ಇಸ್ಕಾನ್ ನ ಅಕ್ಷಯಪಾತ್ರೆಯಲ್ಲಿ ಭ್ರಷ್ಟಾಚಾರದ ವಾಸನೆ

ಲಾಕ್ಡೌನ್ ಅವಧಿಯಲ್ಲಿ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು, ನಂತರದಲ್ಲಿ ಅನೇಕರು ಒತ್ತಡ ಹೇರಿದ್ದರಿಂದ ಮಕ್ಕಳಿಗೆ ಆಹಾರ ಧಾನ್ಯಗಳನ್ನು ನೀಡುವುದಾಗಿ ಸರಕಾರ ಹೇಳಿತ್ತು. ಸರಕಾರ ನುಡಿದಂತೆ ನಡೆದುಕೊಳ್ಳುತ್ತಿಲ್ಲವೆಂದು ಅನೇಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಆಹಾರ ಧಾನ್ಯಗಳು ಮಕ್ಕಳಿಗೆ ತಲುಪಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತದ ಪರಿಣಾಮದಿಂದ ಮಕ್ಕಳ್ಳಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿದೆ ಎಂಬುದು  ಪೋಷಕರು ಆರೋಪವಾಗಿದೆ. ಮಕ್ಕಳ ಬಿಸಿಯೂಟದ ಅನ್ನಕ್ಕೆ ಸರಕಾರ ಕನ್ನ ಹಾಕುತ್ತಿದೆಯಾ? ಇಸ್ಕಾನ್‍ನ ಅಕ್ಷಯಪಾತ್ರೆಯಲ್ಲಿ ಭ್ರಷ್ಟಾಚಾರದ ವಾಸನೆಗೆ ಯಾರು ಕಾರಣ ಎಂಬುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

ಮಕ್ಕಳ ಹಸಿವನ್ನು ನೀಗಿಸಬೇಕಾದ ಸರಕಾರ ಬಿಸಿಯೋಟ ಯೋಜನೆಯನ್ನು ಲಾಕ್ಡೌನ್ ಅವಧಿಯಲ್ಲಿ ಹಾಗೂ ನಂತರದಲ್ಲಿ ಸಮರ್ಪಕವಾಗಿ ಜಾರಿ ಮಾಡದಿರುವುದಕ್ಕೆ ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಸರಕಾರದ ಈ ನಡೆಗೆ ಹೈ ಕೋರ್ಟ್ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಬಿಸಿಯೂಟ ಸ್ಥಗಿತದಿಂದಾಗಿ ಮಕ್ಕಳಿಗೆ ಒದಗಿರುವ ಸಂಕಷ್ಟವನ್ನು ಪರಿಹಾರ ಮಾಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆಯನ್ನು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ನಡೆಸಿ ಪರಿಹಾರದ ಕುರಿತು ಪರಿಷ್ಕೃತ ಪ್ರಸ್ತಾಪವನ್ನು ಸಲ್ಲಿಸುವಂತೆ ಸೂಚಿಸಿದೆ. ಸರಕಾರ ಬಿಸಿಯೂಟ ಯೋಜನೆಯ ನಿಯಮ 2015 ರ ಪ್ರಕಾರ ಉಪ ನಿಯಮ 9 ನ್ನು ಉಲ್ಲಂಘಿಸಿದೆ ಎಂದು ವಿಭಾಗೀಯ ಪೀಠ ಸರಕಾರಕ್ಕೆ ತಿಳಿಸಿದೆ. ರಾಜ್ಯದಲ್ಲಿ 53, 47, 501 ಜನ ವಿದ್ಯಾರ್ಥಿಗಳು ಬಿಸಿಯೂಟ ಯೋಜಯ ಫಲಾನುಭವಿಗಳಾಗಿದ್ದಾರೆ. 1, 17, 999 ಜನ ಬಿಸಿಯೂಟ ಅಡುಗೆ ಮತ್ತು ಸಹಾಯಕರಿದ್ದಾರೆ.

ಇಂತಹ ಸಂಕಷ್ಟದಲ್ಲಿ ಸರಕಾರ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ನೀಡುಲು ಅವಕಾಶಗಳು ಇದ್ದವು, ಊಟ ತಯಾರಿಸಲು ಕಷ್ಟವಿದ್ದರೂ ಕೂಡ ಮಕ್ಕಳಿಗೆ ಆಹಾರ ಧಾನ್ಯಗಳನ್ನು ತಲುಪಿಸಬಹುದಿತ್ತು. ಆದರ ಸರಕಾರ ಇದ್ಯಾವುದನ್ನು ಮಾಡದೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಲು ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಮಾಲಿನಿ ಮೆಸ್ತಾರವರು ಆರೋಪಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಪೋಷಕರು ಹೊಲ ಗದ್ದೆ ಕೆಲಸಗಳಿಗೆ ಕೂಲಿ ಕೆಲಸಕ್ಕೆ ಹೋಗುವ ಕಾರಣ, ಮಕ್ಕಳಿಗೆ ಮಧ್ಯಾಹ್ನದ ಊಟ ಸಿಗುತ್ತಿಲ್ಲ, ಹಾಗಾಗಿ ಕೂಡಲೆ ಶಾಲೆಗಳಲ್ಲಿ ಬಿಸಿಯೂಟವನ್ನು ಮಾಡಿ ಮಕ್ಕಳಿಗೆ ವಿತರಿಸಬೇಕು ಎಂದು ಪೋಷಕರಾದ ಹುಸೇನಪ್ಪರವರು ಆಗ್ರಹಿಸಿದ್ದಾರೆ.

ಸಾರ್ವಜನಿಕ ತೆರಿಗೆ ಹಣದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ನಿರ್ವಹಿಸುತ್ತಿರುವ ಇಸ್ಕಾನ್ ನ ಅಕ್ಷಯಪಾತ್ರಾ ಫೌಂಡೇಷನ್ ವ್ಯವಹಾರಗಳ ಬಗ್ಗೆ ವಿವಾದವೆದ್ದಿದೆ. ಹಣಕಾಸು ಅವ್ಯವಹಾರದ ಆರೋಪಗಳ ಹಿನ್ನೆಲೆಯಲ್ಲಿ ಸಂಸ್ಥೆಯ ಸ್ವತಂತ್ರ ಟ್ರಸ್ಟಿಗಳು ರಾಜೀನಾಮೆ ನೀಡುತ್ತಿದ್ದಾರೆ.

ಇಸ್ಕಾನ್ ನ ಅಕ್ಷಯಪಾತ್ರ ಫೌಂಡೇಶನ ಬಿಸಿಯೂಟ ಕುರಿತು ವಿವಾದವನ್ನು ಸೃಷ್ಟಿಸುತ್ತಿರುವುದು ಇದೇ ಮೊದಲೇನಲ್ಲ, ಬಿಸಿಯೂಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುವುದಿಲ್ಲ ಎಂಬ ಕಾರಣಕ್ಕೆ ವಿವಾದ ಸದ್ದು ಮಾಡುತ್ತಿತ್ತು. ಹಾಗೇ ಪೌಷ್ಟಿಕಾಂಶ ಜ್ಞಾನಕ್ಕೆ ತದ್ವಿರುದ್ಧವಾಗಿ ಮಕ್ಕಳಿಗೆ ಮೊಟ್ಟೆ ನೀಡದೇ ಇರುವುದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಭಾರತದ ಮೇಲ್ಜಾತಿ ಆಹಾರ ಮೌಲ್ಯಗಳ ಪ್ರತಿಪಾದಕನಾದ ಬೆಂಗಳೂರು ಇಸ್ಕಾನ್ ನ ಕರ್ಮಠ ನಿಲುವಿನ ಪ್ರತಿಫಲ ಎಂದೇ ಈ ಎರಡೂ ವಿವಾದಗಳನ್ನು ನೋಡಲಾಗಿತ್ತು. ಈಗ ಬಿಸಿಯೂಟ ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇದನ್ನು ಓದಿ :ರಾಜ್ಯದಲ್ಲಿ ಈಗ ಪ್ರಾಧಿಕಾರದ ರಾಜಕೀಯ : ಸರಕಾರದ ನಿಲುವಿಗೆ ಚಿಂತಕರ ಆಕ್ರೋಶ

ಅಧಿಕಾರಶಾಹಿ ಮತ್ತು ರಾಜಕಾರಣಿಗಳ ಪ್ರಭಾವ ಬಳಸಿ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯಂತಹ ಮಹತ್ವದ ಯೋಜನೆಯನ್ನು ಇಸ್ಕಾನ್ ತನ್ನ ಕೈ ವಶ ಮಾಡಿಕೊಂಡಿತು. ಇಸ್ಕಾನ್ ಮತ್ತು ಕಾರ್ಪೊರೇಟ್ ಕುಳಗಳ ನಡುವಿನ ಈ ಪಾಲುದಾರಿಕೆ ಅಸ್ತಿತ್ವಕ್ಕೆ ಬರುವ ಮುನ್ನ ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂಬುದು ಒಂದು ಸಂಪೂರ್ಣ ಸ್ವಾಯತ್ತ ಸಮುದಾಯಿಕ ವ್ಯವಸ್ಥೆಯಾಗಿತ್ತು. ಈಗಲೂ ಅಕ್ಷಯಪಾತ್ರಾ ಯೋಜನೆ ತಲುಪದೇ ಇರುವ ಪ್ರದೇಶಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೆಯೇ ಮುಂದುವರಿದಿದೆ. ಈ ಪ್ರಭಾವವನ್ನು ಬಳಸಿಕೊಂಡು ಮಕ್ಕಳ ಅನ್ನಕ್ಕೆ ಕನ್ನ ಹಾಕಿದೆ. ಇದನ್ನು ನೋಡಿಯೂ ಸರಕಾರ ಮೌನ ವಹಿಸಿರುವುದು ಹಲವಾರು ಅನುಮಾನಗಳನ್ನು ಸೃಷ್ಟಿಸಿದೆ.

ಮಕ್ಕಳಿಗೆ ನೀಡಬೇಕಾದ ಬಿಸಿಯೂಟವನ್ನು ಸಮರ್ಪಕವಾಗಿ ವಿತರಿಸದೆ ಸರಕಾರ ಮಕ್ಕಳಿಗೆ ದ್ರೋಹವನ್ನು ಬಗೆದಿದೆ. ಈಗಲಾದರೂ ಎಚ್ಚೆತ್ತು ಆಹಾರ ಧಾನ್ಯಗಳು ಮಕ್ಕಳಿಗೆ ಶೀಘ್ರವಾಗಿ ತಲುಪುವಂತಾಗಲಿ, ಇಸ್ಕಾನ್ ನ ಅಕ್ಷಯ ಪಾತ್ರೆಯ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವುದರಿಂದ ಸರಕಾರ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬಹುದಾ? ಇಸ್ಕಾನ್ ನಿಂದ ಯೋಜನೆಯನ್ನು ವಾಪಸ್ ಪಡೆದು ಸರಕಾರವೇ ನಿರ್ವಹಣೆ ಮಾಡಬಹುದಾ? ಎಂದು ಕಾದು ನೋಡಬೇಕಿದೆ.

 

 

 

Donate Janashakthi Media

Leave a Reply

Your email address will not be published. Required fields are marked *