- ಅಂತಿಮ ಹಂತ ತಲುಪುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ
ನ್ಯೂಯಾರ್ಕ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಿಮ ಹಂತ ತಲುಪುತ್ತಿರುವಂತೆ, ಭಾರತೀಯ-ಅಮೇರಿಕನ್ ಚುನಾಯಿತ ಅಧಿಕಾರಿಗಳು, ಕಲಾವಿದರು, ವ್ಯಾಪಾರ ಮತ್ತು ಸಮುದಾಯದ ಮುಖಂಡರು ಸೇರಿದಂತೆ ಏಷ್ಯನ್-ಅಮೆರಿಕನ್ ಸಮುದಾಯದ 1,100 ಕ್ಕೂ ಹೆಚ್ಚು ಪ್ರಮುಖ ಸದಸ್ಯರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೊ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಜೋಡಿಯ ಆಯ್ಕೆಗೆ ಬೆಂಬಲ ಸೂಚಿಸಿದ್ದಾರೆ.
ಬೈಡೆನ್–ಕಮಲಾ ಜೋಡಿಯ ಆಯ್ಕೆಯನ್ನು ಅನುಮೋದಿಸುತ್ತಿರುವ ಪಟ್ಟಿಯಲ್ಲಿ ಏಷ್ಯನ್ ಅಮೆರಿಕನ್ಸ್ ಅಂಡ್ ಪೆಸಿಫಿಕ್ ಐಸ್‌ಲ್ಯಾಂಡರ್ಸ್ (ಎಎಪಿಐ) ಪಟ್ಟಿಯಲ್ಲಿರುವ ಚುನಾಯಿತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಭಾರತೀಯ–ಅಮೆರಿಕನ್ನರು ಮತ್ತು ಮತ್ತು ಆರೋಗ್ಯ, ವ್ಯವಹಾರ ಮತ್ತು ಕಲಾ ಕ್ಷೇತ್ರಗಳನ್ನು ಪ್ರತಿನಿಧಿಸುವವರೂ ಇದ್ದಾರೆ.
ಜೂನ್ – ಜುಲೈ ತಿಂಗಳಲ್ಲಿ ಎಎಪಿಐನ 250 ಮಂದಿ ಇದೇ ಜೋಡಿಯನ್ನು ಅನುಮೋದಿಸಿತ್ತು. ಇವರನ್ನೂ ಒಳಗೊಂಡಂತೆ ದೇಶದಾದ್ಯಂತ ಎಲ್ಲ ಕ್ಷೇತ್ರಗಳನ್ನು ಪ್ರತಿನಿಧಿಸುವ 1100 ಮಂದಿ ಪ್ರಮುಖ ಸದಸ್ಯರು ಈ ಪಟ್ಟಿಗೆ ಸೇರಿದ್ದಾರೆ.
ಎಎಪಿಐ ಸಮುದಾಯವು ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದೆಂದೂ ಕಾಣದಂತಹ ಒಗ್ಗಟ್ಟು, ಏಕತೆ ಮತ್ತು ಸಂಭ್ರಮವನ್ನು ಕಾಣುತ್ತಿದೆ’ ಎಂದು ಈ ಸಮುದಾಯದವರನ್ನು ಸಂಘಟಿಸಿದ ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ (ಡಿಎನ್‌ಸಿ) ಎಎಪಿಐ ಕಾಕಸ್ ಚೇರ್ ಬೆಲ್ ಲಿಯಾಂಗ್-ಹಾಂಗ್ ಹೇಳಿದ್ದಾರೆ.
’ನಾವು ಸುಮಾರು 20 ವಿವಿಧ ಸಮುದಾಯದವರು ಇಲ್ಲಿ ಸೇರಿದ್ದೇವೆ. ಪ್ರಸ್ತುತ ಟ್ರಂಪ್ (ಅಧ್ಯಕ್ಷ ಡೊನಾಲ್ಡ್ ಟ್ರಂಪ್) ನಮ್ಮ ದೇಶವನ್ನು ಅಸ್ತವ್ಯಸ್ಥಗೊಳಿಸಿದ್ದು, ಅದನ್ನು ಸರಿಪಡಿಸುವುದಕ್ಕಾಗಿ ಬೈಡೆನ್ ಮತ್ತು ಕಮಲಾ ಅವರನ್ನು ಬೆಂಬಲಿಸುತ್ತಿದ್ದೇವೆ. ಈ ಮೂಲಕ ನಾವು ಒಂದಾಗಿದ್ದೇವೆ’ ಎಂದು ಹೇಳಿದ್ದಾರೆ.
ಈ ಪಟ್ಟಿಯಲ್ಲಿ ವಿವಿಧ ಭಾಷೆಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ವರ್ಗದವರಿದ್ದಾರೆ ಎಂದು ಹೇಳಿದ ಲಿಯಾಂಗ್–ಹಾಂಗ್, ’ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲ ನಮ್ಮ ಭರವಸೆ ಮತ್ತು ಕನಸುಗಳನ್ನು ಹಂಚಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವ 1100 ಪ್ರಮುಖ ಸದಸ್ಯರ ಪಟ್ಟಿಯಲ್ಲಿ ಡಿಎನ್‌ಸಿ ಮತ್ತು ಎಎಪಿಐ ಸೇರಿದಂತೆ ಈ ಸಂಘಟನೆಗಳಿಗೆ ಸಂಬಂಧಿಸಿದ 14 ವಿವಿಧ ಗುಂಪುಗಳು ಜತೆಗೆ ದಕ್ಷಿಣ ಏಷ್ಯನ್ನರೂ ಸೇರಿದ್ದಾರೆ.
ಬೈಡೆನ್ – ಕಮಲಾ ಜೋಡಿ ಅನುಮೋದಿಸಿರುವ ಪಟ್ಟಿಯಲ್ಲಿ ಭಾರತದ ರಾಜಾ ಕೃಷ್ಣಮೂರ್ತಿ ಮತ್ತು ಅಮಿ ಬೇರಾ, ಪ್ರಮೀಳಾ ಜಯಪಾಲ್, ದಕ್ಷಿಣ ಮತ್ತು ಮಧ್ಯ ಏಷ್ಯಾ ಮೂಲದ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಮಾಜಿ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್, ಮೇರಿಲ್ಯಾಂಡ್ ಡೆಮಾಕ್ರಟಿಕ್ ಪಕ್ಷದ ಎಎಪಿಯ ನಾಯಕತ್ವ ಮಂಡಳಿಯ ಅಧ್ಯಕ್ಷ ದೇವಾಂಗ್ ಷಾ, ಏಷ್ಯಾ–ಅಮೆರಿಕನ್ ವರ್ಜೀನಿಯಾ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಪ್ರವೀಣ್ ಮೆಯಾನ್, ಕ್ಯಾಲಿಫೋರ್ನಿಯಾ ಅಸೆಂಬ್ಲಿಯ ಸದಸ್ಯ ಆಸ್ ಕಲ್ರಾ ಇದ್ದಾರೆ.