ಸಾಲಿನಲ್ಲಿ ಕಾಯುತ್ತಾ

ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15 ವರೆಗೆ ಜನಶಕ್ತಿ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020  ಕೊರೊನಾ ಕಾಲದಲ್ಲಿ ಮತ್ತು ನಂತರ ಕುರಿತ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಆಯೋಜಿಸಲಾಗಿದ್ದಕೊರೊನಾ ಕಾಲದಲ್ಲಿ ಕಾಡಿದ ಕವನ, ಮೂಡಿದ ಕತೆ : ಯುವಜನರಿಗೆ ಕತೆ ಮತ್ತು ಕವನ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಕವಿತೆ.

ಪ್ರವೀಣ್ ಕುಮಾರ್ ಜಿ

ಹಾಲು ನೀರಾಯಿತು, ನೀರು ರಕ್ತವಾಗಿ
ರಕ್ತ ಮತ್ತೆ ನೀರಾಯಿತು, ಕಣ್ಣೀರಾಯಿತು…
ಅಮ್ಮನ ಎದೆ ಚೀಪುತ್ತಿರುವ ನನ್ನ ಬಾಯ ತುಂಬಾ ಈಗ ಕಣ್ಣೀರು..

ಏನೇನೋ ಮಾಡಿಕೊಂಡಿದ್ದರೂ ನಾನು ಹುಟ್ಟಿಕೊಂಡು ಬಿಟ್ಟೆನಂತೆ
‘ಗಟ್ಟಿಪಿಂಡ’ ಎಂದು ನಗುವಳು ಖುಷಿಯಲ್ಲಿ…
ಯಾರಾದರೂ ಎರಡನೇ ಸಲ ಬಂದಾಗ ಯೋಚಿಸುವಳಂತೆ
ಅವನೇ ಇರಬಹುದಾ ತನ್ನ ಕೂಸಿನ ಕಾರಣ ಎಂದು..

ಮನೆಯ ಹೊರಗೆ ಸಂತೋಷ ಹುಡುಕುವ ಗಂಡಸರಿಗೆ,
ಅಮ್ಮನೇ ಮೊದಲ ಮತ್ತು ಕೊನೆಯ ನಿಲ್ದಾಣ…
“ಇವತ್ತು ದುಡ್ಡಿಲ್ಲ” ಎಂದವರೊಂದಿಗೂ ಸುಮ್ಮನೇ ನಗುತ್ತಾ ಮಲಗಿದ್ದಿದೆ, ನಾಳೆಯ ಅನ್ನಕ್ಕಾಗಿ..
ಎಲ್ಲೇ ಇದ್ದರೂ ರಾತ್ರಿ ಮಗ್ಗುಲಿಗೆ ಬಂದು ಜೀವ ಹಿಂಡುತ್ತಿದ್ದ ಕೆಲವರು,
ನಾನೇನು ಹೊಸಬನಾ? ಮುಂದಿನ ಸಲ ಕೊಡುತ್ತೇನೆ ಎಂದು ಹೋದವರು, ಇಂದು ಹೊರಗೇ ಬರುತ್ತಿಲ್ಲ..
ಸಣ್ಣ ವೈರಸ್ಸು ಅಂಟಿಕೊಂಡಿದೆ ದೊಡ್ಡ ಜಗತ್ತಿಗೆ, ಜಗತ್ತಿಗೇ ಕಾಣುವಂತೆ..
ನಕ್ಕು ಬಿಡುವಳು ಅಮ್ಮ, “ಪಾಪ, ಹೆಂಡತಿ ಇರುವುದು ಈಗ ನೆನಪಾಗಿರಬೇಕು” ಎಂದುಕೊಂಡು…

ಹೊಟ್ಟೆಯ ಹಸಿವು ದೊಡ್ಡದು ಮೈಯ ಹಸಿವಿಗಿಂತಲೂ..
ಅದೇ ಅವಳನ್ನು ದಾರಿ ತಪ್ಪಿಸಿದ್ದು,
ಇವತ್ತು ಗಿರಾಕಿಗಳೇ ಬಾರದ ಬೀದಿಗೆ ಮತ್ತೆ ಅದೇ ತಂದು ನಿಲ್ಲಿಸಿದ್ದು..

ಕ್ಯಾಮರಾ ಹಿಡಿದೇ ಬರುತ್ತಿರುವ ಸಹಾಯದ ಕೈಗಳು ಸಾಯಿಸುತ್ತಿವೆ..
ಈ ವೈರಸ್ಸು ಹೋದ ಮೇಲೂ ನಾವು ಬದುಕಬೇಡವೇ?
ಭೂಮಿಗಿಂತಲೂ ಹೆಚ್ಚು ಕಾಲ ಬಾಳುತ್ತದೆ, ಅವರ ಮೆಮೋರಿ ಕಾರ್ಡು..
ಉಚಿತ ಆಹಾರ ವಿತರಣೆ, ಒಂದು ಫೋಟೋ ಇಲ್ಲವೇ ವೀಡಿಯೋ ಬೆಲೆಯಲ್ಲಿ!!!
ಹಸಿವಿನಿಂದಲ್ಲ ಇವರ ಶೋಕಿಯಿಂದಲೇ ತೀರಿ ಹೋಗಿ ಬಿಡುತ್ತೇವೆ ಇನ್ನೂ ಬೇಗ!
ಕಾಪಿಗೆ ಇಟ್ಟ ಮೆಮೋರಿ ಕಾರ್ಡು ಖಾಲಿಯಾಗುವವರೆಗೆ ನಮಗೆ ಊಟದ ಪೆÇಟ್ಟಣವಿಲ್ಲ..

ಸಾಲಿನ ಕೊನೆಯಲ್ಲಿರುವವಳು ಊಟ ಕೊಡುವವರನ್ನೂ, ಬಿಸಲನ್ನೂ,
ನನ್ನನ್ನೂ ನೋಡಿ ನಾನು ಹುಟ್ಟಬಾರದೆಂದು ತಿಂದಿದ್ದವನ್ನೆಲ್ಲಾ ನೆನಪಿಸಿಕೊಂಡು,
ಬೈದುಕೊಳ್ಳುತ್ತಾಳೆ ಅಮ್ಮ, ಮತ್ತೆ ಮತ್ತೆ..
ಕಣ್ಣೀರಾಗುತ್ತದೆ ಅವಳ ಎದೆಯ ಹಾಲು ಮತ್ತೆ ಮತ್ತೆ..

Donate Janashakthi Media

One thought on “ಸಾಲಿನಲ್ಲಿ ಕಾಯುತ್ತಾ

  1. ಕಾಪಿಗೆ ಇಟ್ಟ ಮೆಮೋರಿ ಕಾರ್ಡು ಖಾಲಿಯಾಗುವವರೆಗೆ ನಮಗೆ ಊಟದ ಪೆÇಟ್ಟಣವಿಲ್ಲ.

    ಅಯ್ಯೋ ಕಣ್ಣು ತೇವಗೊಂಡವು.

Leave a Reply

Your email address will not be published. Required fields are marked *