- ಡಿ.3ಕ್ಕೂ ಮೊದಲೇ ಮಾತುಕತೆ ನಡೆಸಲು ಸಿದ್ಧ
ಹೊಸದಿಲ್ಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಜಾರಿಗೆ ವಿರೋಧಿಸಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಭಾರೀ ಪ್ರತಿಭಟನೆ ಮುಂದುವರೆದಿದೆ.
ಈ ಮಧ್ಯೆ ಪ್ರತಿಭಟನೆಯನ್ನು ಕೈಬಿಡುವಂತೆ ರೈತರಲ್ಲಿ ಮನವಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂಬ ಸಂದೇಶ ರವಾನಿಸಿದ್ದಾರೆ.
ದೆಹಲಿಯಲ್ಲಿ ಈ ಕುರಿತು ಮಾತನಾಡಿದ ಅಮಿತ್ ಶಾ, ರೈತರು ಈಕೂಡಲೇ ಪ್ರತಿಭಟನೆಯನ್ನು ನಿಲ್ಲಿಸಿ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ಡಿ.03(ಗುರುವಾರ)ರಂದು ರೈತ ಸಂಘಟನೆಗಳೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಈಗಾಗಲೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಭರವಸೆ ಇಟ್ಟು ಮಾತುಕತೆಗೆ ಬರುವಂತೆ ಅಮಿತ್ ಶಾ ರೈತರಲ್ಲಿ ಮನವಿ ಮಾಡಿದರು.
ಒಂದು ವೇಳೆ ರೈತ ಸಂಘಟನೆಗಳು ಡಿ.03ಕ್ಕೂ ಮೊದಲೇ ಮಾತುಕತೆ ನಡೆಸಲಯ ಬಯಸಿದರೆ, ನಾವು ಅದಕ್ಕೂ ಸಿದ್ಧವಿರುವುದಾಗಿ ಅಮಿತ್ ಶಾ ಇದೇ ವೇಳೆ ಭರವಸೆ ನೀಡಿದರು.
ಕೇಂದ್ರ ಸರ್ಕಾರ ರೈತ ಸಮುದಾಯದ ಪರವಾಗಿದ್ದು, ಅವರಿಗೆ ಅನ್ಯಾಯವಾಗುವ ಯಾವುದೇ ಹೆಜ್ಜೆ ಇಡುವುದಿಲ್ಲ. ಹೀಗಾಗಿ ನಮ್ಮ ಮೇಲೆ ಭರವಸೆ ಇಟ್ಟು, ಪ್ರತಿಭಟನೆ ಕೈಬಿಟ್ಟು ರೈತರು ಮಾತುಕತೆಗೆ ಮುಂದಾಗಬೇಕು ಎಂದು ಅಮಿತ್ ಶಾ ಕಳಕಳಿಯ ಮನವಿ ಮಾಡಿದರು.