ಮಡಿಕೇರಿ: ಕಾಫಿತೋಟಗಳಲ್ಲಿ ಆಹಾರ ಅರಸಿ ಬಂದ ಕಾಡಾನೆಯೊಂದು ವಿದ್ಯುತ್ ತಂತಿ ಸ್ಪರ್ಶದಿಂದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮಂಚಳ್ಳಿಯಲ್ಲಿ ನಡೆದಿದೆ.
ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಎಂ.ಜಿ.ಕುಶಾಲಪ್ಪ ಎಂಬುವವರ ಕಾಫಿ ತೋಟಕ್ಕೆ ಕಾಡಿನಿಂದ ಆಹಾರ ಅರಸಿ ಬಂದಿದೆ. ಈ ವೇಳೆ ತೋಟದೊಳಗೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ಆನೆಗೆ ತಗುಲಿದೆ. ಹೀಗಾಗಿ 20 ವರ್ಷದ ಹೆಣ್ಣಾನೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದೆ. ವಿದ್ಯುತ್ ಶಾಕ್ ತಗುಲಿದ ರಭಸಕ್ಕೆ ಆನೆಯ ಹೊಟ್ಟೆ ಒಡೆದು ಕರುಳು ಹೊರಗೆ ಬಂದಿವೆ. ಹೈಟಿನ್ಷನ್ ವಿದ್ಯುತ್ ವೈಯರ್ ತಗುಲಿದ್ದರಿಂದ ಆನೆ ಒಂದು ಮಗ್ಗುಲಿನ ಭಾಗ ಕಪ್ಪಾಗುವಂತೆ ಸುಟ್ಟುಹೋಗಿದೆ.
ಸ್ಥಳಕ್ಕೆ ಶ್ರೀಮಂಗಲ ಎಸಿಎಫ್ ಉತ್ತಪ್ಪ ಮತ್ತು ಆರ್ ಎಫ್ಓ ವೀರೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪಶುವೈದ್ಯ ಗಿರೀಶ್ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಿದ್ಯುತ್ ಸ್ಪರ್ಶದಿಂದ ದಾರುಣವಾಗಿ ಆನೆ ಸಾವನ್ನಪ್ಪಿರುವುದು ನೋಡುಗರ ಮನಕಲಕುವಂತೆ ಮಾಡಿದೆ.