ಅತ್ಯಾಚಾರಿಗಳ ರಕ್ಷಣೆಗೆ ನಿಂತ ಯೋಗಿ ಸರ್ಕಾರ

ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆಗೆ ವಿವಿಧ ಜನಸಮೂಹಗಳಿಂದ ವ್ಯಕ್ತವಾದ ತೀವ್ರ ಆಕ್ರೋಶದಿಂದ ಪಾರಾಗಲು ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಪೊಲೀಸರು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇದೊಂದು ಅಂತರಾಷ್ಟ್ರೀಯ ಫಿತೂರಿಯ ಭಾಗವಾಗಿದೆ ಎಂದೂ, ರಾಜ್ಯದಲ್ಲಿ ಜಾತಿ ಗಲಭೆಯನ್ನು ಪ್ರಚೋದಿಸಿ ತಮ್ಮ ಸರ್ಕಾರಕ್ಕೆ ಮಸಿಬಳಿಯುವ ಪ್ರಯತ್ನವಾಗಿದೆ ಎಂದು ಹೇಳತೊಡಗಿದ್ದಾರೆ. ದುರ್ಬಲ ವರ್ಗಕ್ಕೆ ಸೇರಿದ ಯುವತಿಯೊಬ್ಬಳ ಮೇಲೆ ತನ್ನ ಆಡಳಿತವಿರುವ ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರ ನಡೆದು, ಅವಳನ್ನು ಅಮಾನುಷವಾಗಿ ಕೊಲೆಮಾಡಿ, ಪೊಲೀಸರ ಮೂಲಕ ಶವಸಂಸ್ಕಾರವನ್ನು ರಾತ್ರೋರಾತ್ರಿ ಮುಗಿಸಿ ಯೋಗಿ ಸರ್ಕಾರ ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವುದು ದೇಶವೇ ವಿಶ್ವದ ಮುಂದೆ ತಲೆತಗ್ಗಿಸುವ ವಿಷಯವಾಗಿದೆ.

ದೇಶದಲ್ಲಿ ಅತಿ ಹೆಚ್ಚು ಮಹಿಳಾ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವ ಮೂರು ಮುಖ್ಯ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಮಹಿಳೆಯರು ಅತಿ ಹೆಚ್ಚು ಹಿಂಸೆಗೆ ಒಳಪಡುತ್ತಿರುವ ರಾಜ್ಯಗಳು ಉತ್ತರ ಪ್ರದೇಶ, ರಾಜಾಸ್ತಾನ ಮತ್ತು ಮಧ್ಯಪ್ರದೇಶ; ಮೂರೂ ಬಿಜೆಪಿ ಆಡಳಿತ ವಿರುವ ರಾಜ್ಯಗಳು. ಇಲ್ಲೊಬ್ಬ ಕಾವಿಧಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಗದ್ದುಗೆಯನ್ನು ಹತ್ತಿ ಕುಳಿತಿದ್ದಾನೆ. ರಾಜ್ಯದಲ್ಲಿ ದಲಿತರಿಗೆ ಮತ್ತು ದಲಿತ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ತಾನು ವಿಫಲನಾಗಿದ್ದೇನೆ ಎಂದು ಒಪ್ಪಿಕೊಳ್ಳುವ ಬದಲು ಅತ್ಯಾಚಾರಿ ನರರಾಕ್ಷಕರ ರಕ್ಷಣೆಗೆ ನಿಂತಿದ್ದಾರೆ.

ನಾಲ್ಕು ಜನ ಮೇಲ್ಜಾತಿ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಲ್ಲದೆ ಅವಳ ಬೆನ್ನು ಮೂಳೆ, ಎರಡು ಕಾಲು ಮತ್ತು ಒಂದು ತೋಳಿನ ಮೂಳೆಗಳನ್ನು ಅಮಾನುಷವಾಗಿ ಹಲ್ಲೆ ಮಾಡಿ ಮುರಿದುಹಾಕಿದ್ದಾರೆ. ನಾಲಿಗೆಯನ್ನು ತುಂಡರಿಸಿದ್ದಾರೆ. ಮೃತಪಟ್ಟ ಯುವತಿಯ ಕುಟುಂಬದವರಿಗೂ ಮೃತಳ ಅಂತಿಮ ದರ್ಶನಕ್ಕೂ ಅವಕಾಶ ಕೊಡದೆ ರಾತ್ರೋ ರಾತ್ರಿ ಪೊಲೀಸರೇ ಮೃತ ದೇಹವನ್ನು ದಹಿಸಿದ್ದಾರೆ. ಜನತೆ ಪಕ್ಷಾತೀತವಾಗಿ ಈ ಕ್ರೂರ ಕ್ರಿಮಿನಲ್ ಕೃತ್ಯವನ್ನು ಪ್ರತಿಭಟಿಸಲು ಬೀದಿಗಿಳಿದಾಗ ಮುಖ್ಯ ಮಂತ್ರಿ ಯೋಗಿ ತನ್ನ ಸರ್ಕಾರದ ಪ್ರಗತಿಯನ್ನು ಸಹಿಸದ ಶಕ್ತಿಗಳು ಅಪಪ್ರಚಾರದಲ್ಲಿ ತೊಡಗಿವೆ ಎಂದು ಹೇಳಿಕೆ ನೀಡಿದ ಮರುದಿನವೇ ಪೊಲೀಸರು ಅತ್ಯಾಚಾರವೇ ನಡೆದಿಲ್ಲ ಎಂದು ಹೇಳಿಕೆ ನೀಡಿದರು ಮಾತ್ರವಲ್ಲ ಪ್ರತಿಭಟನಾಕಾರರ ಮೇಲೆ ದೇಶದ್ರೋಹ, ಒಳಸಂಚು, ಕೋಮು ದ್ವೇಷಕ್ಕೆ ಉತ್ತೇಜನ ಮುಂತಾದ ಸೆಕ್ಷನ್‍ಗಳಡಿಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ.

ದಲಿತರಿಗೆ ಮತ್ತು ದಲಿತ ಹೆಣ್ಣು ಮಕ್ಕಳಿಗೆ ಉತ್ತರ ಪ್ರದೇಶದಲ್ಲಿ ರಕ್ಷಣೆಯಿಲ್ಲ ಎನ್ನುವ ಭಾವನೆ ಬಲಪಡಿಸುವಂತಹ ವಿದ್ಯಮಾನಗಳು ಇಲ್ಲಿ ಮತ್ತೆ ಮತ್ತೆ ಜರಗುತ್ತಿವೆ. ಯೋಗಿ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಮೇಲಿನ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚುತ್ತಿವೆ. ಹತ್ರಾಸ್ ಪ್ರಕರಣವನ್ನು ಖಂಡಿಸದೆ ಇರುವ ಪ್ರಧಾನಿ ಮೋದಿಗೂ ದೇಶವನ್ನು ಆಳುವ ಹಕ್ಕಿಲ್ಲ. ಅಯೊಧ್ಯೆಯಲ್ಲಿ ರಾಮನಿಗೆ ದೇವಸ್ಥಾನ ಕಟ್ಟುವುದು ಅವರಿಗೆ ಆದ್ಯತೆಯಾಗಿದೆ. ದಲಿತರಿಗೆ ರಕ್ಷಣೆ ಒದಗಿಸುವುದು ಇವರಿಗೆ ಮುಖ್ಯವಲ್ಲ. ದೌರ್ಜನ್ಯಕ್ಕೊಳಗಾಗಿ ಸಾಯುವ ಅಸಹಾಯಕರ, ಅಮಾಯಕರ ಕಾಳಜಿ ಇವರಿಗಿಲ್ಲ. ಮಸೀದಿ ಧ್ವಂಸಗೊಳಿಸಿದವರಿಗೆ ರಕ್ಷಣೆ ಕೊಟ್ಟಂತೆ ಇವರು ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಾರೆ.

ಮೋದಿಯವರ ಆಳ್ವಿಕೆಯಲ್ಲಿ ದಲಿತರ ಮೇಲೆ ನಡೆದ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪಾಳೆಗಾರಿ ಬಂಡವಾಳಗಾರರ ಬಲವರ್ಧನೆಯೇ ಈ ಅಮಾನವೀಯ ಬೆಳವಣಿಗೆಗೆ ಕಾರಣ. ಅವರ ಆರ್ಥಿಕ ಬಲಹೀನತೆ ಅವರನ್ನು ಹೆಚ್ಚೆಚ್ಚು ದಮನಕ್ಕೆ ಒಳಪಡಿಸುತ್ತದೆ. ಮೇಲ್ಜಾತಿ ಸವರ್ಣಿಯರು ಎಂದು ಅಹಂಕಾರದಿಂದ ಮೆರೆಯುವವರು ತಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಜಾತಿ ಪದ್ಧತಿ ನಾಶವಾಗಬೇಕು. ಜಾತಿ ಅಸ್ಪøಶ್ಯತೆ ತೊಲಗಬೇಕು. ದಲಿತರಲ್ಲಿ ಬೆಳೆಯುತ್ತಿರುವ ಪರಕೀಯ ಭಾವನೆ ಅಳಿಯಬೇಕು. ಮಾನವರೆಲ್ಲರೂ ಸಮಾನರು. ಅವರೆಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇ ಆಗಿರುತ್ತದೆ. ಜಾತಿ ರಹಿತವಾದ, ಜಾತಿ ಬೇದ ಮುಕ್ತವಾದ ಸಮಾಜಕ್ಕೆ ಶ್ರಮಿಸೋಣ. ನಮ್ಮ ದಲಿತ ಹೆಣ್ಣು ಮಕ್ಕಳು ನಮ್ಮ ಸ್ವಂತ ಅಕ್ಕತಂಗಿಯರು. ಅವರ ಮೇಲೆ ಪುರುಷರ ದೌರ್ಜನ್ಯವನ್ನು ತಡೆಯೋಣ. ಮೋದಿ-ಯೋಗಿ ಅಂತವರ ದುರಾಡಳಿತ ಕೊನೆಗಾಣಿಸೋಣ.

Donate Janashakthi Media

Leave a Reply

Your email address will not be published. Required fields are marked *