– ಆರ್.ಆರ್.ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬಿಜೆಪಿ ಅಡ್ಡಿ
ಬೆಂಗಳೂರು : ರಾಜಾರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆಯನ್ನು ವಿಧಾನಸಭೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸೋಲಿನ ಭೀತಿಯಿಂದಾಗಿ ಹರಾಶಗೊಂಡಿರುವ ಬಿಜೆಪಿ ಈ ರೀತಿ ವರ್ತಿಸುತ್ತಿದೆ. ಪ್ರಚಾರಕ್ಕೆ ಅಡ್ಡಪಡಿಸಿ ಗೂಂಡಾ ವರ್ತನೆ ತೋರಿದ ಬಿಜೆಪಿಯ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ. ವೆಂಜಟೇಶ್ ಮತ್ತವರ ಬೆಂಬಲಿಗರನ್ಬು ಕೂಡಲೇ ಬಂಧಿಸುವಂತೆ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. ವೆಂಕಟೇಶ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಯಶವಂತಪುರ ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸುತ್ತಿದ್ದಾರೆ.
ಯಶವಂತಪುರ ವಾರ್ಡ್ ನ ಬಿ.ಕೆ. ನಗರದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದಾಗ ಅಲ್ಲಿಗೆ ಬಂದ ವೆಂಕಟೇಶ್ ಮತ್ತವರ ಬೆಂಬಲಿಗರು ಪ್ರಚಾರಕ್ಕೆ ಅಡ್ಡಿಯುಂಟು ಮಾಡಿದರು. ಪ್ರಚಾರದ ವಾಹನ ಮುಂದಕ್ಕೆ ಹೋಗದಂತೆ ತಡೆದರು. ಹಿಂದಕ್ಕೆ ಹೋಗಲು ಒಪ್ಪದ ಸಿದ್ದರಾಮಯ್ಯ ಅವರು, ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಕರೆ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಚದುರಿಸಿದರು.
ಬಿಜೆಪಿಯ ಇಂಥ ಗೂಂಡಾ ವರ್ತನೆಗೆ ಕಾಂಗ್ರೆಸ್ ಬಗ್ಗುವುದಿಲ್ಲ. ಇಂಥ ಘಟನೆ ಮರುಕಳಿಸಿದರೆ ಬಿಜೆಪಿಯವರ ಪ್ರಚಾರ ಸಭೆಗಳಿಗೆ ನಾವೂ ಅಡ್ಡಿ ಉಂಟು ಮಾಡಬೇಕಾಗುತ್ತದೆ. ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕು. ಮುನಿರತ್ನ ಅವರ ಗೂಂಡಾಗಿರಿಗೆ ಮತದಾರರು ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.