‘ಅಬ್ ದಿಲ್ಲಿ ದೂರ್ ನಹಿ’
ಅವರು ಹೇಳುತ್ತಲೇ ಇದ್ದರು,
ನಮಗೂ ಹಾಗೇ ಅನಿಸಿತ್ತು!
ಅವರು ಅಲ್ಲಿಗೆ ತಲುಪಿದರೆ
ನಾವೇ ತಲುಪಿದೆವೆಂದುಕೊಂಡದ್ದೂ ಖರೆ!
ದೊರೆವುದಷ್ಟು ಸುಲಭವೇ
ದಿಲ್ಲಿಯ ಕಾರುಣ್ಯ..
ದಿನಗಳೆದಿದ್ದೇ ಗೊತ್ತಾಗಲಿಲ್ಲ!
ಭಂಡರ ಬೂಟಾಟಿಕೆಗೆ ಬೇಸತ್ತು
ತೀರುವುದಿನ್ನು ಕಷ್ಟ ಕಾರ್ಪಣ್ಯ
ಎಂಬೊಂದು ಕನಸು ಹೊತ್ತು
ಹೊತ್ತು ಮೆರೆದಿದ್ದೇ ತಡ…
ದಿಲ್ಲಿ ಅವರ ಕೈವಶವಾಗಿತ್ತು!
ಹಳ್ಳಿಹಳ್ಳಿಯೂ ಇನ್ನು ದಿಲ್ಲಿ
ನಮಗೆ ಸರಿಸಮಾನರಾರಿಲ್ಲಿ?
ಕೈ ಬದಲಾಗಿ ಕಮಲವರಳಿದ್ದೂ ನಿಜ!
ಕೈ ಬದಲಾದೊಡನೆ ಕೈಯೊಳಗಿನ
ರೇಖೆ ಬದಲಾಗುವುದುಂಟೇ?
ಅದೇ ರಾಗ ಅದೇ ಹಾಡು….
ಮೊದಲಿದ್ದುದೇ ಪಾಡ
ಇತ್ತೆಂಬ ಪಾಪಪ್ರಜ್ಞೆಯ ಜಾಡು..
ಇರುಳು ಕಂಡ ಬಾವಿಗೆ
ಹಗಲೇ ಬಿದ್ದೆವೆಲ್ಲ!
ಇದೆಂಥ ಪಡಿಪಾಟಲು!
ಅಬ್ ದಿಲ್ಲಿ ದೂರ್ ಹೈ…..
ಲಾಠಿಚಾರ್ಜ್, ಅಶ್ರುವಾಯು
ಅಗತ್ಯಬಿದ್ದರೆ ಗೋಲಿಬಾರು
ಇದು ಹೇಳಿಕೇಳಿ ಅಂಧಾ ದರ್ಬಾರು!
ವಲಸೆ ಕಾರ್ಮಿಕ ಹೆಣವಾಗಿ ಸೇರಿದ ತನ್ನೂರಿಗೆ!
ಕೃಷಿಕ, ಕೃಷಿಕಾರ್ಮಿಕರ ಹೆಣ…
ಬಿದ್ದಷ್ಟೂ ಖುಷಿ ದಿಲ್ಲಿಗೆ!
ನಾವು ಹೊರಟಿದ್ದೆಲ್ಲಿಗೆ?
ಅಬ್ ದಿಲ್ಲಿ……
- ಚಂಸು ಪಾಟಿಲ