25 ಕೋಟಿ ಕಾರ್ಮಿಕರ, ನೌಕರರ ರಾಷ್ಟ್ರೀಯ ಮುಷ್ಕರ

ದೆಹಲಿ : ನವಂಬರ್ 26ರಂದು ದೇಶ ಇದುವರೆಗೆ ಕಂಡಿರದಷ್ಟು ಬೃಹತ್ ಪ್ರಮಾಣದ ಸಾರ್ವತ್ರಿಕ ಮುಷ್ಕರವನ್ನು ಕಂಡಿತು. ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು, ನೌಕರರು  ಮುಷ್ಕರ ನಡೆಸಿದರು. ಅಷ್ಟೇ ಅಲ್ಲ ಕೊವಿಡ್ ಭಯವನ್ನೂ ಮೀರಿ ಬೀದಿಗಿಳಿದು ಮೋದಿ ನೇತೃತ್ವದ ಬಿಜೆಪಿ ಸರಕಾರ ಅದೇ ಕೊವಿಡ್ ಮರೆಯಲ್ಲಿ ಜಾರಿಗೊಳಿಸುತ್ತಿರುವ ಹಲವಾರು ಕಾಯ್ದೆಗಳು, ಕ್ರಮಗಳನ್ನು ದುಡಿಯುವ ಜನಗಳು ಸುತಾರಾಂ ಒಪ್ಪುವುದಿಲ್ಲ ಎಂದು ಸಾರಿ ಹೇಳಿದರು. ದೇಶಾದ್ಯಂತ ಕೋಟ್ಯಂತರ ರೈತರು ಅವರೊಂದಿಗೆ ದನಿಗೂಡಿಸಿದರು, ದೇಶಾದ್ಯಂತ ಗ್ರಾಮೀಣ ಹರತಾಳ ನಡೆಸಿದರು.

ಇದು ದೇಶದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೆ ಅತಿ ದೊಡ್ಡ ಸಂಯೋಜಿತ ಮುಷ್ಕರ ಕಾರ್ಯಾಚರಣೆ ಎಂದು ಹೇಳಲಾಗಿದೆ. ದೇಶದ ಆಳರಸರು ನವ-ಉದಾರವಾದಿ ಧೋರಣೆಗಳನ್ನು ಅನುಸರಿಸಲಾರಂಬಿಸಿ ದುಡಿಯುವ ಜನಗಳ ಮೇಲೆ ಅದರ ಹೊರೆಯನ್ನು ಹಾಕಲಾರಂಭಿಸಿದಂದಿನಿಂದ ಇದು 20ನೇ ಸಾರ್ವತ್ರಿಕ ಮುಷ್ಕರ. ಮೋದಿ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಮೇಲೆ, 6ನೇ ದೇಶವ್ಯಾಪಿ ಮುಷ್ಕರ ಮತ್ತು ಈ ವರ್ಷದ ಎರಡನೇ ಸಾರ್ವತ್ರಿಕ ಮುಷ್ಕರ-ಮೇಲೆ ಹೇಳಿದಂತೆ ಕೊವಿಡ್ ಮರೆಯಲ್ಲಿ ಈ ಸರಕಾರ ಕೈಗೊಳ್ಳುತ್ತಿರುವ ಕ್ರೂರ ಕ್ರಮಗಳ ಬಗ್ಗೆ ದುಡಿಯವ ವರ್ಗಗಳ ತೀವ್ರ ಆಕ್ರೋಶವನ್ನು ಇದು ಬಿಂಬಿಸುತ್ತದೆ ಎಂದು ಈ ಕಾರ್ಯಾಚರಣೆಗೆ ಕರೆ ನೀಡಿದ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು 250ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಸಿಐಟಿಯು ಅಭಿವಂದನೆ

ದೇಶಾದ್ಯಂತ ಕೋಟ್ಯಂತರ ರೈತರು ಮತ್ತು ಕಾರ್ಮಿಕರು ತಮ್ಮ ಹಕ್ಕುಗಳು, ಬದುಕು ಮತ್ತು ಜೀವನೋಪಾಯಗಳ ಮೇಲೆ ಮೋದಿ ನೇತೃತ್ವದ ಬಿಜೆಪಿ ಸರಕಾರದ ಘೋರ ಹಲ್ಲೆಗಳ ವಿರುದ್ಧ ಒಟ್ಟಾಗಿ ಎದ್ದು ನಿಂತಿದ್ದಾರೆ. 25 ಕೋಟಿಗೂ ಹೆಚ್ಚು ಕಾರ್ಮಿಕರು, ಕೃಷಿ ಕಾರ್ಮಿಕರು ದೇಶದ ಸಂಪತ್ತನ್ನು ಉತ್ಪಾದಿಸುವ ಶ್ರಮಜೀವಿಗಳು ಮುಷ್ಕರ ನಡೆಸಿದ್ದಾರೆ. ಹಲವು ಕೋಟಿ ರೈತರು ದೇಶದ ಮೂಲೆ ಮೂಲೆಗಳಲ್ಲೂ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದಿರುವ ಸಿಐಟಿಯು ಅವರೆಲ್ಲರಿಗೂ ಅಭಿವಂದನೆ ಸಲ್ಲಿಸಿದೆ.

ಕೇರಳ, ಪಶ್ಚಿಮ ಬಂಗಾಲ, ತ್ರಿಪುರಾ ಮತ್ತು ಇನ್ನು ಹಲವು ರಾಜ್ಯಗಳಲ್ಲಿ ಬಂದ್‌ನಂತಹ ಪರಿಸ್ಥಿಯೇ ಉಂಟಾಯಿತು. ಸಂಚಾರ ಸ್ತಬ್ಧಗೊಂಡವು, ಕಾರ್ಖಾನೆಗಳು, ಕಚೇರಿಗಳು ಮಾತ್ರವಲ್ಲ, ಅಂಗಡಿ, ವಾಣಿಜ್ಯ ಸಂಸ್ಥೆಗಳು ಇತ್ಯಾದಿಗಳೂ ಮುಚ್ಚಿದ್ದವು.

ಕರ್ನಾಟಕ, ತೆಲಂಗಾಣ, ಪಂಜಾಬ್ ಮಹಾರಾಷ್ಟ್ರ, ದಿಲ್ಲಿ ಮುಂತಾದೆಡೆಗಳ ಹಲವು ಕೈಗಾರಿಕಾ ಕ್ಷೇತ್ರಗಳಲ್ಲಿ ಸಂಪೂರ್ಣ ಮುಷ್ಕರ ನಡೆದಿದೆ. ಕೊಲ್ಕತ, ಚೆನ್ನೈ, ತೂತ್ತುಕುಡಿ, ಕೊಚ್ಚಿ, ಜೆಎನ್‌ಪಿಟಿ, ವಿಶಾಖಪಟ್ಟಣಂ ಮತ್ತು ಪರದೀಪ್ ಬಂದರುಗಳಲ್ಲಿ ಬುಹಪಾಲು ಕಾರ್ಮಿಕರು ಭಾಗವಹಿಸಿದರು. ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು ಕಾರ್ಮಿಕರು, ಈ ವಲಯಗಳಲ್ಲಿನ ಕಾಂಟ್ರಾಕ್ಟ್ ಕಾರ್ಮಿಕರೂ, ಕಾಂಟ್ರಾಕ್ಟರುಗಳ ಬೆದರಿಕೆಗಳಿಗೂ ಮಣಿಯದೆ ಮುಷ್ಕರದಲ್ಲಿ ಭಾಗವಹಿಸಿದರು. ಬೆಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮುಷ್ಕರ ಸುಮಾರಾಗಿ ಸಂಪೂರ್ಣವಾಗಿತ್ತು, ಹೈದರಾಬಾದಿನ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲೂ ಬಹಳಷ್ಟು ಮಟ್ಟಿಗೆ ಮುಷ್ಕರ ನಡೆಯಿತು. ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ ಮುಂತಾದೆಡಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೇಲೂ ಗಂಭೀರ ಪರಿಣಾಮ ಉಂಟಾಯಿತು. ನೌಕಾ ನೌಕರರು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ತಾವಿದ್ದೆಡೆಗಳಲ್ಲೇ ಸೌಹಾರ್ದ ಕಾರ್ಯಾಚರಣೆ ನಡೆಸಿದರು.

ವಿಮೆ, ಬ್ಯಾಂಕ್‌ಗಳಲ್ಲಿ, ಮುಷ್ಕರ ಸಂಪೂರ್ಣವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರೀ ನೌಕರರು ಸುಮಾರಾಗಿ ಎಲ್ಲ ರಾಜ್ಯಗಳಲ್ಲಿ ಮುಷ್ಕರದಲ್ಲಿ ಭಾಗವಹಿಸಿದರು. ಟೆಲಿಕಾಂ ನೌಕರರು ದೊಡ್ಡ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡರು ಎಂದು ಸಿಐಟಿಯು ಹೇಳಿದೆ.

ಕೋಟ್ಯಂತರ ಅಸಂಘಟಿತ ವಲಯದ ಕಾರ್ಮಿಕರು-ಕಟ್ಟಡ ಕಾರ್ಮಿಕರು, ಹಮಾಲಿಗಳು, ಅಂಗಡಿ ನೌಕರರು, ಬೀಡಿ ಕಾರ್ಮಿಕರು, ತೋಟ, ನಾರು, ಮುಂತಾದ ಪಾರಂಪರಿಕ ಉದ್ದಿಮೆಗಳ ಕಾರ್ಮಿಕರು, ಸ್ಕೀಮ್ ನೌಕರರು ಮುಷ್ಕರದಲ್ಲಿ ಭಾಗವಹಿಸಿದರು. ಪಂಜಾಬಿನಲ್ಲಿ ಸುಮಾರು 20ಸಾವಿರ ಅಂಗನವಾಡಿ ನೌಕರರು ಮುಷ್ಕರ ನಡೆಸಿ ಬಂಧನಕ್ಕೊಳಗಾದರು.

ದೇಶಾದ್ಯಂತ, ಸಾವಿರಾರು ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಯುವಜನ, ಮಹಿಳೆಯರು, ವಿದ್ಯಾರ್ಥಿಗಳು ರಾಸ್ತಾರೋಕೋ, ರೈಲ್ ರೋಕೋಗಳಲ್ಲಿ ಭಾಗವಹಿಸಿದರು.

10 ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರದ ಕರೆಗೆ, 250ಕ್ಕೂ ಹೆಚ್ಚು ರೈತ ಸಂಘಟನೆಗಳ ಪ್ರತಿಭಟನೆಯ ಕರೆಗೆ ಇಂತಹ ಬೃಹತ್ ಸ್ಪಂದನವನ್ನು, ಹಾಗೂ ಅದಕ್ಕೆ ಇತರ ಶ್ರಮಜೀವಿಗಳ ಅಭೂತಪೂರ್ವ ಸೌಹಾರ್ದವನ್ನು ಕಂಡು ನಡುಗಿದ ಕೇಂದ್ರ ಬಿಜೆಪಿ ಸರಕಾರ ಮತ್ತು ಬಿಜೆಪಿ ರಾಜ್ಯ ಸರಕಾರಗಳು ದಮನಚಕ್ರಕ್ಕಿಳಿದವು. ಭಾರತ ಸರಕಾರದ ಅಡಿಯಲ್ಲಿರುವ ದಿಲ್ಲಿ ಪೋಲಿಸ್ ಜಂತರ್ ಮಂತರ್‌ನಲ್ಲಿ ಕಾರ್ಮಿಕರು ಮತ್ತು ರೈತರು ಸಭೆ ಸೇರಲು ಬಿಡಲಿಲ್ಲ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವರನ್ನು ಬಂಧಿಸಿತು, ಎಐಕೆಎಸ್‌ನ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮಯೂಕ್ ಬಿಸ್ವಾಸ್ ಮತ್ತು ಇತರ ಹಲವರ ಮೇಲೆ  ಕೈಮಾಡಿದರು. ಹರ್ಯಾಣದ ಬಿಜೆಪಿ ಸರಕಾರ ದಿಲ್ಲಿ ಗಡಿಯನ್ನು ಸೀಲ್ ಮಾಡಿ ಮಧ್ಯರಾತ್ರಿಯ ದಾಳಿಗಳನ್ನು ನಡೆಸಿ ನೂರಾರು ಕಾರ್ಮಿಕ ಮತ್ತು ರೈತ ಮುಖಂಡರುಗಳನ್ನು ಬಂಧಿಸಿತು. ದಿಲ್ಲಿಗೆ ಬರುವ ದಾರಿಗಳಲ್ಲಿ ಹಲವೆಡೆಗಳಲ್ಲಿ ಪೋಲಿಸ್ ಅಡ್ಡಗಟ್ಟಿದ್ದರಿಂದ ಅಲ್ಲಲ್ಲೇ ಸಾವಿರಾರು ಮಂದಿ ಧರಣಿ ನಡೆಸಿದರು.

ತ್ರಿಪುರಾದಲ್ಲಿ ಬಿಜೆಪಿ ಗೂಂಡಾಗಳು, ಬಿಜೆಪಿ ರಾಜ್ಯ ಸರಕಾರ ಮತ್ತು ಪೋಲಿಸ್ ಕೃಪಾಪೋಷಣೆಯಲ್ಲಿ ಮುಚ್ಚಿದ ಅಂಗಡಿಗಳನ್ನು ತೆರೆಸಲು ಬಲವಂತ ಮಾಡಿದರು, ಅದರಲ್ಲಿ ವಿಫಲರಾದಾಗ ಹಲ್ಲೆಗಳನ್ನು ನಡೆಸಿದರು, ಕಾರ್ಮಿಕ ಸಂಘಗಳು ಮತ್ತು ಎಡಪಕ್ಷಗಳ ಕಚೇರಿಗಳನ್ನು ಹಾಳುಗೆಡವಿದರು. ಒಡಿಶ ಮತ್ತು ಪಶ್ಚಿಮ ಬಂಗಾಲ ಸೇರಿದಂತೆ ದೇಶಾದ್ಯಂತ 700 ಕಟ್ಟಡ ಕಾರ್ಮಿಕರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಕೃಷ್ಣ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸಿಐಟಿಯು ಮುಖಂಡರನ್ನು ಮುಂಜಾಗರೂಕತೆಯ ಕ್ರಮ ಎಂದು ಬಂಧಿಸಲಾಗಿದೆ. ತೆಲಂಗಾಣ ಸೇರಿದಂತೆ ಇತರ ಹಲವು ರಾಜ್ಯಗಳಲ್ಲೂ ಕಾರ್ಮಿಕ ಮುಖಂಡರನ್ನು ಬಂಧಿಸಲಾಗಿದೆ.

ಅಂತರ್ರಾಷ್ಟ್ರೀಯವಾಗಿಯೂ ನವಂಬರ್ 26 ರ ಮುಷ್ಕರ ಅಪಾರ ಗಮನ ಸೆಳೆದಿದೆ. ವಿಶ್ವ ಕಾರ್ಮಿಕ ಸಂಘಗಳ ಒಕ್ಕುಟ(ಡಬ್ಲ್ಯುಎಫ್‌ಟಿಯು) ಸೌಹಾರ್ದ ಸಂದೇಶವನ್ನು ಕಳಿಸಿದೆ, ಮತ್ತು ಅದಕ್ಕೆ ಸಂಯೋಜಿತವಾದ ವಿವಿಧ ದೇಶಗಳ ಕಾರ್ಮಿಕ ಸಂಘಗಳು, ತಂತಮ್ಮ ದೇಶಗಳಲ್ಲಿ ನವ-ಉದಾರವಾದದ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳೂ ಸೌಹಾರ್ದ ವ್ಯಕ್ತಪಡಿಸಿವೆ.

ಹಗೆ ಸಾಧಕ ಕ್ರಮಗಳು ಮತ್ತು ಬಂಧನಗಳ ಮೂಲಕ ಕಾರ್ಮಿಕರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿರುವ ಸಿಐಟಯು, ಕಾರ್ಮಿಕರು ಮತ್ತು ರೈತರು ಬಿಜೆಪಿ ಸರಕಾರದ ವಿನಾಶಕಾರಿ ಮತ್ತು ಛಿದ್ರಕಾರಿ ಧೋರಣೆಗಳನ್ನು ಹಿಂತೆಗೆದುಕೊಳ್ಳುವ ವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ, ನವಂಬರ್ 26ರ ಕಾರ್ಯಾಚರಣೆ ಒಂದು ಆರಂಭವಷ್ಟೇ ಎಂದು ಹೇಳಿದೆ.

 

Donate Janashakthi Media

Leave a Reply

Your email address will not be published. Required fields are marked *