ಮಿಲಿಟರಿ-ರಾಜಪ್ರಭುತ್ವದ ವಿರುದ್ಧ ಥಾಯ್ಲೆಂಡಿನಲ್ಲಿ ಚಳವಳಿ

1973ರಲ್ಲಿ ರಚಿಸಲಾದ ಮತ್ತು ಹತ್ತಾರು ಬಾರಿ ಬದಲಾಯಿಸಲಾದ ಸಂವಿಧಾನ ರಾಜಕೀಯ ಮತ್ತು ಆಡಳಿತದಲ್ಲಿ ಮಿಲಿಟರಿ ಮತ್ತು ಪೋಲಿಸ್ ಗೆ ಯಾವುದೇ ಪ್ರಜಾಪ್ರಭುತ್ವದಲ್ಲಿ ಕಾಣಸಿಗದ ಪಾತ್ರವನ್ನು ಕೊಡುತ್ತದೆ. ಇದರ ವಿರುದ್ಧ ಚಳುವಳಿಗಳು ಏಳುತ್ತಲೇ ಇದ್ದವು.ಈಗಿನ ಚಳುವಳಿಗೆ 2019 ಚುನಾವಣೆಯಲ್ಲಿ  ಫ್ಯೂಚರ್ ಫಾರ್ವರ್ಡ್ ಪಕ್ಷವನ್ನು ಭಾರೀ ಪ್ರಮಾಣದಲ್ಲಿ ಬೆಂಬಲಿಸಿದ ವಿದ್ಯಾರ್ಥಿಯುವಜನರು ನಾಯಕತ್ವ ಕೊಡುತ್ತಿದ್ದಾರೆ. ಈಗ ಮಿಲಿಟರಿ ಮತ್ತು ರಾಜಪ್ರಭುತ್ವಗಳ ನಡುವಿನ ಹೊಂದಾಣಿಕೆ ಚಳುವಳಿಯ ಕೆಂಗಣ್ಣಿಗೆ ಗುರಿಯಾಗಿದ್ದು ಇಡೀ ರಾಜಕೀಯ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಯತ್ತ ಮುಖ ಮಾಡಿದೆ.

****************************

ಥಾಯ್ಲೆಂಡಿನ ವಿದ್ಯಾರ್ಥಿಗಳು ಸಮಗ್ರ ರಾಜಕೀಯ ಬದಲಾವಣೆಗಳಿಗಾಗಿ ಸರಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಸರಕಾರ ಮತ್ತು ಚಳುವಳಿಗಾರರ ನಡುವೆ  ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿದೆ. ಈ ವಾರ ರಾಜಧಾನಿಯಲ್ಲಿ ಪಾರ್ಲಿಮೆಂಟನ್ನು ಸುತ್ತುವರೆದಿದ್ದ ಸಾವಿರಾರು ಚಳುವಳಿಕಾರರನ್ನು ಚದುರಿಸಲು ಪೋಲಿಸರು ಜಲಫಿರಂಗಿ ಮತ್ತು ಅಶ್ರುವಾಯು ಬಳಸಬೇಕಾಯಿತು.ಪಾರ್ಲಿಮೆಂಟಿನ ಸುತ್ತ ಬ್ಯಾರಿಕೇಡುಗಳು ಮತ್ತು ಮುಳ್ಳು ಬೇಲಿಯನ್ನು ಹಾಕಿದ್ದರೂ, ಚಳುವಳಿಕಾರರರು ಪುನಃ ಒಂದುಗೂಡಿ ಅವುಗಳನ್ನು ಮುರಿದು ಪಾರ್ಲಿಮೆಂಟಿಗೆ ನುಗ್ಗಲು ಪ್ರಯತ್ನಿಸುತ್ತಲೇ ಇದ್ದರು. ಜಲಫಿರಂಗಿ ಮತ್ತು ಅಶ್ರುವಾಯುಗಳಿಂದ ಗಾಯಗೊಂಡ ಹಲವು ಚಳುವಳಿಕಾರರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

2014ರಲ್ಲಿ ಮಿಲಿಟರಿ ಕ್ಷಿಪ್ರದಂಗೆಯ ಮೂಲಕ ಅಧಿಕಾರಕ್ಕೆ ಬಂದ ಮತ್ತು 2019ರಲ್ಲಿ ನಡೆದ ಚುನಾವಣೆಯ ಫಲಿತಾಂಶಕ್ಕೆ ಮಾನ್ಯತೆ ಕೊಡದೆ, ಮಿಲಿಟರಿ ನೇಮಿಸಿ ರಚಿತವಾದ ಪ್ರಧಾನಿ ಪ್ರಯುತ್ ಚಾನ್-ಒ-ಚಾನ್ ಸರಕಾರ ತೊಲಗಬೇಕು. ಪಾರ್ಲಿಮೆಂಟನ್ನು ವಿಸರ್ಜಿಸಬೇಕು. ಸಂವಿಧಾನವನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗುವಂತೆ ಬದಲಾಯಿಸಬೇಕು. ಮಿಲಿಟರಿ ಮತ್ತು ರಾಜಪ್ರಭುತ್ವಕ್ಕೆ ಕೊಟ್ಟ ವಿಪರೀತ ಅಧಿಕಾರಗಳನ್ನು ಮೊಟಕುಗೊಳಿಸಬೇಕು. ರಾಜಕೀಯ ಭಿನ್ನಮತೀಯರ ಮೇಲೆ ದಾಳಿ, ಬಂಧನ ಮತ್ತಿತರ ನಿರ್ಬಂಧಗಳನ್ನು ತೆರವುಗೊಳಿಸಬೇಕು, ಎಂಬುದು ವಿದ್ಯಾರ್ಥಿಗಳು ನಾಯಕತ್ವ ಕೊಡುತ್ತಿರುವ ಸರಕಾರ-ವಿರೋಧಿ ಚಳುವಳಿಯ ಪ್ರಮುಖ ಹಕ್ಕೊತ್ತಾಯಗಳು.ಪಾರ್ಲಿಮೆಂಟ್ ಸಂವಿಧಾನದ ಏಳು ಪ್ರಜಾಸತ್ತಾತ್ಮಕ ಸುಧಾರಣೆಯ ಪ್ರಸ್ತಾವಗಳ ಚರ್ಚೆ ಮಾಡುತ್ತಿದ್ದು ಅವನ್ನು ಮಂಜೂರು ಮಾಡಲು ಚಳುವಳಿಕಾರರು ಒತ್ತಾಯಿಸುತ್ತಿದ್ದಾರೆ. ಪಾರ್ಲಿಮೆಂಟ್ ಅದನ್ನು ಮಂಜೂರು ಮಾಡುವ ಸಾಧ್ಯತೆ ಕಡಿಮೆಯಿದ್ದು ಹೊಸ ಸಂವಿಧಾನ ಬರೆಯಲು ಒಂದು ಸಮಿತಿಯನ್ನು ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಥಾಯ್ಲೆಂಡ್ ಸಾಂವಿಧಾನಿಕ ರಾಜಪ್ರಭುತ್ವವಾಗಿದೆ.ಇಲ್ಲಿ ರಾಜಪ್ರಭುತ್ವ ರಾಜಕೀಯದಿಂದ ‘ಮೇಲಿದೆ’ ಮತ್ತು ದೈನಂದಿನ ಆಡಳಿತ.ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ ರಾಜಪ್ರಭುತ್ವವನ್ನು ಟೀಕೆ-ನಿಂದನೆ ಮಾಡಿದರೆ 5-15 ವರ್ಷಗಳ ವರೆಗೆ ಜೈಲುಶಿಕ್ಷೆಯ ಕಠಿಣ ಶಿಕ್ಷೆಗೆ ಸಿದ್ಧವಾಗಿರಬೇಕು. ಆದರೂ ಅದನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಇತರರು ದೊಡ್ಡ ಸಂಖ‍್ಯೆಯಲ್ಲಿ ಈಗಿನ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುವ ರಾಜನ ವರ್ತನೆ ಟೀಕಿಸಿ ಆತನ ಅಧಿಕಾರಗಳ ಮತ್ತು ಖರ್ಚಿನ ಮೇಲೆ ಮಿತಿ ಹೇರಬೇಕು. ರಾಜಪ್ರಭುತ್ವದ ಟೀಕೆಯನ್ನು ಶಿಕ್ಷಾರ್ಹ ಅಪರಾಧವಾಗಿಸುವ ಕಾನೂನನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂಬುದು ವಿಶೇ಼ಷ.ಹಿಂದಿನ ಎಲ್ಲಾ ರಾಜಕೀಯ ಚಳುವಳಿಗಳು ಆಗಿನ ಸರಕಾರವನ್ನು ಪ್ರಶ್ನೆ ಮಾಡಿದರೂ, ಹಿಂದೆಂದೂ ರಾಜಪ್ರಭುತ್ವದ ಪಾತ್ರವನ್ನು ಪ್ರಶ್ನಿಸಿರಲಿಲ್ಲ.

ಇದಕ್ಕೆ ಕಾರಣ ಬಹುವಾಗಿ ಗೌರವಿಸಲ್ಪಡುತ್ತಿದ್ದ ಹಿಂದಿನ ರಾಜ ಭೂಮಿಪೊಲ್.2017ರಲ್ಲಿ ನಿಧನ ಹೊಂದಿ,ಯುವರಾಜ ವಜೀರಲೊಂಗಕಾರ್ನ್ ರಾಜನಾಗಿದ್ದು. ಹಿಂದಿನ ರಾಜ ಭೂಮಿಪೊಲ್ ರಾಜಕೀಯದಿಂದ ದೂರವಿದ್ದು ಸಂವಿಧಾನದ ಪ್ರಕಾರ ಬರಿಯ ಸಾಂವಿಧಾನಿಕ ಔಪಚಾರಿಕ ಸರಕಾರದ ಮುಖ್ಯಸ್ಥನಾಗಿದ್ದ. ಆದರೆ ಈಗಿನ ರಾಜನ ಶೈಲಿ ಭಿನ್ನವಾಗಿದೆ. ಆತ ರಾಜಪ್ರಭುತ್ವದ ಶತಕೋಟ್ಯಾಂತರ ಡಾಲರುಗಳ ಮೌಲ್ಯದ ಆಸ್ತಿಯ ಮೇಲೆ ನಿಯಂತ್ರಣ ಸಾಧಿಸಿ ನೇರ ನಿರ್ವಹಣೆ ಆರಂಭಿಸಿದ್ದಾನೆ. ಥಾಯ್ಲೆಂಡಿನ ಹಲವು ಬ್ಯಾಂಕು, ಉದ್ಯಮಗಳಲ್ಲಿ ಶೇರುಗಳನ್ನು ಮತ್ತು ಅಗಾಧ ಪ್ರಮಾಣದ ಭೂಮಿಯನ್ನು ಖರೀದಿಸಿದ್ದಾನೆ.ಆತನ ಪ್ಲೇಬಾಯ್ ರೀತಿಯ ಐಶಾರಾಮಿ ಜೀವನ ಶೈಲಿ, ಹೆಚ್ಚಿನ ಸಮಯವನ್ನು ಜರ್ಮನಿಯಲ್ಲಿ ಕಳೆಯುವುದು ತೀವ್ರ ಟೀಕೆಗೆ ಒಳಗಾಗಿದೆ. ಇವಲ್ಲದೆ ರಾಜಧಾನಿ ಬ್ಯಾಂಗ್ ಕಾಕ್ ನ ಎರಡು ಮಿಲಿಟರಿ ರೆಜಿಮೆಂಟಿನ ನಾಯಕತ್ವವನ್ನು ನೇರವಾಗಿ ವಹಿಸಿಕೊಂಡಿದ್ದಾನೆ.

ಈ ಚಳುವಳಿಗಳು ಜನವರಿಯಲ್ಲೇ ಆರಂಭವಾಗಿದ್ದು ಕೊವಿಡ್ ನಂತರದ ಲಾಕ್ ಡೌನ್ ಅವಧಿಯಲ್ಲಿ ಸಹಜವಾಗಿಯೇ ನಿಂತಿತ್ತು. ಆದರೆ ಜುಲೈನಿಂದ ಈ ಚಳುವಳಿ ಮತ್ತೆ ಗರಿಗೆದರಿಕೊಂಡಿದ್ದು ಸತತವಾಗಿ ಮುಂದುವರೆಯುತ್ತಿವೆ. ಸರಕಾರದ ದಮನದ ಕ್ರಮಗಳು, ಚಳುವಳಿಕಾರರ ತಾಳ್ಮೆಕೆಡಿಸುವ ಪ್ರಯತ್ನಗಳೂ ಯಾವುವೂ ಅವನ್ನು ದುರ್ಬಲಗೊಳಿಸಲು ಸಾಧ್ಯವಾಗಿಲ್ಲ. 2014ರಲ್ಲಿ ಮಿಲಿಟರಿ ಕ್ಷಿಪ್ರದಂಗೆಯಲ್ಲಿ ಮಿಲಿಟರಿ ಅಧಿಕಾರಿ ಮತ್ತು ಈಗಿನ ಪ್ರಧಾನಿ ಪ್ರಯುತ್ ಅಧಿಕಾರ ವಹಿಸಿಕೊಂಡಿದ್ದ. ಭಾರೀ ಒತ್ತಡದ ನಂತರ 2019ರಲ್ಲಿ ಚುನಾವಣೆ ನಡೆದು ಫ್ಯೂಚರ್ ಫಾರ್ವರ್ಡ್ ಎಂಬ ಪಕ್ಷ ಬಹಮುತ ಪಡೆಯಿತು. ಆದರೆ ಕ್ಷುಲ್ಲಕ ತಾಂತ್ರಿಕ-ಕಾನೂನಾತ್ಮಕ ಕಾರಣಗಳನ್ನು ಕೊಟ್ಟು ಆ ಪಕ್ಷವನ್ನೇ ಅಮಾನ್ಯಗೊಳಿಸಲಾಯಿತು. ಪಾರ್ಲಿಮೆಂಟ್ ಮತ್ತೆ ಮಿಲಿಟರಿ ಅಧಿಕಾರಿ ಪ್ರಯುತ್ ನನ್ನೇ ಪ್ರಧಾನಿಯಾಗಿ ನೇಮಿಸಿತ್ತು.

1973ರಲ್ಲಿ ರಚಿಸಲಾದ ಮತ್ತು ಹತ್ತಾರು ಬಾರಿ ಬದಲಾಯಿಸಲಾದ ಸಂವಿಧಾನ ರಾಜಕೀಯ ಮತ್ತು ಆಡಳಿತದಲ್ಲಿ ಮಿಲಿಟರಿ ಮತ್ತು ಪೋಲಿಸ್ ಗೆ ಯಾವುದೇ ಪ್ರಜಾಪ್ರಭುತ್ವದಲ್ಲಿ ಕಾಣಸಿಗದ ಪಾತ್ರವನ್ನು ಕೊಡುತ್ತದೆ. ಇದರ ವಿರುದ್ಧ ಚಳುವಳಿಗಳು ಏಳುತ್ತಲೇ ಇದ್ದವು.ಈಗಿನ ಚಳುವಳಿಗೆ 2019ರ ಚುನಾವಣೆಯಲ್ಲಿ ಫ್ಯೂಚರ್ ಫಾರ್ವರ್ಡ್ ಪಕ್ಷವನ್ನು ಭಾರೀ ಪ್ರಮಾಣದಲ್ಲಿ ಬೆಂಬಲಿಸಿದ ವಿದ್ಯಾರ್ಥಿ-ಯುವಜನರು ನಾಯಕತ್ವ ಕೊಡುತ್ತಿದ್ದಾರೆ. ಫ್ಯೂಚರ್ ಫಾರ್ವರ್ಡ್ ಕಾರ್ಯಕರ್ತರನ್ನು ನಾಯಕರನ್ನು ನಿರ್ಬಂಧಗಳು, ಬಂಧನಗಳಿಗೆ ಒಳಪಡಿಸಿದ್ದರ ವಿರುದ್ಧ ವಿಪರೀತವಾಗಿ ಆಕ್ರೋಶಗೊಂಡಿದ್ದಾರೆ. ಈಗ ಮಿಲಿಟರಿ ಮತ್ತು ರಾಜಪ್ರಭುತ್ವಗಳ ನಡುವಿನ ಹೊಂದಾಣಿಕೆ ಈ ಚಳುವಳಿಯ ಕೆಂಗಣ್ಣಿಗೆ ಗುರಿಯಾಗಿದ್ದು ಇಡೀ ರಾಜಕೀಯ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಯತ್ತ ಮುಖ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *