ಭಗಂಡೇಶ್ವರ ದೇವಾಲಯದ ಆಸ್ತಿಗೆ ಕನ್ನ…!!

ದೇವಾಲಯಕ್ಕಿದೆ 196 ಎಕರೆ ಭೂಮಿ -156 ಎಕರೆ ಭೂಮಿ ಒತ್ತುವರಿ


ಕೊಡಗು: ದೇವರ ಸ್ವತ್ತು ಕದ್ದರೆ ಏನಾದ್ರೂ ತೊಂದರೆ ಆಗಬಹುದಾ ಎನ್ನೋ ಭಯ ಸ್ವಲ್ಪನಾದ್ರೂ ಇದ್ದೇ ಇರುತ್ತೆ. ಆದರೆ ಕೊಡಗಿನ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಯ ಭಗಂಡೇಶ್ವರ ದೇವಾಲಯದ ನೂರಾರು ಎಕರೆ ಜಾಗವನ್ನೇ ಹಲವರು ಅತಿಕ್ರಮಿಸಿಕೊಂಡಿದ್ದಾರೆ.

ಹೌದು, ಬಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯ ಎಂದರೆ ಇಡೀ ಜಿಲ್ಲೆಯ ಜನರಿಗೆ ವಿಶೇಷವಾದ ಭಕ್ತಿ ಭಾವವಿದೆ. ಆದರೆ ಹತ್ತಾರು ಕುಟುಂಬಗಳು ಇದೇ ದೇವಾಲಯದ ಆಸ್ತಿಯನ್ನು ನುಂಗಿ ನೀರು ಕುಡಿದಿದ್ದಾರೆ. ಭಗಂಡೇಶ್ವರ ದೇವಾಲಯಕ್ಕೆ 196 ಎಕರೆ ಜಾಗವಿದೆ. ಈ ಜಾಗದ ಪೈಕಿ ಬರೋಬ್ಬರಿ 156 ಎಕರೆ ಜಾಗವನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಕಬಳಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆ ದೇವಾಲಯದ ಅರ್ಚಕ ಕುಟುಂಬಗಳ ಜೀವನ ನಿರ್ವಹಣೆಗೆ ಅನುಕೂಲವಾಗಲೆಂದು ದೇವಾಲಯದ ಆಸ್ತಿಯನ್ನು ನೀಡಿ ಜಂಟಿ ಖಾತೆ ಮಾಡಲಾಗಿತ್ತು. ಆದರೆ ಹಿಂದೆ ಇದ್ದ ದೇವಾಲಯದ ಸಮಿತಿ ಮತ್ತು ಹಿಂದಿನ ಅರ್ಚಕರು ಸೇರಿ ಆಸ್ತಿಯನ್ನು ಬೇರೆಯರಿಗೆ ಪರಭಾರೆ ಮಾಡಿದ್ದಾರೆ ಎಂದು ಕೊಡಗು ಏಕೀಕರಣ ರಂಗದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ಈ ಕುರಿತು ದಾಖಲೆಗಳನ್ನು ತೆಗೆದಾಗ ಅವುಗಳೆಲ್ಲವೂ ಗೊತ್ತಾಗಿದೆ. ಆ ಸಂದರ್ಭಕ್ಕೆ ಇನ್ನು 36 ಎಕರೆ ಜಾಗವಷ್ಟೇ ಉಳಿದಿತ್ತು. ಈಗ ಆ ಜಾಗವೂ ಸಂಪೂರ್ಣ ಒತ್ತುವರಿಯಾಗಿದೆ. ಇದೆಲ್ಲವನ್ನೂ ತೆರವು ಮಾಡಿಸಿ ದೇವಾಲಯದ ಜಾಗ ರಕ್ಷಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಅಷ್ಟೇ ಅಲ್ಲ ಸರ್ಕಾರಿ ಜಾಗಗಳ ಸಂರಕ್ಷಣೆ ಸಮಿತಿ ಅಧ್ಯಕ್ಷರಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರೇ ಇದ್ದಾರೆ. ಅವರಿಗೂ ಒಂದು ಮನವಿ ಸಲ್ಲಿಸುತ್ತೇವೆ. ಅವರು ಯಾವುದೇ ಜಾತಿ, ಧರ್ಮ ಅಥವಾ ಸಂಬಂಧಿಕರು ಎನ್ನೋ ಮುಲಾಜಿಲ್ಲದೆ ಎಲ್ಲರನ್ನೂ ತೆರವು ಮಾಡಿ ದೇವಾಲಯದ ಆಸ್ತಿಯನ್ನು ಮುಂದಾಗಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ಇದ್ದೇ ಇದೆ ಎನ್ನೋದು ಕೊಡಗು ಏಕೀಕರಣ ರಂಗದ ಮುಖಂಡರ ಅಭಿಪ್ರಾಯ.

ಇತ್ತೀಚೆಗಷ್ಟೇ ದೇವಾಲಯ ಸಮಿತಿಯ ಈಗಿನ ಅಧ್ಯಕ್ಷ ಬಿ.ಎಸ್ ತಮ್ಮಯ್ಯ ಬಾಗಮಂಡಲದ ಸಮೀಪದಲ್ಲಿ ಒತ್ತುವರಿಯಾಗಿದ್ದ 13.20 ಎಕರೆ ಜಾಗವನ್ನು ತೆರವು ಮಾಡಿ ಪುನಃ ದೇವಾಲಯದ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದವರು ಈಗಾಗಲೇ ಕಾಫಿ, ಏಲಕ್ಕಿ ಬೆಳೆ ಬೆಳೆದಿದ್ದರು. ಒಟ್ಟಿನಲ್ಲಿ ಬಾಗಮಂಡಲ ದೇವಾಲಯದ ಆಸ್ತಿಯನ್ನು ಉಳ್ಳವರೇ ದುರಾಸೆಯಿಂದ ಒತ್ತುವರಿ ಮಾಡಿಕೊಂಡಿರುವುದು ದೇವರ ಆಸ್ತಿಯನ್ನೇ ನುಂಗಿರುವುದು ಮಾತ್ರ ಆಶ್ಚರ್ಯ.

Donate Janashakthi Media

Leave a Reply

Your email address will not be published. Required fields are marked *