ಏಕತಾ ಪ್ರತಿಮೆ ವೀಕ್ಷಣೆ ಟಿಕೆಟ್‌ ಮಾರಾಟದ 5 ಕೋಟಿ ರೂ. ಮಾಯ: ಎಫ್‌ಐಆರ್‌ ದಾಖಲು

  • ಏಕತಾ ಪ್ರತಿಮೆ ಆಡಳಿತ ಮಂಡಳಿ ಖಾತೆಗೆ ಹಣ  ಸಂದಾಯ ಮಾಡದ ಏಜೆನ್ಸಿ

ಅಹಮದಾಬಾದ್‌: ಗುಜರಾತ್‌ನ ಪ್ರಮುಖ ಪ್ರವಾಸಿ ತಾಣವಾಗಿರುವ ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿದ್ದ  5.24 ಕೋಟಿ ರೂ. ದುರ್ಬಳಕೆ ಮಾಡಿಕೊಂಡ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಏಜೆನ್ಸಿಯೊಂದರ ಕೆಲವು ನೌಕರರ ವಿರುದ್ಧ ಕೇವಡಿಯಾ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಸಂಗ್ರಹವಾದ ಮೊತ್ತವಿದು. ಟಿಕೆಟ್‌ ಮಾರಾಟ ಮತ್ತು ಹಣ ಸಂಗ್ರಹಿಸುವ ಹೊಣೆ ಹೊತ್ತ ಏಜೆನ್ಸಿಯು ಈ ಮೊತ್ತವನ್ನು ವಡೋದರಾದಲ್ಲಿನ ಖಾಸಗಿ ಬ್ಯಾಂಕ್‌ನಲ್ಲಿ ಏಕತಾ ಪ್ರತಿಮೆ ಆಡಳಿತ ಮಂಡಳಿ ಹೊಂದಿರುವ ಖಾತೆಗೆ ಸಂದಾಯ ಮಾಡಿಲ್ಲ ಎಂದು ಆರೋಪಿಸಲಾಗಿದೆ.

‘ಏಜೆನ್ಸಿಯು ಮಂಡಳಿಯ ಖಾತೆಗೆ  5,24,77,375 ರೂ. ಜಮೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕರು ನೀಡಿರುವ ದೂರಿನನ್ವಯ ಏಜೆನ್ಸಿಯ ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಡಿಎಸ್‌ಪಿ ವಾಣಿ ದುಧಾತ್‌ ಹೇಳಿದ್ದಾರೆ.

ಕೇವಡಿಯಾ ಬಳಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಬೃಹತ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, 2018ರ ಅಕ್ಟೋಬರ್‌ನಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ವಿಶ್ವದಲ್ಲಿಯೇ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಏಕತಾ ಪ್ರತಿಮೆ ಈಗ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಆದರೆ, ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿರುವ 5.24 ಕೋಟಿ ರೂ. ಅನ್ನು ಖಾಸಗಿ ಬ್ಯಾಂಕ್‌ ತನ್ನ ಖಾತೆಯಲ್ಲಿ ಜಮೆ ಮಾಡಿದೆ ಎಂದು ಏಕತಾ ಪ್ರತಿಮೆ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

‘ಈ ಹಣ ನಾಪತ್ತೆಯಾದ ಪ್ರಕರಣಕ್ಕೂ ಏಕತಾ ಪ್ರತಿಮೆಯ ಮಂಡಳಿಗೂ ಸಂಬಂಧವಿಲ್ಲ. ಇದು ಬ್ಯಾಂಕ್‌ ಹಾಗೂ ಟಿಕೆಟ್‌ ಮಾರಾಟ ಮಾಡುವ ಏಜೆನ್ಸಿ ನಡುವಿನ ಸಮಸ್ಯೆ’ ಎಂದೂ ಅಧಿಕಾರಿ ಹೇಳಿದ್ದಾರೆ. ‘ಟಿಕೆಟ್‌ ಮಾರಾಟ ಮತ್ತು ಸಂಗ್ರಹವಾದ ಹಣವನ್ನು ಬ್ಯಾಂಕ್‌ಗೆ ತಲುಪಿಸುವ ಸಲುವಾಗಿ ಬ್ಯಾಂಕ್‌ ಈ ಏಜೆನ್ಸಿಯನ್ನು ನೇಮಿಸಿಕೊಂಡಿದೆ’ ಎಂದೂ ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *