ಬೈಡನ್ ಏಕೆ ಭಾರೀ ಅಂತರದಿಂದ ಗೆಲ್ಲಲಿಲ್ಲ?

 

ಟ್ರಂಪ್ ಸೋತರೆ ಅದರಷ್ಟಕ್ಕೆ ಅದು ಒಂದು ಮಹತ್ವದ ರಾಜಕೀಯ ಬೆಳವಣಿಗೆಯೇ. ಜಾಗತಿಕವಾಗಿ ಅಪಾಯಕಾರಿಯಾಗಿ ಫ್ಯಾಸಿಸ್ಟ್ ದಿಕ್ಕಿನಲ್ಲಿ ಬೆಳೆಯುತ್ತಿರುವ ಉಗ್ರ ಬಲಪಂಥೀಯ ರಾಜಕಾರಣಕ್ಕೆ ಒಂದು ಹಿನ್ನಡೆಯೇ. ಟ್ರಂಪ್ ಸೋಲು ಸಂತೋಷಕರ ಬೆಳವಣಿಗೆಯೇ. ಆದರೆ ಬೈಡನ್ ಜಯದ ಬಗ್ಗೆ ಹಿಗ್ಗುವ ಪರಿಸ್ಥಿತಿ ಇಲ್ಲ.

ವಸಂತರಾಜ ಎನ್.ಕೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಭಾರೀ ಅಂತರದಿಂದ ಟ್ರಂಪನ್ನು ಸೋಲಿಸುತ್ತಾರೆ ಎಂಬ ನಿರೀಕ್ಷೆ ಮತ್ತು ಚುನಾವಣಾ-ಪೂರ್ವ ಸಮೀಕ್ಷೆಗಳ ‘ಭವಿಷ್ಯ’ಮತ್ತೆ ಮುಗ್ಗರಿಸಿವೆ.   ಟ್ರಂಪ್ ಗೆ ತಮ್ಮ ಮತಗಳನ್ನು ಉಳಿಸಿಕೊಳ್ಳಲು ಮಾತ್ರವಲ್ಲ, ಬೆಳೆಸಲು ಸಾಧ್ಯವಾಗಿದೆ. ಭಾರಿ ಪ್ರಮಾಣದ ಮತದಾನದಿಂದ ಬೈಡನ್ ಅಮೆರಿಕದ ಚರಿತ್ರೆಯಲ್ಲೇ ಅತ್ಯಂತ ಹೆಚ್ಚು ಮತ ಗಳಿಸಿದರೆ, (7.56 ಕೋಟಿ) ಟ್ರಂಪ್ ಒಬಾಮ ಸೇರಿದಂತೆ ಹಿಂದೆ ಗೆದ್ದ ಎಲ್ಲ ಅಧ್ಯಕ್ಷೀಯ ಅಭ‍್ಯರ್ಥಿಗಳಿಗಿಂತ ಹೆಚ್ಚು ಮತ (7.10) ಪಡೆದಿದ್ದಾರೆ.  ಬೈಡನ್ ಶೇ. 50.7 ಮತ್ತು ಟ್ರಂಪ್ 47.6 ಮತ ಪಡೆದಿದ್ದು, ಮತಗಳಿಕೆ ವ್ಯತ್ಯಾಸ ಸಹ 46 ಲಕ್ಷದಷ್ಟು (ಶೇ.3.1) ಅಷ್ಟೇ. ಆರು ರಾಜ್ಯಗಳಲ್ಲಿ ಮತಗಳಿಕೆ ಪ್ರಮಾಣ ಎರಡು ಅಭ‍್ಯರ್ಥಿಗಳ ನಡುವೆ ಶೇ.1ಕ್ಕಿಂತಲೂ ಕಡಿಮೆಯಿದೆ.

ಡೆಮೊಕ್ರಾಟಿಕ್ ಅಧ್ಯಕ್ಷೀಯ ಆಭ್ಯರ್ಥಿಯ ಆಯ್ಕೆಯಲ್ಲಿ ಸ್ಪಷ್ಟ ಜನಪರ ಬದಲಿ ನೀತಿಗಳನ್ನು ಪ್ರತಿಪಾದಿಸುವ ಎಡಪಂಥೀಯ ಅಭ್ಯರ್ಥಿ (ಬರ್ನಿ ಸ್ಯಾಂಡರ್ಸ್) ನಡುಪಂಥೀಯ ಮತಗಳನ್ನು ಪಡೆಯುವುದಿಲ್ಲ. ಬೈಡನ್ ಎಡ ಮತ್ತು ನಡುಪಂಥೀಯ ಎರಡೂ ಮತಗಳನ್ನು ಪಡೆದು ಗೆಲ್ಲಬಲ್ಲ ‘ಸುಭದ್ರ ಅಭ್ಯರ್ಥಿ.  ಆದ್ದರಿಂದ ಟ್ರಂಪನ್ನು ಭಾರೀ ಅಂತರದಿಂದ ಸೋಲಿಸುತ್ತಾರೆ ಎಂಬ ಅಂದಾಜು ಸಹ ತಪ್ಪು ಎಂದು ಸಾಬೀತಾಗಿದೆ. ಟ್ರಂಪ್ ನ ಬೆಂಬಲಿಗರ ಸಂಘಟಿತ ವಲಯದಲ್ಲಿ ಉದ್ಯೋಗ ಕಳೆದುಕೊಂಡ ಬಿಳಿಯ ಕಾರ್ಮಿಕರ, ಬಡ ಮತ್ತು ಕೆಳ-ಮಧ್ಯಮ ವರ್ಗದ ಬಿಳಿಯರ ವಿಭಾಗವನ್ನು ಬರ್ನಿ ಸ್ಯಾಂಡರ್ಸ್ ರಂತಹ ಅಭ್ಯರ್ಥಿ ಮತ್ತು ಬದಲಿ ನೀತಿಗಳಿಂದ ಆಕರ್ಷಿಸುವ ಸಾಧ್ಯತೆ ಇತ್ತು. ತೀವ್ರ ಕೊವಿದ್ ಆರೋಗ್ಯ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟಿನ ನಿರ್ವಹಣೆ ಮತ್ತು ಬಂಡವಾಳಶಾಹಿ ಧೋರಣೆಗಳ ಘೋರ ವೈಫಲ್ಯಕ್ಕೆ ಟ್ರಂಪ್ ಅವರ ಆಡಳಿತವು ಪ್ರತೀಕವಾಗಿತ್ತು, ಅದಕ್ಕೆ ಬದಲಿ ನೀಡುವ, ಬಂಡವಾಳಶಾಹಿ-ವಿರೋಧಿ ದಿಟ್ಟ ನೀತಿಗಳ ಮೂಲಕ ಟ್ರಂಪ್ ಅವರನ್ನು ಇನ್ನೂ ಸುಲಭವಾಗಿ ಮತ್ತು ನಿರ್ಣಾಯಕವಾಗಿ ಸೋಲಿಸಬಹುದಿತ್ತು ಎಂದೂ ಹೇಳಲಾಗಿದೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ. ಭಾರೀ ಮತದಾನದ ಪ್ರಮಾಣದಿಂದ, ದೊಡ್ಡ ಜನವಿಭಾಗಗಳು ಟ್ರಂಪ್ ನ್ನು ಸೋಲಿಸಲು ಪಣ ತೊಟ್ಟಂತೆ ಕಾಣುತ್ತದೆ. ಆದರೆ ಚುನಾವಣಾ ಪ್ರಚಾರದಲ್ಲಿ ಬೈಡನ್ ಅವರು ಟ್ರಂಪ್ ಶೈಲಿ ಮತ್ತು ಅತಿರೇಕಗಳ ಕುರಿತು ಟೀಕಿಸಿದರೆ ವಿನಹ ಅವರ ಆರ್ಥಿಕ ಸಾಮಾಜಿಕ ನೀತಿಗಳ ಮೂಲಭೂತ ವಿಮರ್ಶೆಯನ್ನು ಮಾಡಲಿಲ್ಲ ಅಥವಾ ಅದಕ್ಕೆ ಬದಲಿ ನೀತಿಗಳನ್ನು ಜನರ ಮುಂದೆ ಇಡಲಿಲ್ಲ. ಅಮೆರಿಕದ ಕೊವಿದ್ ದುರಂತ ಕತೆ ಟ್ರಂಪ್ ತಿಕ್ಕಲುತನದಿಂದ ಇನ್ನಷ್ಟು ಭೀಕರವಾಗಿರಬಹುದು. ಆದರೆ ಅದಕ್ಕೆ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಅಭಾವ, ಕೆಳ ಮಧ್ಯಮ ಮತ್ತು ಬಡವರಿಗೆ ನಿಲುಕುವ ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸುವುದರಲ್ಲಿ ತೀವ್ರ ವೈಫಲ್ಯ, ದೈತ್ಯ ವಿಮಾ ಮತ್ತು ಔಷಧಿ ಕಂಪನಿಗಳ ಸೂಪರ್ ಲಾಭವನ್ನು ಕಾಪಾಡುವುದು ಆದ್ಯತೆಯಾಗಿರುವುದು ಮೂಲ ಕಾರಣ.  ಇದನ್ನು ಆಮೂಲಾಗ್ರವಾಗಿ ಬದಲಾಯಿಸುವ ಅಥವಾ ಈ ಮಹಾಸೋಂಕಿನ ಸನ್ನಿವೇಶದಲ್ಲಿ ಬಡ ಮಧ್ಯಮ ವರ್ಗಗಳಿಗೆ ಅತ್ಯಗತ್ಯ ನೆರವು ನೀಡುವ ದಿಟ್ಟ ಯೋಜನೆಗಳು ಬರಲಿಲ್ಲ.  ಅದೇ ರೀತಿ ೧೯೩೦ರ ಮಹಾ ಕುಸಿತದ ನಂತರದ ಅತ್ಯಂತ ಭೀಕರ ನಿರುದ್ಯೋಗ ನಿರ್ಮೂಲನಕ್ಕೆ ಮತ್ತು ಕೊವಿದ್ ಜರ್ಝರಿತ ಆರ್ಥಿಕವನ್ನು ಪುನರುತ್ತೇಜಿಸಲು ಬೇಡಿಕೆ ಹೆಚ್ಚಿಸಲು ಜನರಿಗೆ ಆದಾಯ ನೀಡುವ ದಿಟ್ಟ ಹೊಸ ಕಾರ್ಯಕ್ರಮಗಳೂ ಇರಲಿಲ್ಲ.  ಎಲ್ಲರಿಗೂ ಆರೋಗ್ಯ ವಿಮೆ ಮತ್ತು 1930ರ ಬಿಕ್ಕಟ್ಟು ಪರಿಹಾರ ಮಾದರಿಯ ‘ಗ್ರೀನ್ ನ್ಯೂ ಡೀಲ್’ ಕುರಿತು ಮಾತು ಬಂದರೂ ಅದು ಕಾರ್ಯಕ್ರಮದ ಪ್ರಚಾರದ ಪ್ರಧಾನ ಅಂಶವಾಗಲಿಲ್ಲ.

ಒಬಾಮ ಶಾಂತಿ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆ ಸ್ಥಾಫಿಸುವ (ಅದನ್ನು ಜಾರಿ ಮಾಡುವುದರಲ್ಲಿ ವಿಫಲರಾದರೂ) ಭರವಸೆ ಮೂಡಿಸಿದ್ದರಿಂಧ ಭಾರೀ ಅಂತರದಿಂದ ವಿಜಯ ಸಾಧಿಸಿದ್ದರು  ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಇಂತಹ ಭರವಸೆ ಮತ್ತು ಉತ್ಸಾಹ ಸೃಷ್ಟಿಸಿದ ಬರ್ನಿ ಸ್ಯಾಂಡರ್ಸ್ ಅವರನ್ನು ಮತ್ತು ಬಂಡವಾಳಶಾಹಿ-ವಿರೋಧಿ ಟೀಕೆಯನ್ನು ಡೆಮೊಕ್ರಾಟಿಕ್ ಅಧ್ಯಕ್ಷೀಯ ಚುನಾವಣೆಯಿಂದ ವ್ಯವಸ್ಥಿತವಾಗಿ ಸುಸಂಘಟಿತವಾಗಿ ಹೊರಗೆ ಇಡಲಾಯಿತು. ಚುನಾವಣಾ ಪೂರ್ವ ಸಮೀಕ್ಷೆಯೊಂದರಲ್ಲಿ ಯುವಜನರಲ್ಲಿ ಅರ್ಧದಷ್ಟು ಜನ ನಮಗೆ ಸಮಾಜವಾದ ಬೇಕು ಎಂದಿದ್ದರು ಎಂದು ವರದಿಯಾಗಿತ್ತು. ಇದರಿಂದಾಗಿ ಆರ್ಥಿಕ-ಸಾಮಾಜಿಕ ವಿಷಯಗಳ ಬದಲು ಟ್ರಂಪ್ ಎಬ್ಬಿಸಿದ ಕೆಲವು ಭಾವನಾತ್ಮಕ (ವಲಸೆಗಾರರನನು ಹೊರಗಿಡಬೇಕು, ಅಮೆರಿಕ ಬಿಳಿಯರದ್ದು, ಕುಡುಡು ಚೀನಾ-ದ್ವೇಷ, ಉಗ್ರ ರಾಷ್ಟಿçÃಯವಾದ) ಮತ್ತು ಅತಾರ್ಕಿಕ (ಕೊವಿದ್ ಅಪಾಯಕಾರಿಯಲ, ಹವಾಮಾನ ಬದಲಾವಣೆ ಬೊಗಳೆ) ವಿಷಯಗಳೇ ಪ್ರಧಾನವಾದವು. ಈ ವಿಷಯಗಳಲ್ಲೂ ಬೈಡನ್ ದೃಢ ನಿಲುವುಗಳನ್ನು ಮುಂದಿಡಲಿಲ್ಲ.

ಇದಕ್ಕೆ ಕಾರಣ ಸ್ಪಷ್ಟ. ಬೈಡನ್ ಅಮೆರಿಕವನ್ನು (ಮಾತ್ರವಲ್ಲ ಜಗತ್ತನ್ನು) ಆಳುತ್ತಿರುವ ಸಣ್ಣ ಅತಿ ಶ್ರೀಮಂತ ದೈತ್ಯ ಕಾರ್ಪೊರೆಟ್ ಕಂಪನಿಗಳ ಪ್ರತಿನಿಧಿಯೇ. ಇದು ಬೈಡನ್ ಎತ್ತಿದ ಅಧ್ಯಕ್ಷೀಯ ಚುನಾವಣಾ ವಂತಿಗೆಯಿಂದಲೇ ಸ್ಪಷ್ಟವಾಗುತ್ತದೆ. ಅಕ್ಟೋಬರ್ 26ರವರೆಗೆ ಟ್ರಂಪ್ 59.6 ಮತ್ತು ಬೈಡನ್ 93.8 ಕೋಟಿ ಡಾಲರುಗಳಷ್ಟು ಖರ್ಚು ಮಾಡಿದ್ದಾರೆ. ಇತರ ಅಧ್ಯಕ್ಷೀಯ (ಪ್ರಾಥಮಿಕ ಚುನಾವಣೆಗಳಲ್ಲಿ ಸೋತ) ಅಭ್ಯರ್ಥಿಗಳು 216 ಕೋಟಿ ಮತ್ತು ಎಲ್ಲ ಅಭ್ಯರ್ಥಿಗಳು ಸೇರಿ ಒಟ್ಟು 369 ಕೋಟಿ ಡಾಲರುಗಳು ಖರ್ಚು ಮಾಡಿದ್ದಾರೆ. ಇದರಲ್ಲಿ ದೊಡ್ಡ ಪಾಲು ಅಮೆರಿಕದ ಎಲ್ಲಾ ಕ್ಷೇತ್ರಗಳ ದೈತ್ಯ ಕಾರ್ಪೊರೆಟುಗಳೇ ಕೊಟ್ಟಿರುವುದು. ಮತ್ತು ಹೆಚ್ಚಿನ ಕಂಫನಿಗಳು ಎರಡೂ ಅಭ್ಯರ್ಥಿಗಳಿಗೆ ವಂತಿಗೆ ಕೊಡುತ್ತವೆ. ಕೆಲವು ಕಂಪನಿಗಳು ಒಬ್ಬರಿಗೆ ಹೆಚ್ಚು, ಇನ್ನೊಬ್ಬರಿಗೆ ಕಡಿಮೆ ಅಷ್ಟೇ. ಆದ್ದರಿಂದ ಬೈಡನ್ ರಿಂದ ಅಮೆರಿಕದಲ್ಲಿ ಅಥವಾ ಜಾಗತಿಕವಾಗಿ ಯಾವುದೇ ಪ್ರಮುಖ ಬದಲಾವಣೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಟ್ರಂಪ್ ತಮ್ಮ ಧೋರಣೆಗಳನ್ನು ಜನರನ್ನು ಉದ್ದೇಶಿಸಿ ನೇರವಾಗಿ ತಲುಪಿಸಿದಷ್ಟು ಬೈಡನ್ ಗೆ ಸಂವಹನ ಸಾಧ್ಯವಾಗಲಿಲ್ಲ. ಟ್ರಂಪ್ ಮತ್ತು ಬಲಪಂಥೀಯ ಪ್ರಚಾರ ಯಂತ್ರದ ಕಾಲಾಳುಗಳಂತೆ ಅವರಿಗೆ ಸೆಡ್ಡು ಹೊಡೆದು ವ್ಯಾಪಕ ಪ್ರಚಾರವೂ ಸಾಧ್ಯವಾಗಲಿಲ್ಲ. ಟ್ರಂಪ್ ಸೋತರೂ ಟ್ರಂಪ್ ವಾದಿ ಉಗ್ರ ಬಲಪಂಥ ಸೋತಿಲ್ಲ. ಜನಬೆಂಬಲ ಹೆಚ್ಚಿಸಿಕೊಂಡು ಬೆಳೆದಿದೆ.

ಆದರೂ ಟ್ರಂಪ್ ಸೋತರೆ ಅದು ಅದರಷ್ಟಕ್ಕೆ ಒಂದು ಮಹತ್ವದ ರಾಜಕೀಯ ಬೆಳವಣಿಗೆಯೇ. ಜಾಗತಿಕವಾಗಿ ಅಪಾಯಕಾರಿಯಾಗಿ ಫ್ಯಾಸಿಸ್ಟ್ ದಿಕ್ಕಿನಲ್ಲಿ ಬೆಳೆಯುತ್ತಿರುವ ಉಗ್ರ ಬಲಪಂಥೀಯ ರಾಜಕಾರಣಕ್ಕೆ ಒಂದು ಹಿನ್ನಡೆಯೇ. ಬೈಡನ್ ಅಥವಾ ಡೆಮೊಕ್ರಾಟಿಕ್ ಪಕ್ಷದ ಕೇಂದ್ರೀಯ ನಾಯಕತ್ವದ ಸ್ಫೂರ್ತಿ ಅಥವಾ ಉತ್ತೇಜನವಿಲ್ಲದಿದ್ದರೂ, ಈ ಚುನಾವಣೆಯಲ್ಲಿ ಉಗ್ರ ಬಲಪಂಥದ ವಿರುದ್ಧ ಹಣಾಹಣಿಗೆ ಸಿದ್ಧವಿರುವ ಎಡ ಮತ್ತು ನಡುಪಂಥೀಯ ಹಾಗೂ ಟ್ರೇಡ್ ಯೂನಿಯನ್ ತಳಮಟ್ಟದ ಕಾರ್ಯಕರ್ತರು ಬೀದಿಗಿಳಿದಿದ್ದರು. ಮುಂದೆಯೂ ಬೀದಿಗಳಿಯಲು ಸಿದ್ಧವಾಗಿದ್ದಾರೆ. ಡೆಮೊಕ್ರಾಟಿಕ್ ಪಕ್ಷದ ಒಳಗೆ ಮತ್ತು ಹೊರಗೆ ಎಡಪಂಥದ ರಾಜಕೀಯ ಪ್ರಭಾವ ಗಣನೀಯವಾಗಿ ಹೆಚ್ಚಿದೆ. ಇದರ ಫಲವಾಗಿ ಡೆಮೊಕ್ರಾಟಿಕ್ ಮತ್ತು ಕೆಲವು ಸ್ವತಂತ್ರ ಎಡಪಂಥೀಯರು ಪಾರ್ಲಿಮೆಂಟಿಗೆ ಆಯ್ಕೆಯಾಗಿದ್ದಾರೆ. ಬಂಡವಾಳಶಾಹಿ-ವಿರೋಧಿ ರಾಜಕಾರಣವನ್ನು ಮುಂದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಬೈಡನ್ ಆಡಳಿತದ ಮೇಲೆ ನೀತಿ ಬದಲಾವಣೆಗೆ ಒತ್ತಡ ಹೇರಲಿದ್ದಾರೆ. ಎಡಪಂಥದ ತಳಮಟ್ಟ ಗಟ್ಟಿಗೊಳಿಸಲಿದ್ದಾರೆ. ಅಂತಿಮವಾಗಿ ಅದು ಮಾತ್ರ ಬಲಪಂಥೀಯ ಸವಾಲನ್ನು ಎದುರಿಸಬಲ್ಲದು.

ಅಮೆರಿಕದ ಪ್ರಜಾಸತ್ತೆಯ ಅಗಾಧ ನ್ಯೂನತೆಗಳು, ಹುಳುಕುಗಳು ಹಿಂದೆಂದಿಗಿಂತಲೂ ಈ ಚುನಾವಣೆಯಲ್ಲಿ ಢಾಳಾಗಿ ಜಾಗತಿಕವಾಗಿ ಬಯಲಾಗಿವೆ. ಇದೂ ಹೆಚ್ಚು ಪ್ರಜಾಸತ್ತಾತ್ಮಕವಾದ ಚುನಾವಣಾ ವಿಧಾನ, ಹಣ ಮತ್ತು ಮಾಧ್ಯಮ ಬಲದ ಪ್ರಭಾವ ಕಡಿಮೆ ಮಾಡುವಂತಹ ಸುಧಾರಣೆಗಳನ್ನು ತರುವತ್ತ ಒತ್ತಡ ಹೇರಲಿವೆ. ಒಟ್ಟಿನಲ್ಲಿ ಟ್ರಂಪ್ ಸೋಲು ಸಂತೋಷಕರ ಬೆಳವಣಿಗೆಯೇ. ಆದರೆ ಬೈಡನ್ ಜಯದ ಬಗ್ಗೆ ಹಿಗ್ಗುವ ಪರಿಸ್ಥಿತಿ ಇಲ್ಲ.

 

 

 

 

Donate Janashakthi Media

Leave a Reply

Your email address will not be published. Required fields are marked *