ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದರ ಜತೆಗೆ ಅದಕ್ಕೆ ತಾರ್ಕಿಕ ಅಂತ್ಯ ಹಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಆಯೋಗದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಆಯೋಗಕ್ಕೆ ಸದಸ್ಯರ ನೇಮಕ ಆಗಬೇಕಿದೆ. ಆ ಬಳಿಕ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ, ಒಂದು ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
‘ಆ ವರದಿಯನ್ನು ನಾನು ಮೊದಲು ಅಧ್ಯಯನ ಮಾಡುತ್ತೇನೆ. ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ದೇಶದಲ್ಲೇ ಮೊದಲ ಬಾರಿಗೆ ₹160 ಕೋಟಿ ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ಹಿಂದಿನ ಸರ್ಕಾರಗಳ ಸಂದರ್ಭದಲ್ಲಿ ಈ ವರದಿ ಏಕೆ ಸಲ್ಲಿಕೆ ಆಗಿಲ್ಲ ಎಂಬುದು ನನಗೆ ಗೊತ್ತಿಲ್ಲ. ಆಯೋಗದ ಹಿಂದಿನ ತೀರ್ಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ’ ಎಂದು ಹೆಗ್ಡೆ ಹೇಳಿದರು.
ಆಯೋಗಕ್ಕೆ ನನ್ನ ನೇಮಕ ಆದೇಶ ಹೊರಬಂದ ಎರಡು ದಿನಗಳಲ್ಲಿ ಹಲವು ಸಮುದಾಯಗಳಿಂದ ಹೊಸ ಬೇಡಿಕೆಗಳು ಬಂದಿವೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ನ್ಯಾ.ರೋಹಿಣಿ ಅವರೂ ನಮ್ಮ ಆಯೋಗದಿಂದ ಹಲವು ಮಾಹಿತಿಗಳನ್ನು ಕೇಳಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಆಯೋಗದಲ್ಲಿ ಕೆಲಸ ಮಾಡಲು ಪಕ್ಷ ಒಂದು ಸದವಕಾಶ ನೀಡಿದೆ. ಇದರಿಂದ ಅನೇಕ ಸಣ್ಣಪುಟ್ಟ ಹಿಂದುಳಿದ ಸಮಾಜಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ. ಇಂತಹ ಸಮುದಾಯಗಳನ್ನು ಗುರುತಿಸಿ ಸಾಮಾಜಿಕ ನ್ಯಾಯದ ವ್ಯಾಪ್ತಿಗೆ ತರಲು ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ನೀಟ್, ಜೆಇಇ ಪರೀಕ್ಷೆಗಳಲ್ಲಿ ಕೆಲವು ರಾಜ್ಯಗಳಲ್ಲಿ ಕೆಲವು ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಇದೆ. ಅದೇ ಜಾತಿಗಳಿಗೆ ರಾಜ್ಯದಲ್ಲಿ ಮೀಸಲಾತಿ ಇಲ್ಲ. ಅದರ ಬಗ್ಗೆಯೂ ಅಧ್ಯಯನ ನಡೆಸಿ, ಅಂತಹ ಜಾತಿಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಉದ್ದೇಶಿಸಿರುವುದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿದರು.