ರೈತರ ಹೋರಾಟ  ಐದನೇ ದಿನಕ್ಕೆ

  • ಬೇಡಿಕೆ ಈಡೇರದೆ ಹೋಗಲ್ಲ: ರೈತರ ಪಟ್ಟು

ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ‘ದೆಹಲಿ ಚಲೋ’ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದೆ.

ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ದೇಶದ ಬೇರೆ ಬೇರೆ ಭಾಗಗಳಿಂದ ರೈತರು ಸಾಂಕೇತಿಕವಾಗಿ ಭಾಗವಹಿಸಿದ್ದರೆ, ದೆಹಲಿಗೆ ಸಮೀಪ ಇರುವ ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ‌ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಈ‌ ಹಿನ್ನೆಲೆಯಲ್ಲಿ ದೆಹಲಿ‌ ಪೊಲೀಸರು ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ‌ ಬರುವ ರಸ್ತೆಗಳಲ್ಲಿ ರೈತರನ್ನು ತಡೆದಿದ್ದಾರೆ.

ಪ್ರತಿಭಟನಾ ಸ್ಥಳದಲ್ಲೇ ಪ್ರಾರ್ಥನೆ

ಇಂದು ಗುರುನಾನಕ್ ಜಯಂತಿ. ಸಿಖ್ ಸಮುದಾಯದ ಪುಣ್ಯದಿನ‌.‌ ಸಿಖ್ ರಿಗೆ ಪ್ರಮುಖ‌ ಹಬ್ಬ. ಆದರೂ ಪ್ರತಿಭಟನೆಯನ್ನು ಕೈಬಿಡದ ಪಂಜಾಬ್‌ ಮತ್ತು ಹರಿಯಾಣದ ರೈತರು ಹರಿಯಾಣದಿಂದ ದೆಹಲಿ ಪ್ರವೇಶಿಸುವ ಸಿಂಘು ಗಡಿ ಪ್ರದೇಶದಿಂದಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿಂಘು ಗಡಿಯನ್ನು ಬಂದ್ ಮಾಡಿರುವ ಪೊಲೀಸರು ಅಲ್ಲಿನ ಸಂಚಾರ ವ್ಯವಸ್ಥೆಯನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಇದಲ್ಲದೆ ತಿಕ್ರಿ ಗಡಿ ಪ್ರದೇಶದಲ್ಲೂ ಸಂಚಾರ ವ್ಯವಸ್ಥೆಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.

ಬುರಾರಿಯ ನಿರಂಕರಿ ಸಂಗಮ್ ಮೈದಾನದಲ್ಲಿ ಜಮಾವಣೆ ಆಗಿರುವ ಸಾವಿರಾರು ರೈತರು ಅಲ್ಲೇ ಅಡುಗೆ ಮಾಡಿಕೊಂಡು ತಮ್ಮ ಬೇಡಿಕೆ ಈಡೇರುವವರೆಗೆ ವಾಪಸ್ ಹೋಗುವುದಿಲ್ಲ ಎಂಬ‌ ಸಂದೇಶ ರವಾನಿಸಿದ್ದಾರೆ.

ಈ ನಡುವೆ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಆಗಮಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಆದರೆ ನವೆಂಬರ್ 13ರಂದು ರೈತರೊಂದಿಗೆ ಮೊದಲ ಸುತ್ತಿನ ಮಾತುಕತೆ ವೇಳೆ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ವಲ್ಪವೂ ಸ್ಪಂದಿಸದೇ ಇರುವುದರಿಂದ ಪ್ರತಿಭಟನಾನಿರತ ರೈತರು ಕೇಂದ್ರ ಸರ್ಕಾರದ ‘ಮಾತುಕತೆ ಪ್ರಸ್ತಾಪವನ್ನು’ ನಿರಾಕರಿಸಿದ್ದಾರೆ.

Donate Janashakthi Media

One thought on “ರೈತರ ಹೋರಾಟ  ಐದನೇ ದಿನಕ್ಕೆ

  1. I am amazed at the spirit of the farmers and their Organisations that are spearheading the struggle against Farmers bill passed recently. It is certainly a patriotic fight and everyone should support this struggle for the sake of India and it’s sovereignty.

Leave a Reply

Your email address will not be published. Required fields are marked *