- ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆ
ಅಂಬಾಲಾ: ಮಾರಕ ಕೊರೊನಾ ವೈರಸ್ಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯನ್ನು, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಸ್ವೀಕರಿಸಿದ್ದಾರೆ.
ಅಂಬಾಲಾದ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಅನಿಲ್ ವಿಜ್ ಅವರ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಅನಿಲ್ ವಿಜ್ ಸ್ವಯಂಪ್ರೇರಿತರಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ತಮ್ಮ ಮೇಲೆ ಪ್ರಯೋಗ ಮಾಡುವಂತೆ ಕೋರಿಕೊಂಡಿದ್ದರು. ಅನಿಲ್ ವಿಜ್ ಆರೋಗ್ಯ ಸ್ಥಿರವಾಗಿದ್ದು, ಲಸಿಕೆ ಪಡೆದ ಮೇಲೆ ಅವರ ದೇಹದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಹರಿಯಾಣದಲ್ಲಿ ಮಾರಕ ಕೊರೊನಾ ವೈರಸ್ಗೆ ಸಂಶೋಧನಾ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆಯ, ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ನಡೆಯುತ್ತಿದೆ. ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ದೇಶದಾದ್ಯಂತ ಗಮನ ಸೆಳೆದಿದೆ.
ಹರಿಯಾಣದ ರೋಹ್ಟಕ್ನ ಪಂಡಿತ್ ಭಗವತ್ ದಯಾಳ್ ಶರ್ಮಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಫರಿದಾಬಾದ್ನ ಇಎಸ್ಐಸಿ ಆಸ್ಪತ್ರೆಗಳಲ್ಲೂ ಕೊವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ನಡೆಯಲಿದೆ.