾಠಿ ಪ್ರಾಧಿಕಾರ ವಿರೋಧಿಸಿ ನಡೆಸಿದ ಕರ್ನಾಟಕ ಬಂದ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬೆಳಗ್ಗೆ 9 ಗಂಟೆಯ ವರೆಗೆ ಬೆಂಗಳೂರು ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಆದರೆ ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಇದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಳಿಕ ಎಂದಿನಂತೆ ಸಹಜ ಸ್ಥಿತಿಗೆ ಬೆಂಗಳೂರು ನಗರ ಮರಳಿತು. ಬೆಂಗಳೂರಿನಲ್ಲಿ ಒಂದೆರಡು ಕಡೆ ಕಿಡಿಗೇಡಿಗಳು ಬಸ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ. ಕೆಆರ್ ಪುರಂನ ಪೈ ಲೇಔಟ್‌ನಲ್ಲಿ ಬಿಎಂಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಹೊಸೂರು ರಸ್ತೆಯ ಹಳೇ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ.
ಹಲವು ಕಡೆಯಲ್ಲಿ ಪ್ರತಿಭಟನೆ
ಮರಾಠಿ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ಹಲವು ಕಡೆಗಳಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಹಲವು ಕನ್ನಡ ಪರ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ವಾಟಾಳ್ ನಾಗರಾಜ್, ಸಾರಾ ಗೋವಿಂದ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಡಬೇಕು. ಪರಭಾಷಿಗರು ಡಿಜಿ, ಬೆಂಗಳೂರು ಪೊಲೀಸ್ ಆಯುಕ್ತರ ವರ್ಗಾವಣೆ ಆಗಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ವಿರೋಧ ಪಕ್ಷಗಳ ವಿರುದ್ಧನೂ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ವಿರೋಧ ಪಕ್ಷಗಳು ಬಾಯಿ ಮುಚ್ಚಿ ಕುಳಿತಿವೆ ಎಂದು ಎಚ್ ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಪ್ರತಿಭಟನಾ ನಿರತ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ಬಳಿಕ ವಶಕ್ಕೆ ಪಡೆದುಕೊಂಡರು. ಇನ್ನು ಕನ್ನಡ ಪರ ಒಕ್ಕೂಟ ಸಂಘಟನೆವೊಂದರಿಂದ ಟೌನ್ ಹಾಲ್ ನಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಯಿತು. ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಭಾವಾಚಿತ್ರಕ್ಕೆ ಚಪ್ಪಲಿ ಪ್ರದರ್ಶನ
ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಟೌನ್‌ಹಾಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಯತ್ನಾಳ್ ಭಾವಾಚಿತ್ರಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ಬಂದ್ ನಿರೀಕ್ಷಿತ ಯಶಸ್ಸು ಕಂಡಿಲ್ಲ. ನೆಲಮಂಗಲ ತಾಲೂಕಿನಲ್ಲಿ ಕನ್ನಡಪರ ಹೋರಾಟಗಾರರು, ಉರುಳುಸೇವೆ ಮೂಲಕ ಪ್ರತಿಭಟನೆ ನಡೆಸಿದರೆ, ಚಿಕ್ಕಮಗಳೂರಿನಲ್ಲಿ ಬಸ್‌ಗಳನ್ನು ತಡೆದು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಹಾಸನದಲ್ಲಿ ಸರಕಾರಿ ಬಸ್ ಸಂಚಾರಕ್ಕೆ ಕರವೇ ಕಾರ್ಯಕರ್ತರು ತಡೆ ಒಡ್ಡಿದ್ದರು. ಇನ್ನು ಉಡುಪಿ ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಂದ್ ಬಿಸಿ ಮುಟ್ಟಿಲ್ಲ. ಒಟ್ಟಿನಲ್ಲಿ ಕರ್ನಾಟಕ ಬಂದ್‌ಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ.