- ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟ
ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮಂಗಳವಾರ ನಡೆಯಲಿದೆ. ಈ ಹಿನ್ನೆಲೆ ಇಂದು(ಸೋಮವಾರ) ಮನೆ ಮನೆಗೆ ತೆರಳಿ ಪಕ್ಷಗಳು ಮತಯಾಚನೆ ನಡೆಸಲು ಕೊನೆ ದಿನವಾಗಿದೆ.
ಭಾನುವಾರ ಬಹಿರಂಗ ಪ್ರಚಾರ ಅಂತ್ಯವಾಗಿರುವ ಹಿನ್ನೆಲೆ ಇಂದಿನ ದಿನವನ್ನು ಆಯಾ ಪಕ್ಷಗಳು ಮನೆ ಮನೆಗೆ ತೆರಳಿ ಮತಯಾಚನೆಗೆ ಸದುಪಯೋಗ ಪಡಿಸಲಿದೆ. ವಿಧಾನಸಭಾ ಕ್ಷೇತ್ರದ ಪ್ರಮುಖ ಮನೆಗಳಿಗೆ ಸ್ಥಳೀಯ ಮುಖಂಡರು ತೆರಳಿ ಮತಬೇಟೆ ನಡೆಸಲಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ ಬಿ ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಸ್ಪರ್ಧೆ ಇದೆ.
ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಬೇರೆ ಕಡೆಯಿಂದ ಬಂದ ನಾಯಕರು ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಲೇ ಕ್ಷೇತ್ರ ಬಿಟ್ಟು ಹೋಗಬೇಕಾದ ನಿಮಯವಿದೆ. ಹೀಗಾಗಿ ಇಲ್ಲಿನ ಲೋಕಲ್ ನಾಯಕರು ಇಂದು ಅಂತಿಮ ಮನೆ ಮನೆ ಪ್ರಚಾರದಲ್ಲಿ ಬ್ಯುಸಿಯಾಗಲಿದ್ದಾರೆ.
ಸದ್ಯ ಆರ್‌ಆರ್ ನಗರ ಹಾಗೂ ಶಿರಾ ಚುನಾವಣೆ ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾದರೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಮುನಿರತ್ನ ಅವರನ್ನು ಗೆಲ್ಲಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮುಖ್ಯವಾಗಿದೆ. ಒಟ್ಟಾರೆಯಾಗಿ ಜಿದ್ದಾಜಿದ್ದಿನ ಫೈಟ್‌ನಲ್ಲಿ ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಎನ್ನುವ ಕುತೂಹಲ ಮೂಡಲಾರಂಭಿಸಿದೆ.