ಕೋವಿಡ್ ಮೂಲ, ಭವಿಷ್ಯದ ಕುರಿತು ವದಂತಿಗಳು ಮತ್ತು ವಿಜ್ಞಾನ

– ಡಾ. ಸವ್ಯಸಾಚಿ ಚಟರ್ಜಿ

ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆಯು ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಲೋಕಾರ್ಪಣೆಗೊಂಡಿತು. ವೈಜ್ಞಾನಿಕ ಮನೋವೃತ್ತಿ (ಅಥವಾ ಅದರ ಅಭಾವ) ಕೊರೊನಾ ಕಾಲದಲ್ಲಿ ಮುನ್ನೆಲೆಗೆ ಬಂದ ಮುಖ್ಯ ಪ್ರಶ್ನೆಗಳಲ್ಲೊಂದು. ಆದ್ದರಿಂದ “ವೈಜ್ಞಾನಿಕ ಮನೋವೃತ್ತಿ : ಕೊರೊನಾ ಕಾಲದಲ್ಲಿ ಮತ್ತು ನಂತರ” ಈ ಉಪ ಥೀಮ್ ಕುರಿತು ಕೆಳಗೆ ಕಾಣಿಸಿದ 5 ಪ್ರಶ್ನೆಗಳ ಪ್ರಶ್ನಾವಳಿ ಸುತ್ತ ನಾಡಿನ ವಿಜ್ಞಾನಿಗಳು, ವಿಜ್ಞಾನ ಬರಹಗಾರರು, ಸಂಶೋಧಕರು, ಜನವಿಜ್ಞಾನ ಚಳುವಳಿಗಾರರನ್ನು ಈ ಕೆಳಗಿನ ಪ್ರಶ್ನೆಗಳ ಸುತ್ತ ಬರಹಗಳನ್ನು ಕೇಳಲಾಗಿತ್ತು

  • ವೈರಸ್ ಹುಟ್ಟು ಮತ್ತು ಮೂಲದ ಕುರಿತು ವಿವಾದಗಳ ಕುರಿತು ನಿಮ್ಮ ಅಭಿಪ್ರಾಯ ಏನು?
  • ರೋಗ ಹರಡದಂತೆ ಸಾರ್ವಜನಿಕ ವೈಜ್ಞಾನಿಕ ಅರಿವು ಮೂಡಿಸುವುದರಲ್ಲಿ ಸೋಲು-ಗೆಲುವುಗಳೇನು? ಮುಂದೇನು  ಮಾಡಬಹುದು ?
  • ಕೊರೊನಾ ಸಂಬಂಧಿ ಮೌಢ್ಯದ ಪ್ರಚಾರ ವ್ಯಾಪಕವಾಗಿ ಆದವು. ಅವುಗಳನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಮಾಡಿದ ಮತ್ತು ಅದನ್ನು ನಿರ್ದಿಷ್ಟ ಉದ್ದೇಶಗಳಿಗೆ ದುರ್ಬಳಕೆ ಮಾಡಿದ ವಿವಿಧ ಶಕ್ತ್ತಿ/ಸಂಸ್ಥೆಗಳು ಯಾವುವು? ಅವುಗಳ ಉದ್ದೇಶವೇನು? ಅದನ್ನು ಎದುರಿಸುವುದು ಹೇಗೆ?
  • ಕೊರೊನಾ ‘ಪ್ರಕೃತಿಯ ಸೇಡು’ಎಂದು ಜನಜನಿತವಾಗಿರುವ ವಾದ ವೈಜ್ಞಾನಿಕವಾಗಿ ಎಷ್ಟು ಸರಿ?
  • ಕೊರೊನಾ ವಿರುದ್ಧ ಲಸಿಕೆ ಅಥವಾ ಔಷಧಿಯ ಅಭಿವೃದ್ಧಿ, ಉತ್ಪಾದನೆ, ಪರಿಣಾಮಕಾರಿ ವಿತರಣೆ (ಪೇಟೆಂಟ್ ಸೇರಿದಂತೆ) ಸಮಸ್ಯೆಗಳು ಯಾವುವು?

ಇವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಸ್ವತಃ ವಿಜ್ಞಾನಿ ಮತ್ತು ದೇಶದ ಜನ ವಿಜ್ಞಾನ ಚಳುವಳಿಗಳ ಅಖಿಲ ಭಾರತ ಜಾಲದ (ಎ.ಐ.ಪಿ.ಎಸ್.ಎನ್) ಅಧ್ಯಕ್ಷರಾಗಿರುವ ಡಾ. ಎಸ್. ಚಟರ್ಜಿ ಅವರು ಹೀಗೆ ಉತ್ತರಿಸಿದ್ದಾರೆ :

ಲಾಕ್ ಡೌನ್ ಸಮಯದಲ್ಲಿ, ಕಾರ್ಮಿಕ ಸಂಘದಲ್ಲಿನ ನನ್ನ ಮಿತ್ರರು, ಬೆಂಗಾಲಿ ಮತ್ತು ಹಿಂದಿ ಮಾತನಾಡುವ ‘ವಲಸೆ ಕಾರ್ಮಿಕ’ರ ಸಹಾಯ ದೂರವಾಣಿಯನ್ನು ನಿರ್ವಹಿಸುವಂತೆ ಹೇಳಿದರು. ಅವರಲ್ಲಿ ಬಹಳಷ್ಟು ಜನರಿಗೆ ಕನ್ನಡ ಬರುವುದಿಲ್ಲ. ಪುಣೆಯಲ್ಲಿರುವ ನನ್ನ ಮಗಳೂ ಇಂಥದೇ ಕೆಲಸ ಮಾಡಿದಳು. ಅಲ್ಲಿರುವ ಕನ್ನಡ ಮತ್ತು ಬೆಂಗಾಲಿ ಕಾರ್ಮಿಕರಿಗೆ ಊಟ ತಿಂಡಿ ವ್ಯವಸ್ಥೆ ಮಾಡಿ, ಅವರು ತಮ್ಮ ‘ಮನೆಗೆ’ ಹೋಗಲು ಸಹಾಯ ಮಾಡಿದಳು. ಇಂತಹ ಹಲವು ಪ್ರಯತ್ನಗಳು ದಾಖಲೆಯಾಗಿವೆ. ಆದರೆ ನನ್ನ ಎರಡು ಅಭಿಪ್ರಾಯಗಳನ್ನು ಇಲ್ಲಿ ಹೇಳಲೇಬೇಕು. ಈ ವಲಸೆ ಕಾರ್ಮಿಕರು ಮನೆಗೆ ಹೋಗಬೇಕೆಂಬ ತೀರ್ಮಾನದ ನಂತರ, ಅದಕ್ಕಾಗಿ ತಮ್ಮದೇ ಆದ ದಾರಿ ಕಂಡುಕೊಂಡರು. ಅವರ ಹಳ್ಳಿಯಲ್ಲಿನ ಬದುಕು ಯಾತನೆಯಿಂದ ಕೂಡಿರುವುದೆಂದು ಗೊತ್ತಿದ್ದರೂ, ಮನೆಗೆ ಹೋಗಬೇಕೆಂಬ ನಿರ್ಧಾರ ತೆಗೆದುಕೊಂಡರು. ಇದು, ಒಂದು ರೀತಿಯಲ್ಲಿ ಅವರ ಶಾಂತಿಯುತ ಸತ್ಯಾಗ್ರಹವಾಗಿತ್ತು. ಎರಡನೇಯದಾಗಿ, ಇವರು ‘ವಲಸೆ’ ಪ್ರಜೆಗಳೆಂದು ಗೊತ್ತಿದ್ದರೂ, ಸ್ಥಳೀಯರಾರೂ ಇವರನ್ನು ಹೊರಗಿನವರೆಂದು ಭಾವಿಸಲಿಲ್ಲ. ಎಂತಹ ಭಾಷಾ ಭೇಧವೂ ಇಲ್ಲದೆ, ಆದಷ್ಟು ಸಹಾಯ ಮಾಡಿದರು.

‘ಚೀನಾ ಪಿತೂರಿ’ ವದಂತಿ

ಲಾಕ್ ಡೌನ್ ಸಮಯದಲ್ಲಿ, ಎರಡು ತರಹದ ವದಂತಿಗಳು ಕಾಣಿಸಿಕೊಂಡವು. ಮೊದಲನೆಯದು, ವೈರಾಣುಗಳು ಚೀನಾ ಪ್ರಯೋಗಾಲಯಗಳಲ್ಲಿ ತಯಾರಿಸಿ ಅವನ್ನು ಶತ್ರು ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡುವುದಕ್ಕೆ ರವಾನಿಸಿದೆ ಅಂತ. ಇದನ್ನು ಹುಟ್ಟಿಸಿದ್ದು, ರಾಜಕೀಯವಾಗಿ ಚೀನಾಗೆ ವಿರುದ್ಧವಾಗಿರುವ ಸರಕಾರಗಳು. ಆದರೆ ಜಾಗತಿಕ ವಿಜ್ಞಾನಿಗಳ ಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿತು. ಇದಕ್ಕೆ ವೈರಾಣುಗಳನ್ನು ಪ್ರಯೋಗಾಲಯಗಳಲ್ಲಿ ತಯಾರಿಸಲಾಗುವುದಿಲ್ಲ ಎಂಬುದು ಕಾರಣವಲ್ಲ. ಇಂತಹ ರಾಜಕೀಯ ಆರೋಪಗಳನ್ನು ವಿಜ್ಞಾನಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರಸಿದ್ಧ ವೈಜ್ಞಾನಿಕ ಪತ್ರಿಕೆ ಒಂದರಲ್ಲಿ ಕೊವಿಡ್ ವೈರಸ್ ಪ್ರಾಕೃತಿಕ ಮೂಲದಿಂದ ಬಂದಿದ್ದು ಕೃತಕ ಅಲ್ಲ ಎಂದು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಕಟಿಸಿತು. ಕೊವಿಡ್ ವೈರಸ್ ಕೃತಕವಾಗಿ ತಯಾರಿಸಿದ್ದು ಎಂಬುದಕ್ಕೆ ವೈಜ್ಞಾನಿಕ ವಿಶ್ಲೇಷಣೆಯನ್ನು ಯಾರೂ ಕೊಡಲಿಲ್ಲ. ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಚೀನಾದ ವಿಜ್ಞಾನಿಗಳು ಪ್ರಪಂಚದ ಇತರ ವಿಜ್ಞಾನಿಗಳೊಂದಿಗೆ ಹಂಚಿಕೊಂಡು, ಲಸಿಕೆಯ ತಯಾರಿಕೆ, ಸೊಂಕು ನಿವಾರಣೆ ಮುಂತಾದ ಪ್ರಯತ್ನಗಳಲ್ಲಿ ಸಹಾಯಮಾಡಿದರು. ಆದರೆ ಔಷಧಿ ಕಂಪನಿಗಳು ತಮ್ಮ ನಂತರದ ಸಂಶೋಧನೆಗಳನ್ನು ‘ವ್ಯವಹಾರದ ಗುಟ್ಟು’ ಎಂಬ ಕಾರಣವೊಡ್ಡಿ ಬೇರೆ ಯಾರೊಂದಿಗೂ ಅದನ್ನು ಹಂಚಿಕೊಳ್ಳುವುದಿಲ್ಲ. ಇವೆಲ್ಲವನ್ನೂ ಗಮನಿಸಿ ‘ಚೀನಾ ಪಿತೂರಿ ಸಿದ್ದಾಂತ’ಗಳನ್ನು ಓದುಗರು ಸತ್ಯಾಸತ್ಯತೆಗಳನ್ನು ಪರಾಮರ್ಶಿಸಬಹುದು.

ತಾಬ್ಲಿಗಿ ಜಮಾತ್ ವದಂತಿ

ಇನ್ನೊಂದು ಗಾಳಿಸುದ್ದಿ, ಭಾರತದಲ್ಲಿ ವೈರಾಣುವನ್ಮು ಹರಡಲು ತಾಬ್ಲಿಗಿ ಜಮಾತ್ ಮಾಡಿದ ಪಿತೂರಿ ಎಂಬುದು. ಆಗಸ್ಟ್ 22ರ ಮುಂಬಯಿ ಉಚ್ಚ ನ್ಯಾಯಾಲಯ ಈ ‘ಪಿತೂರಿ’ ಒಪ್ಪದ್ಪೆ ತಾಬ್ಲಿಗಿ ಆಪಾದಿತರ ಮೇಲಿನ ಪ್ರಕರಣಗಳನ್ನು ವಜಾ ಮಾಡುವ ತೀರ್ಪಿನ ನಂತರ, ಈ ವಿಷಯ ತಣ್ಣಗಾಯಿತು. ಈ ಸಮಯಕ್ಕೆ, ಸೊಂಕು ಬರೋಡಾ ಪಟ್ಟಣಕ್ಕೂ ತಲುಪಿತೆಂಬ ಸುದ್ದಿ ಇತ್ತು. ನನಗೆ ದೆಹಲ್ಲಿಯಲ್ಲಿಯೂ, ಬರೋಡಾದಲ್ಲಿಯೂ ಬಂಧುಗಳಿದ್ದಾರೆ. ನಾನು ದೆಹಲಿಯಲ್ಲಿರುವ ಬಂಧುವಿನ ಜೊತೆ ಫೋನಿನಲ್ಲಿ ಮಾತನಾಡಿ, ಹಾಗೆಯೇ, ಬರೋಡಾದ ಬಂಧುಗಳ ಕ್ಷೇಮವನ್ನು ವಿಚಾರಿಸಿದೆ. ದೆಹಲಿಯ ಬಂಧು ತಕ್ಷಣ ಉತ್ತರಿಸುತ್ತಾ ‘ಇನ್ನು ಹೆಂಗಿರುತ್ತಾರೆ? ಈ ಜನ ಇಡೀ ದೇಶದಲ್ಲಿ ಸೊಂಕನ್ನು ಹರಡಿರಬೇಕಾದರೆ.’ ಇದಕ್ಕೆ ನನ್ನಲ್ಲಿ ಒಂದು ಸರಳವಾದ ಪ್ರಶ್ನೆ ಇತ್ತು. ‘ಅವರು ಬೇರೆ ಜಾತಿಯವರಿಗೆ ಸೊಂಕನ್ನು ಹರಡಬೇಕಾದರೆ, ಮೊದಲು ಅವರ ಜನರಲ್ಲಿಯೇ ಸೊಂಕು ಹರಡಬೇಕಲ್ಲವೇ?’ ಇಂತಹ ಪ್ರಶ್ನೆಯನ್ನು ನಿರೀಕ್ಷಿಸದ ಅವರು ತಬ್ಬಿಬ್ಬಾದರು. ಬರೋಡಾಕ್ಕೆ  ‘ಅಹಮದಾಬಾದಿನ ‘ನಮಸ್ತೆ ಟ್ರಂಪ್’ನ 1 ಲಕ್ಷ ಜನರಿಂದ ಈ ಸೊಂಕು ಹರಡಿರಬಹುದಲ್ಲವೆ’ ಎಂದೆ. ನನ್ನ ಬಂಧುವಿಗೆ ಆಘಾತವಾಯಿತು. ‘ಅಂದರೆ ಈ ಸೊಂಕು ಅಮೇರಿಕಾದಿಂದ ಹರಡಿದೆಯೇ?’ ನನ್ನ ಉತ್ತರ: ‘ಇದು ಒಂದು ಸಾಧ್ಯತೆ, ಅಷ್ಟೇ.’ ಅಮೇರಿಕಾದಲ್ಲೂ ಬಹಳಷ್ಟು ಸೊಂಕಿದೆ. ಅಲ್ಲೂ ಜನ ಸಾಯುತ್ತಿದ್ದಾರೆ. ಅಲ್ಲಿಂದಲೂ ಸೊಂಕು ಭಾರತಕ್ಕೆ ಬಂದಿರಬಹುದು. ಆದರೆ, ನಾನು ಇದರಲ್ಲಿ ಅಮೇರಿಕನ್ನರ ಪಿತೂರಿ ಇದೆಯೆಂದು ಎಂದಿಗೂ ಹೇಳುವುದಿಲ್ಲ.’ ಎಂದೆ.

ನನ್ನ ಬಂಧುವಿನ ಕುತೂಹಲ ಹೆಚ್ಚಾಯಿತು. ‘ಈ ತಾಬ್ಲಿಗೀ ಜಮಾತ್ ಸೊಂಕನ್ನು ಎಲ್ಲಿ ಹರಡಿರಬಹುದು?’. ‘ನನ್ನಲ್ಲಿ ಅದರ ಉತ್ತರವಿಲ್ಲ. ಈ ಕೂಟವು ನಿಜಾಮುದ್ದಿನ್ ನಲ್ಲಿ ನಡೆದುದರಿಂದ, ಸಮೀಪದ ದೆಹಲಿಯಲ್ಲಿ ಮೊದಲು ಹರಡಬೇಕು. ಸಮೀಪದ ಸ್ಥಳಗಳನ್ನು ಬಿಟ್ಟು, ಅದು ಯಾಕೆ  ದೂರದ ಬರೋಡಾವನ್ನು ಆಯ್ದುಕೊಂಡಿತು? ಮೇ ತಿಂಗಳ ಮಧ್ಯೆದಲ್ಲಿಯೂ ದೆಹಲಿ ನಗರದಲ್ಲಿನ ಸೊಂಕು ಕಡಿಮೆ, ಎಂದರೆ, ದಿನಕ್ಕೆ ಸುಮಾರು 500 ಸಂಖ್ಯೆಯಲ್ಲಿತ್ತು.’

Crowd from above forming a growth graph with lines connecting between them to show how th COVID-19 can expand

ಈ ವಿಷಯಗಳು ನನ್ನ ಬಂಧುವಿಗೆ ಗೊತ್ತೇ ಇರಲಿಲ್ಲ. ಅವರು ಆನಂತರ ಅಂತರ್ಜಾಲದಲ್ಲಿ ಮಾಹಿತಿ ಶೇಖರಿಸಿ ಹೇಳಿದ್ದು: ಏಪ್ರಿಲ್ ತಿಂಗಳಲ್ಲೇ 170 ಹಾಟ್ ಸ್ಪಾಟ್ (ಅಂದರೆ ಕೊವಿದ್ ಸೋಂಕು ಹರಡುವ ಅಪಾಯದ) ಸ್ಥಳಗಳಿವೆಯೆಂದೂ, ಸುಮಾರು 200 ಸ್ಥಳಗಳು ಹಾಟ್ ಸ್ಪಾಟ್ ಆಗುವ ಸಾಧ್ಯತೆ ಇದೆಯೆಂದೂ ತಿಳಿಸಲಾಗಿತ್ತು. ಯಾರಾದರೂ, ಜನರ ಪ್ರಯಾಣ ಹಾದಿಯನ್ನು ತಿಳಿಸದಿದ್ದರೆ, ಈ ಸೊಂಕು ತಬ್ಲಿಗೀ ಜಮಾತ್ ನಿಂದ ಶುರುವಾಯಿತೆಂದು ನಾನು ನಂಬುವುದಿಲ್ಲ.’

ಕೊವಿಡ್ ಭವಿಷ್ಯದ ಬಗ್ಗೆ ವಿಜ್ಞಾನ ಹೇಳಲು ಸಾಧ್ಯವೇ?

ಇಲ್ಲಿಗೆ ಈ ಅಧ್ಯಾಯ ಪೂರ್ತಿಯಾಯಿತು. ಜನರ ಗಮನ ಬೇರೆಡೆ ಸೆಳೆಯುವ ಇನ್ನಷ್ಟು ಸಂದರ್ಭಗಳೂ ಇದ್ದವು. ‘ಜನತಾ ಕಫ್ರ್ಯೂ’ದಿನದ ಚಪ್ಪಾಳೆ ತಟ್ಟುವುದು, ತಟ್ಟೆ ಬಾರಿಸುವುದು ಮುಂತಾದವು. ಏಪ್ರಿಲ್ 5ನೆಯ ತಾರೀಕಿನ ದೀಪವನ್ನು 9 ಗಂಟೆಗೆ 9 ನಿಮಿಷಗಳ ಕಾಲ ಬೆಳಗುವುದು, ದೊಡ್ಡ ಸುದ್ದಿಯಾಯಿತು. ಸಂಖ್ಯೆ 9 ರ ಮಾಂತ್ರಿಕ ಶಕ್ತಿ ಕುರಿತ ಸಂವಾದ ಬಹಳ ವಿಸ್ತೃತವಾಗಿತ್ತು. ಒಬ್ಬ ಮಹಾನ್ ವ್ಯಕ್ತಿಯ ಈ ಯೋಜನೆಗಳಿಂದ ವೈರಾಣು ನಾಶವಾಗುತ್ತದೆಂದು ಅನೇಕರು ಹೇಳಿದರು. ಒಂದಷ್ಟು ‘ಹೆಸರಾಂತ ವಿಜ್ಞಾನಿ’ಗಳನ್ನೂ ಈ ಹೇಳಿಕೆಯಲ್ಲಿ ಸೇರಿಸಲಾಯಿತು. ನಾಸಾ ವಿಜ್ಞಾನಿಗಳು, ಭಾರತದಿಂದ ವೈರಾಣುವಿನ ಪಲಾಯನವನ್ನು ಗಮನಿಸಿದರೆಂದೂ ಜನ ಹೇಳಿದರು. ‘ಜನತಾ ಕಫ್ರ್ಯೂ’ ದಿನದ ಮಹಿಮೆ ಇದು. ಏಪ್ರಿಲ್ 5 ರ ಬೆಳಕು ನೆರಳಿನ ಆಟ, ಇನ್ನಷ್ಟು ಮಹತ್ವದ ಫಲಿತಾಂಶ ಕೊಡುವುದೆಂದು ಭರವಸೆ ನೀಡಲಾಯಿತು.

ಆದರೆ ನಿಜವಾದ ಫಲಿತಂಶ ಈ ರೀತಿ ಇದೆ: ಮಾರ್ಚ್ 22, ಅಂದರೆ ‘ಜನತಾ ಕಫ್ರ್ಯೂ’ ದಿನ ಸೊಂಕಿನ ಸಂಖ್ಯೆ 353. ಏಪ್ರಿಲ್ 5ರಂದು 3373. ಜೂನ್ 1, ಅಂದರೆ, ಲಾಕ್ ಡೌನ್ ಮುಕ್ತಾಯವಾಗಿ, ಲಾಕ್ ಡೌನ್ ಸಡಿಲಿಕೆ ಕಾರ್ಯಕ್ರಮ ಶುರುವಾದಾಗ, ಈ ಸಂಖ್ಯೆ 1,90,535. ಇಲ್ಲಿ ಪ್ರಶ್ನೆ ಏನೆಂದರೆ, ಯಾಕೀ ಬೆಳವಣಿಗೆ ಮತ್ತು ಇದು ಯಾವ ದಿಕ್ಕಿನಲ್ಲಿ ಎಷ್ಟು ಕಾಲ ಹೋಗುತ್ತದೆ? ಇದನ್ನು ಉತ್ತರಿಸುವುದು ತುಂಬಾನೇ ಕಷ್ಟ. ವೈರಾಣುವಿನ ಪ್ರಭಾವದ ಮೇಲೆ ಹಿಡಿತವಿರುವ ಅನೇಕ ಅಂಶಗಳ ವಿವರ ತಿಳಿಯದೆ, ಸೊಂಕಿನ ಬೆಳವಣಿಗೆ ಅಥವಾ ಕ್ಷೀಣತೆಯ ಸಾಧ್ಯತೆಗಳ ಬಗ್ಗೆ ಹೇಳುವುದು ಅಸಾಧ್ಯ. ವಿಜ್ಞಾನಿಗಳು ಯಾವುದೇ ನಿರ್ದಿಷ್ಟ ಸಂಖ್ಯೆಯನ್ನು ಕೊಡಲು ಸಾಧ್ಯವಿಲ್ಲ. ಆದರೆ ಬೆಳವಣಿಗೆ ಮತ್ತು ಅದರ ವೇಗದ ಕುರಿತು ಒಂದು ಗರಿಷ್ಠ ಮತ್ತು ಕನಿಷ್ಠ ಮಟದ್ಟ ಅಂದಾಜು ಕೊಡಲು ವಿಜ್ಞಾನಕ್ಕೆ ಸಾಧ್ಯ. ವಿಜ್ಞಾನದ ಲಭ್ಯ ಮಾಹಿತಿ ಪ್ರಯೋಗಗಳ ಸಾಧ್ಯತೆಯನ್ನು ಆಧರಿಸಿ ನಿಖರತೆಗೆ ಒಂದು ಮಿತಿ ಇದೆ. ಈ ವಿಷಯವು ಪ್ರತಿ ವಿಜ್ಞಾನಿಗೂ ಚೆನ್ನಾಗಿ ಗೊತ್ತಿದೆ.

ಹಲವು ಜ್ಞಾನಶಿಸ್ತುಗಳ ಮಾಹಿತಿ ಒಳಗೊಂಡ ಗಣಿತದ ಮಾದರಿ ಅಗತ್ಯ

ಇದು ಹಲವು ಜ್ಞಾನಶಿಸ್ತುಗಳನ್ನು ಒಳಗೊಂಡ ವಿಷಯವಾದ್ದರಿಂದ, ಈ ಮಹಾಸಾಂಕ್ರಾಮಿಕದ ಬಗ್ಗೆ ಒಂದು ನಿರ್ಧಿಷ್ಠ ಸಂಖ್ಯೆ ಕೊಡಲು ಅಸಾಧ್ಯವಾದರೂ, ಅದರ ಪ್ರವೃತ್ತಿಯನ್ನು ಖಂಡಿತ ವಿಶ್ಲೇಷಿಸಬಹುದು. ಇದರ ಬಗ್ಗೆ ಮೊದಲು ಅಭ್ಯಾಸಮಾಡಿದ್ದು ಜಾನ್ ಗೌಂಟ್ ಎಂಬ ವಿಜ್ಞಾನಿ. ಇವರು ಮರಣದ ಕಾರಣಗಳನ್ನು ವ್ಯವಸ್ಥಿತವಾಗಿ ಅಭ್ಯಾಸ ಮಾಡಿ 1662 ಇಸವಿಯಲ್ಲಿ,  ಸಾಂಕ್ರಾಮಿಕದ ‘ಮರಣದ ಕಾರಣಗಳ ಬಗ್ಗೆ ಪ್ರಾಕೃತಿಕ ಮತ್ತು ರಾಜಕೀಯ ಟಿಪ್ಪಣಿಗಳು’ ಎಂಬ ಪುಸ್ತಕ ಪ್ರಕಟಿಸಿದರು. ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಮೊದಲು ವ್ಯವಸ್ಥಿತವಾಗಿ ಅಭ್ಯಾಸ ಮಾಡಿದ್ದು ಡಾನಿಯಲ್ ಬರ್ನೌಲಿ. ಇವರು ಗಣಿತಶಾಸ್ತ್ರಜ್ಞರೂ ಮತ್ತು ತರಬೇತಿ ಪಡೆದ ವೈದ್ಯರೂ ಆಗಿದ್ದರು.

1910 ಇಸವಿಯಲ್ಲಿ, ಸರ್ ರೊನಾಲ್ಡ್ ರಾಸ್ ಅವರು ಗಣಿತದ ಮಾದರಿಯನ್ನು ತಯಾರಿಸಿ ಬಳಸಿ ಭಾರತದಲ್ಲಿ ಮಲೇರಿಯಾ ಹತೋಟಿಗೆ ತರಲು ಪ್ರಯತ್ನಿಸಿದ್ದರು. ಈ ಗಣಿತದ ಮಾದರಿಯ ಪ್ರಯೋಗವು 1926-29 ಸಮಯದಲ್ಲಿ ಮಾಕ್ನೆಡ್ರಿಕ್ ಅವರ ಸಂಶೋಧನೆ ಮೂಲಕ ಗಮನಕ್ಕೆ ಬಂತು. ಪ್ರಪಂಚವು ಆಗತಾನೇ 1919-20 ಯಲ್ಲಿ ಆದ ‘ಸ್ಪಾನಿಷ್ ಫ್ಲೂ’ ರೋಗದಿಂದ ಚೇತರಿಸಿಕೊಳ್ಳುತ್ತಿತ್ತು. ಇದು 5 ಕೋಟಿ ಜನರನ್ನು ಸಾಯಿಸಿತ್ತು.

ಯಾವುದೇ ಸಾಂಕ್ರಾಮಿಕದ ಬೆಳವಣಿಗೆ, ಕ್ಷೀಣತೆ ಮತ್ತು ಸಂಪೂರ್ಣ ನಾಶ, ಇವೆಲ್ಲವನ್ನೂ ಉತ್ತರಿಸಬೇಕಾದರೆ, ಎಲ್ಲಾ ಪರಿಣಿತರ ಜಂಟಿ ಪ್ರಯತ್ನ ಬೇಕಾಗುತ್ತದೆ. ಅವರ ಎಲ್ಲಾ ಅಂಶಗಳನ್ನು ಸೇರಿಸಿದ ಒಂದು ಒಳ್ಳೆಯ ಗಣಿತದ ಮಾದರಿ ಬೇಕಾಗುತ್ತದೆ. ಇದರಲ್ಲಿ ಗಣಿತಶಾಸ್ತ್ರ, ಜೀವಶಾಸ್ತ್ರ, ಸೊಂಕುರೋಗ ಪರಿಣಿತರು, ಯೋಜಕರು, ಸಂಖ್ಯಾ ಶಾಸ್ತ್ರ ಪರಿಣಿತರು – ಎಲ್ಲರೂ ಬೇಕಾಗುತ್ತಾರೆ. ಈ ಪರಿಣಿತರು ಎಷ್ಟು ನಿಖರವಾದ ಮಾಹಿತಿ ಕೊಡುತ್ತಾರೋ, ಈ ಮಾದರಿಯ ಫಲಿತಾಂಶ ಅಷ್ಟೇ ನಿಖರವಾಗಿರುತ್ತದೆ.

ದೊಡ್ಡ ಸಮಸ್ಯೆಗೆ ಸಣ್ಣ ಪರಿಹಾರಗಳೂ ಇವೆ

ಇಲ್ಲಿರುವ ಇನ್ನೊಂದು ತಪ್ಪುಕಲ್ಪನೆ ಲಸಿಕೆಯ ವಿಷಯದಲ್ಲಿ. ಜನರಲ್ಲಿ ಲಸಿಕೆಯು ಇನ್ನು ಕೆಲವೇ ತಿಂಗಳುಗಳಲ್ಲಿ ಬರುವುದೆಂಬ ಅನಿಸಿಕೆ ಇತ್ತು. ಇಂತಹ ನಿರೀಕ್ಷೆ ಏನೂ ತಪ್ಪಲ್ಲ. ಆದರೆ, ನಮಗೆ ಬೇಕಾಗುವುದೆಲ್ಲ ಆಗಲೇಬೇಕೆನ್ನುವುದು ಸರಿಯಲ್ಲ. 40 ವರ್ಷಗಳ ಸತತ ಪ್ರಯತ್ನವಾದರೂ ಏಡ್ಸ್ ಲಸಿಕೆ ಇನ್ನೂ ಬಂದಿಲ್ಲ. ಬಂದರೂ, ಆ ಲಸಿಕೆ ಎಲ್ಲರಿಗೂ ಸಿಗುವುದೆಂದಾಗಲೀ, ಬೆಲೆ ಸಾಮಾನ್ಯರಿಗೆ ಎಟುಕುವಂತೆ ಇರುವುದೆಂದಾಗಲೀ, ಯಾವÀ ಭರವಸೆಯೂ ಇಲ್ಲ. ಈಗ, ಕೋವಿಡ್ ಲಸಿಕೆ ಸಿಗುವವರೆಗೆ, ಈ ಸೊಂಕು ತಡೆಗಟ್ಟಲು ಉಪಾಯ? ಪರಿಣಿತ ವೈದ್ಯರು ಹಾಗೂ ಸೋಂಕು ತಜ್ಞರಾದ ಡಾ. ಟಿ. ಜಾಕೋಬ್ ಜಾನ್ ಮತ್ತು ಡಾ. ಎಮ್. ಎಸ್. ಶೇಷಾದ್ರಿ ಹೇಳಿದಂತೆ ‘ದೊಡ್ಡ ಸಮಸ್ಯೆಗೆ, ಅಷ್ಟೇ ದೊಡ್ಡದಾದ ಪರಿಹಾರ ಹುಡುಕುವುದು ನಮ್ಮ ಮನಸ್ಥಿತಿ’. ಇಲ್ಲಿ ನಾವು ಎಡವಿದ್ದೇವೆ.

ಮುಖ ಕವಚ ಅಥವಾ ಮಾಸ್ಕ್ ಧರಿಸುವುದು ನಮ್ಮಲ್ಲಿರುವ ಸರಳ ಪರಿಹಾರ. ಗಂಡಸು, ಹೆಂಗಸು, ಮಕ್ಕಳು: ಪ್ರತಿಯೊಬ್ಬರು ಹೊರಗೆ ಬರುವಾಗ ಮಾಸ್ಕ್ ಹಾಕಿದರೆ, ಇದು ಲಾಕ್ ಡೌನ್ ಗೆ ಎರಡುಪಟ್ಟು ಹೆಚ್ಚು ಪರಿಣಾಮಕಾರಿ. ನಮ್ಮ ಲಾಕ್ ಡೌನ್ ಉಲ್ಲಂಘಿಸುವವರೇ ಹೆಚ್ಚು. ಅಂತಹ ಅರೆಬರೆ ಮಾತ್ರ ಜಾರಿಯಾಗುವ ಲಾಕ್ ಡೌನ್ ಗಿಂತ ಮಾಸ್ಕ್ ಧಾರಣೆ ಹೆಚ್ಚು ಫಲಿತ ಕೊಟ್ಟು ಸೊಂಕನ್ನು ಬೇಗ ಹತೋಟಿಗೆ ತರುತ್ತದೆ. ಲಾಕ್ ಡೌನ್ ನಾಶಮಾಡುವ ಸಾಮಾಜಿಕ ಮತ್ತು ಆರ್ಥಿಕ  ವ್ಯವಸ್ಥೆಯನ್ನೂ ಈ ಸರಳ ಪರಿಹಾರವಾದ ಮಾಸ್ಕ್ ಉಳಿಸುತ್ತದೆ. ಸರಳ ಪರಿಹಾರಗಳನ್ನು ನಾವು ಯಾವಾಗಲೂ ತಿರಸ್ಕರಿಸುತ್ತೇವೆ. ಕಾಲರಾ ರೋಗಕ್ಕೆ ಎಚ್.ಎನ್. ಚಟರ್ಜಿ ಪರಿಹಾರವಾದ ‘ಮೌಖಿಕ ಪುನರ್ಜಲೀಕರಣ’ ಅಥವಾ ‘ಓರಲ್ ರಿಹೈಡ್ರೇಷನ್’ 1957 ಇಸವಿಯಲ್ಲೇ ಗೊತ್ತಿದ್ದರೂ, ವೈದ್ಯರಿಗೂ, ನಿರ್ವಾಹಕರಿಗೂ, ಅದನ್ನು ಗುರುತಿಸಲು ದಶಕಗಳೇ ಬೇಕಾದವು. (ಹಿಂದೂ ದಿನಪತ್ರಿಕೆ, ಜೂನ್ 3, 2020).

ಈ ರೋಗದ ಬಗ್ಗೆ ಬಹಳ ವಿಷಯಗಳು ಈಗ ಗೊತ್ತಿರುವುದರಿಂದ, ನಮ್ಮ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಲು ಸಾಧ್ಯ.  ‘ಸಾಮಾಜಿಕ ಲಸಿಕೆ’ಗೆ ಸರಕಾರದ ಮಧ್ಯಸ್ಥಿಕೆ ಅವಶ್ಯ. ಇದನ್ನು ಎಲ್ಲರೂ ಸಾಮೂಹಿಕವಾಗಿ ಒತ್ತಾಯಿಸಿ ಪಡೆಯಬೇಕಾಗಿದೆ. ಸರಕಾರದ ಮೇಲೆ ಈ ಒತ್ತಾಯ ಹೇರದೆ, ವೈರಾಣುವನ್ನು ದೇವರ ಕೊಡುಗೆಯೆಂದಾಗಲೀ ಪ್ರಕೃತಿಯ ಪ್ರತೀಕಾರವೆಂದಾಗಲೀ ಭಾವಿಸಿ ಸುಮ್ಮನಿದ್ದರೆ, ಅದು ಬರೀ ಪಲಾಯನದ ದಾರಿಯಾಗುತ್ತದೆ. ಸರಕಾರ ಸಹ ‘ಲಸಿಕೆ ಸಿಗುವವರೆಗೂ ನಿಮ್ಮನ್ನು ನೀವು ಕ್ಷೇಮವಾಗಿರಿಸಿರಿ’ ಎಂದು ಹೇಳುವಲ್ಲಿ ಜವಾಬ್ದಾರಿಯನ್ನು ಪ್ರಜೆಗಳಿಗೆ ವರ್ಗಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *