ದೆಹಲಿ ಚಲೋ: ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗ

ಚಂಡೀಗಡ: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಗಳನ್ನು ಹರಿಯಾಣ ಪ್ರವೇಶಿಸಲು ಬಿಡುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿರುವ ಬೆನ್ನಲೇ ಪಂಜಾಬ್‌ನಿಂದ ರೈತರು ದೆಹಲಿ ಕಡೆಗೆ ಸಾಗುತ್ತಿದ್ದಾರೆ.

ಟ್ರ್ಯಾಕ್ಟರ್‌, ಇತರೆ ವಾಹನಗಳ ಮೂಲಕ ರೈತರ ಹರಿಯಾಣದ ಗಡಿಯತ್ತ ಬರುತ್ತಿದ್ದಾರೆ. ಇನ್ನು ಕೆಲ ರೈತರು ಪಾದಯಾತ್ರೆ ಮೂಲಕ ದೆಹಲಿ ಕಡೆಗೆ ತೆರಳುತ್ತಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರೈತರು ಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಬ್ಯಾರಿಕೇಡ್‌ಗಳನ್ನು ತಳ್ಳಿದ್ದಾರೆ. ಈ ವೇಳೆ ಹರಿಯಾಣ ಪೊಲೀಸರು ರೈತರ ಮೇಲೆ ಅಶ್ರುವಾಯು ಸಿಡಿಸಿ, ಜಲಫಿರಂಗಿ ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಪಂಜಾಬ್‌, ರಾಜಸ್ಥಾನ, ಉತ್ತರಪ್ರದೇಶ, ಕೇರಳ ರೈತರು ನಡೆಸುತ್ತಿರುವ ಪ್ರತಿಭಟನೆ ಇದಾಗಿದ್ದು ಶುಕ್ರವಾರ ದರಣಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿ, ರಾಷ್ಟ್ರೀಯ ಕಿಸಾನ್ ಮಹಾಸಂಘ, ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಗಳು ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿವೆ. ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ 2 ಲಕ್ಷ ರೈತರು ಸೇರಬಹುದು ಎಂದು ಅಂದಾಜಿಸಲಾಗಿದೆ.

ಈ ನಡುವೆ ಪಂಜಾಬ್‌-ಹರಿಯಾಣ ಗಡಿಯಲ್ಲಿನ ಹೆದ್ದಾರಿಗಳನ್ನು ಹರಿಯಾಣ ಸರ್ಕಾರ ಬಂದ್ ಮಾಡಿದೆ. ಈಗಾಗಲೇ ಹರಿಯಾಣ ಪೊಲೀಸರು ರೈತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *