- ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಚಲೋ
ದೆಹಲಿ: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳ ಜಾರಿ ವಿರೋಧಿಸಿ ಪಂಜಾಬ್ ರೈತರು ಹಮ್ಮಿಕೊಂಡಿರುವ ‘ದೆಹಲಿ ಚಲೋ ಯಾತ್ರೆ’ ದೆಹಲಿವರೆಗೆ ಬಂದು ತಲುಪಿದೆ. ದೆಹಲಿ ಗಡಿ ಬಳಿ ಬೀಡು ಬಿಟ್ಟಿರುವ ಕೋಟ್ಯಂತರ ರೈತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.
ಪೊಲೀಸರು ಮತ್ತು ರೈತರ ನಡುವಿ ಜಟಾಪಟಿ, ಎಲ್ಲಾ ಅಡೆತಡೆಗಳನ್ನು ಮೀರಿ ರೈತರು ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ರೈತ ನಾಯಕರು, ನಮ್ಮನ್ನು ದೆಹಲಿಯೊಳಗೆ ಬಿಡುವುದಿಲ್ಲ ಎಂದು ಹೇಳಲಾಗುತ್ತಿದೆ. ನಮ್ಮನ್ನು ಒಳಗೆ ಬಿಡದಿರಲು ನಾವೇನು ಉಗ್ರವಾದಿಗಳೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬುರಾರಿಯ ನಿರಂಕಾರಿ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವ ದೆಹಲಿ ಪೊಲೀಸರ ಪ್ರಸ್ತಾವವನ್ನು ರೈತರು ಒಪ್ಪಿಲ್ಲ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಚಲೋ ಆರಂಭಿಸಿರುವ ವಿವಿಧ ರೈತ ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಸಿಂಘು ಗಡಿಯಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿದ್ದಾರೆ.
‘ಕೇಂದ್ರ ಸರ್ಕಾರವು ಮತಗಳನ್ನು ಕೇಳುವಾಗ ದೆಹಲಿ ಮಧ್ಯಭಾಗದ ಜಂತರ್‌ಮಂತರ್‌ನಲ್ಲಿ ಸಮಾವೇಶ ನಡೆಸುತ್ತದೆ. ಆದರೆ ನಾವು ಪ್ರತಿಭಟನೆ ಮಾಡಲು ಮುಂದಾದರೆ ನಿರಂಕಾರಿ ಮೈದಾನ ನೀಡಲು ಮುಂದೆ ಬರುತ್ತಿದೆ. ನಾವೇನು ಅಲ್ಲಿ ಸತ್ಸಂಗ ಮಾಡಬೇಕೇ?’ ಎಂದು ಹರಿಯಾಣದ ರೈತ ಮನೀಶ್ ಕಡಿಯನ್ ಎಂಬುವರು ಪ್ರಶ್ನಿಸಿದ್ದಾರೆ.
ನಮ್ಮ ಹಕ್ಕುಗಳಿಗಾಗಿ ನಾವು ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಕೃಷಿ ವಿಧೇಯಕಗಳು ರೈತರ ಪಾಲಿಗೆ ಮರಣ ಶಾಸನವಾಗಿದ್ದು, ಇವುಗಳ ಜಾರಿ ವಿರೋಧಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ಆದರೆ ಕೇಂದ್ರ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ರೈತ ನಾಯಕರು ಹರಿಹಾಯ್ದರು.