ಬೆಂಗಳೂರು : ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲನೂರು ಎಸ್ ಲೇಪಾಕ್ಷ ಅವರನ್ನು ಬಿಜೆಪಿ ತನ್ನ ಪ್ರಾಥಮಿಕ ಸದಸ್ಯತ್ವದಿಂ ವಜಾ ಮಾಡಿದೆ.
2018ರಲ್ಲಿ ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ವೈ.ಎ ನಾರಾಯಣಸ್ವಾಮಿ ಗೆ ಹಾಲನೂರು ಎಸ್ ಲೇಪಾಕ್ಷ ಬಿಟ್ಟುಕೊಟ್ಟಿದ್ದರು. ಈ ಸಂದರ್ಭದಲ್ಲಿ ಪದವೀಧರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇದೀಗ ಟಿಕೆಟ್ ಬೇರೆಯವರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲನೂರು ಎಸ್ ಲೇಪಾಕ್ಷ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ್ದರು.ಅಲ್ಲದೆ ನಿನ್ನೆಯಷ್ಟೇ ಸುದ್ದಿಗೋಷ್ಟಿ ನಡೆಸಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಸ್ವಜಾತಿ ಪ್ರೇಮದಿಂದಾಗಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಒತ್ತಾಯದ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಹಾಲನೂರು ಎಸ್.ಲೇಪಾಕ್ಷ ಹೇಳಿದ್ದರು.
ಹಾಲನೂರು ಎಸ್ ಲೇಪಾಕ್ಷ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಪಕ್ಷಕ್ಕೆ ಮುಜುಗರ ತರುವ ಕೆಲಸವಾಗಿದೆ.ಆದ್ದರಿಂದ ಹಾಲನೂರು ಎಸ್ ಲೇಪಾಕ್ಷ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮೋಸದಿಂದ ಟಿಕೆಟ್ ತಪ್ಪಿಸಿ, ಈಗ ಉಚ್ಚಾಟಿಸುವ ಮೂಲಕ ದ್ರೋಹ ಮಾಡಿದ್ದಾರೆ, ಬಂಡಾಯದ ಬಿಸಿ ವಿಧಾನಪರಿಷತ್ ನಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ ಎಂದು ಲೇಪಾಕ್ಷ ಬೆಂಬಲಿಗರು ತಿಳಿಸಿದ್ದಾರೆ.