– ಚೊಚ್ಚಲ ಕಪ್ ಅವಕಾಶ ಕೈಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್
ದುಬೈ: ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಅಮೋಘ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದೆ. ಬ್ಯಾಟ್ಸ್ಮನ್ಗಳ ಹಾಗೂ ಬೌಲರ್ಗಳ ಪ್ರಚಂಡ ಆಟದ ನೆರವಿನಿಂದ ಮುಂಬೈ 5 ವಿಕೆಟ್ಗಳ ಜಯ ಸಾಧಿಸಿ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡು ಸಾಧನೆ ಮಾಡಿದೆ. ಇತ್ತ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸು ತೊಟ್ಟಿದ್ದ ಡೆಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಡೆಲ್ಲಿ ನೀಡಿದ್ದ 157 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮೊದಲ 4 ಓವರ್ನಲ್ಲೇ 45 ರನ್ ಚಚ್ಚಿದರು. ಆದರೆ, 5ನೇ ಓವರ್ನಲ್ಲಿ ಕೀಪರ್ಗೆ ಕ್ಯಾಚಿತ್ತು ಡಿಕಾಕ್(20) ಔಟ್ ಆದರು.
ರೋಹಿತ್ ಜೊತೆ ಚೆನ್ನಾಗಿಯೆ ಆಡುತ್ತಿದ್ದ ಸೂರ್ಯಕುಮಾರ್(19) ರನೌಟ್ಗೆ ಬಲಿಯಾದರು. ಬಳಿಕ ಇಶಾನ್ ಕಿಶನ್ ಜೊತೆಯಾದ ರೋಹಿತ್ ನಾಯಕನ ಆಟವಾಡಿದರು, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ರೋಹಿತ್ 51 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಬಾರಿಸಿ 68 ರನ್ ಚಚ್ಚಿದರು. ಇವರಿಗೆ ಉತ್ತಮ ಸಾತ್ ನೀಡಿದ ಕಿಶನ್ 19 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿದರು. ಪರಿಣಾಮ ಮುಂಬೈ 18.4 ಓವರ್ನಲ್ಲೇ 5 ವಿಕೆಟ್ ನಷ್ಟಕ್ಕೆ 157 ರನ್ ಬಾರಿಸುವ ಮೂಲಕ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್ನ ಮೊದಲ ಎಸೆತದಲ್ಲೇ ಟ್ರೆಂಟ್ ಬೌಲ್ಡ್ ಬೌಲಿಂಗ್ನಲ್ಲಿ ಮಾರ್ಕಸ್ ಸ್ಟಾಯಿನಿಸ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸದರು. ಬೌಲ್ಟ್ 2ನೇ ಓವರ್ನಲ್ಲಿ ಅಜಿಂಕ್ಯಾ ರಹಾನೆ(2) ಬ್ಯಾಟ್ ಕೆಳಗಿಟ್ಟರು. ಜಯಂತ್ ಯಾದವ್ ಸ್ಪಿನ್ ಮೋಡಿಗೆ ಶಿಖರ್ ಧವನ್(15) ಬೌಲ್ಡ್ ಆದರು.
ಈ ಸಂದರ್ಭ ಒಂದಾದ ರಿಷಭ್ ಪಂತ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ತಂಡದ ರನ್ ಗತಿಯನ್ನು ನಿಧಾನವಾಗಿ ಏರಿಸಲು ಶ್ರಮಪಟ್ಟ ಈ ಜೋಡಿ ಸೆಟ್ ಆದ ನಂತರ ಆರ್ಭಟಿಸಲು ಶುರುಮಾಡಿದರು. ಅದರಂತೆ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಬಳಿಕ ಹೆಚ್ಚುಹೊತ್ತು ನಿಲ್ಲದ ಪಂತ್ 38 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 56 ರನ್ಗೆ ಹೊರನಡೆದರು. ಈ ಜೋಡಿ ಬರೋಬ್ಬರಿ 96 ರನ್ಗಳ ಜೊತೆಯಾಟ ಆಡಿತು.
ಶಿಮ್ರೋನ್ ಹೆಟ್ಮೇರ್ ಕೇವಲ 5 ರನ್ಗೆ ಔಟ್ ಆದರು. ಈ ನಡುವೆ ಅಯ್ಯರ್ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಮುಂಬೈ ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನಡುವೆಯೂ ಅಯ್ಯರ್ ರನ್ ಏರಿಸಲು ಹೋರಾಟ ನಡೆಸಿದರು. ಅಯ್ಯರ್ 50 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 65 ರನ್ ಬಾರಿಸಿದರು.
ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತರೆ, ನಥನ್ ಕಲ್ಟರ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.