ರೈತರ ಪ್ರತಿಭಟನೆಗೆ ಬೆಂಬಲ: ಪದ್ಮವಿಭೂಷಣ ಪ್ರಶಸ್ತಿ ವಾಪಸ್

  • ರೈತರು ಗೌರವಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿರವಾಗ ಪದ್ಮವಿಭೂಷಣ್‍ ಪ್ರಶಸ್ತಿ ನನ್ನ ಬಳಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ: ಪ್ರಕಾಶ್ ಸಿಂಗ್ ಬಾದಲ್
  • ಪಂಜಾಬ್ 30 ಕ್ರೀಡಾಪಟುಗಳಿಂದ ಕೇಂದ್ರಕ್ಕೆ ಪ್ರಶಸ್ತಿ ವಾಪಸ್

ಚಂಡೀಗಢ: ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಮತ್ತು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ಹಿಂದಿರುಗಿಸುವ ಮೂಲಕ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪಂಜಾಬ್ ರೈತರ ಹೋರಾಟಕ್ಕೆ ರಾಜ್ಯದ ಕ್ರೀಡಾಪಟುಗಳು ಬೆಂಬಲಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕ್ರೀಡಾಪಟುಗಳು ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಿಂತಿರುಗಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

‘ಸಾಮಾನ್ಯ ರೈತರಿಂದಾಗಿ ನಾನು ಇಂದು ಈ ಸ್ಥಾನದಲ್ಲಿ ನಿಂತಿದ್ದೇನೆ. ಇಂದು ಅವರು ತಮ್ಮ ಗೌರವಕ್ಕಿಂತ ಹೆಚ್ಚಿನದ್ದನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಪದ್ಮ ವಿಭೂಷಣ ಪ್ರಶಸ್ತಿಯನ್ನು ನನ್ನ ಬಳಿ ಉಳಿಸಿಕೊಳ್ಳುವುದರಲ್ಲಿ ಏನೂ ಅರ್ಥವಿಲ್ಲ’ ಎಂದು ಅವರು ಹೇಳಿದರು.

‘ಭಾರತ ಸರ್ಕಾರವು ರೈತರಿಗೆ ಮಾಡಿದ ದ್ರೋಹ ಮತ್ತು ಶಾಂತಿಯುತ ಪ್ರತಿಭಟನೆಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯತೆಯನ್ನು ವಿರೋಧಿಸಿ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ಹಿಂದಿರುಗಿಸಿದ್ದಾರೆ’ ಎಂದು ಶಿರೋಮಣಿ ಅಕಾಲಿದಳ ಹೇಳಿಕೆ ಬಿಡುಗಡೆ ಮಾಡಿದೆ.

ರೈತರು ತಮ್ಮ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ತೀವ್ರ ಚಳಿಯ ಮಧ್ಯೆಯೂ ಕಹಿ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಕಾಶ್‌ ಸಿಂಗ್ ಬಾದಲ್‌ ಅವರು ಅಭಿಪ್ರಾಯಪಟ್ಟರು.

ಭಾರತೀಯ ಬಾಸ್ಕೆಟ್​ಬಾಲ್​ ಕ್ರೀಡಾಪಟುವಾಗಿರುವ ಅರ್ಜುನ್​ ಸಿಂಗ್​ ಚೀಮಾ ತಮ್ಮ ಅರ್ಜುನ ಪ್ರಶಸ್ತಿ ಹಾಗೂ ಪದ್ಮ ಪ್ರಶಸ್ತಿಗಳನ್ನು ಹಿಂದಿರುಗಿರುಸುವ ಮೂಲಕ ರೈತರ ಪರವಾಗಿ ನಿಂತಿದ್ದಾರೆ. ಹಾಕಿ ಒಲಂಪಿಕ್​ನಲ್ಲಿ ಚಿನ್ನದ ಪದಕ ಗೆದ್ದ ತಂಡದ ಗುರುಮಲ್​ ಸಿಂಗ್​, ಸುರಿಂದ್ರ ಸಿಂಗ್​ ಸೋದಿ ಕೂಡ ಈಗಾಗಲೇ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ  ಭೇಟಿಗೆ ಕಾಯುತ್ತಿದ್ದು, ಪ್ರಶಸ್ತಿ ವಾಪಸ್​ ನೀಡಲು ಮುಂದಾಗಿದ್ದಾರೆ. ಬಾಸ್ಕೆಟ್​ ಬಾಲ್​ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಚೀಮಾ ಸಹೋದರರಾದ ಬಲ್ಕರ್​ ಸಿಂಗ್​, ಕುಲ್​ದೀಪ್​ ಸಿಂಗ್​, ಗುರ್ಮಿತ್​ ಸಿಂಗ್​ ಸಿಂಗ್​ ಪ್ರಶಸ್ತಿ ಮರಳಿಸಿದ್ದಾರೆ.

ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್​ ಸಿಂಗ್​, ಹಾಕಿ ಪಟು ರಾಜ್ಬೀರ್​ ಕೌರ್​ ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಮಾಜಿ, ಹಾಲಿ ಕ್ರೀಡಾಪಟುಗಳು ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೇ ರೈತರ ಈ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹರಿಯಾಣದ ಮಾಜಿ ಆಟಗಾರರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಸಿಂಗ್​ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಯನ್ನು ಬಿಜೆಪಿ ಮೈತ್ರಿ ಪಕ್ಷ ಅಕಾಲಿದಳ ತೀವ್ರವಾಗಿ ವಿರೋಧಿಸಿತ್ತು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೆ ತರಲು ಮುಂದಾದ ಹಿನ್ನಲೆ ಮೋದಿ ಸಂಪುಟದಿಂದ ಅಕಾಲಿದಳದ ಸಚಿವೆ ಹರ್ಸಿಮ್ರತ್​ ಕೌರ್​ ಬಾದಲ್​ ಹೊರ ಬಂದಿದ್ದರು.

ಕೇಂದ್ರದ ಈ ಮಸೂದೆಗೆ ಪಂಜಾಬ್​, ಹರಿಯಾಣ ಸೇರಿದಂತೆ ದೇಶದ ನಾನಾ ಭಾಗದ ರೈತರು ತೀವ್ರವಾಗಿ ಖಂಡಿಸಿ ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಸರ್ಕಾರ ನಡೆಸುತ್ತಿರುವ ಮಾತುಕತೆಗಳು ವಿಫಲವಾಗಿದೆ. ಕಾಯ್ದೆಯನ್ನು ರದ್ದುಪಡಿಸುವಂತೆ ರೈತರು ಬಿಗಿಪಟ್ಟು ಹಿಡಿಸಿದ್ದಾರೆ.

ಇಂದು ಮತ್ತೊಮ್ಮೆ ರೈತರೊಂದಿಗೆ ಕೇಂದ್ರ ಸಚಿವರು ಚರ್ಚೆ ನಡೆಸುತ್ತಿದ್ದು, ಹೋರಾಟ ಕೈ ಬಿಡುವಂತೆ ಮನವೊಲಿಕೆಗೆ ಮುಂದಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *