ಬೆಂಗಳೂರು : ಎಪಿಎಂಸಿ ಹಮಾಲಿ ಕಾರ್ಮಿಕರ ಮುಷ್ಕರ ನಡೆಸಿದ ಹಿನ್ನಲೆ ಸೆಪ್ಟೆಂಬರ್ 23-24 ರಂದು ರಾಜ್ಯದಲ್ಲಿ ಮಾರುಕಟ್ಟೆ ಗಳನ್ನು ಬಂದ್ ಹೋರಾಟದ ಪರಿಣಾಮವಾಗಿ ಕೃಷಿ ಮಾರಾಟ ಇಲಾಖೆ ಮಾನ್ಯ ನಿರ್ದೇಶಕರಾದ ಶ್ರೀ ಕರೀಗೌಡ ಐಎಎಸ್ ರವರು ಬುಧವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸಂಬಂಧಿಸಿದ ಇಲಾಖಾ ಹೆಚ್ಚುವರಿ ನಿರ್ದೇಶಕ ರು ಮತ್ತು ಸಿಬ್ಬಂದಿ ಮತ್ತು ಕರ್ನಾಟಕ ರಾಜ್ಯ ಹಮಾಲಿ ಫೆಡರೇಶನ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಹಮಾಲಿ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಿದ್ದಾರೆ.
ಈ ಸಭೆಯಲ್ಲಿ ಹಲವಾರು ಮಾರುಕಟ್ಟೆಗಳಲ್ಲಿ ಹಮಾಲಿ ಕಾರ್ಮಿಕರ ವಸತಿ ಯೋಜನೆಗಾಗಿ ಜಾಗವನ್ನು ಕಾಯ್ದಿರಿಸಲಾಗಿದೆ. ವಸತಿ ಯೋಜನೆ ಜಾರಿಗಾಗಿ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ರಾಜ್ಯ ಬಜೆಟ್ ನಲ್ಲಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದೆಂದು ನಿರ್ದೇಶಕರು ಸಭೆಯಲ್ಲಿ ತಿಳಿಸಿದರು. ಎಪಿಎಂಸಿಯಲ್ಲಿ ಜಾರಿಯಲ್ಲಿರುವ ಕಾಯಕ ನಿಧಿ ಅಡಿಯಲ್ಲಿ ವೈಧ್ಯಕೀಯ ಚಿಕಿತ್ಸೆ ಮರು ಪಾವತಿ ಸಮರ್ಪಕವಾಗಿ ಜಾರಿಮಾಡಲು ಫೆಡರೇಶನ್ ಸೂಚಿಸಿದ ನಿಯಮಾವಳಿಗಳಿಗೆ ಕೆಲ ತಿದ್ದುಪಡಿಗಳನ್ನು ಮಾಡಲು ಪರಿಶೀಲಿಸಲು ಸೂಚಿಸಲಾಯಿತು.
ವಿಮಾ ಸೌಲಭ್ಯ ಕಳೆದ ಎರಡು ವರ್ಷಗಳಿಂದ ರದ್ದಾಗಿರುವ ಆಮ್ ಆದ್ಮಿ ಭೀಮಾ ಯೋಜನೆಯ ಬದಲಾಗಿ ಇಲಾಖೆ ಮತ್ತು ಹಮಾಲಿ ಕಾರ್ಮಿಕರ ವಂತಿಗೆಯೊಂದಿಗೆ ಗುಂಪು ವಿಮಾ ಯೋಜನೆ (LIC ಮುಖಾಂತರ) ಜಾರಿಮಾಡಲು ತೀರ್ಮಾನಿಸಲಾಗಿದ್ದು ಸಧ್ಯದಲ್ಲಿಯೇ ನಡೆಯುವ ಕೃಷಿ ಮಾರಾಟ ಮಂಡಳಿಯಲ್ಲಿ ಅಂತಿಮಗೊಳಿಸಲಾವುದು ಎಂದು ಸ್ಪಷ್ಟ ಭರವಸೆ ನೀಡಿದರು.
ಮರಣ ಪರಿಹಾರ ಕಳೆದ ಎರಡು ವರ್ಷಗಳಲ್ಲಿ ಆಮ್ ಆದ್ಮಿ ಭೀಮಾ ಯೋಜನೆಯಡಿ ಸಲ್ಲಿಸಿದ್ದ 250 ರಷ್ಟು ಮರಣ ಪರಿಹಾರಗಳ ಅರ್ಜಿಗಳು ವಿಮಾ ಯೋಜನೆ ಜಾರಿಯಲ್ಲಿ ಇಲ್ಲದೆ ಇರುವುದರಿಂದ ನೆನಗುದಿಗೆ ಬಿದ್ದಿದ್ದು ಮೃತರಾದವರ ಕುಟುಂಬದವರಿಗೆ ಕನಿಷ್ಟ ರೂ. 30,000 ಮರಣ ಪರಿಹಾರವನ್ನು ಇಲಾಖೆಯಿಂದ ಕೊಡಲು ಕ್ರಮವಹಿಸುವ ಭರವಸೆ ನೀಡಲಾಯಿತು.
ನಿವೃತ್ತಿ ಪರಿಹಾರ ಹಮಾಲಿ ಕಾರ್ಮಿಕರಿಗೆ 60 ವರ್ಷ ಆದನಂತರ ಲೈಸನ್ಸ್ ಮತ್ತು ವಿಮೆ ರದ್ದು ಮಾಡುವವುದರಿಂದ ಅವರಿಗೆ ಗ್ರ್ಯಾಚೂಟಿ ರೂಪದಲ್ಲಿ ಕನಿಷ್ಟ ರೂ. 50 ಸಾವಿರ ನೀಡಬೇಕೆಂಬ ಫೆಡರೇಶನ್ ಮನವಿಗೆ ಸ್ಪಂದಿಸಿದ ನಿರ್ದೇಶಕರು ಸಚಿವರು ಮತ್ತು ಮಂಡಳಿಯಲ್ಲಿ ಚರ್ಚಿಸಿ ಯೋಜನೆ ರೂಪಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು.
ಸ್ಕಾಲರ್ ಶಿಫ್ ಹಿಂದಿನಂತೆ ಹಮಾಲಿ ಕಾರ್ಮಿಕರ ಮಕ್ಕಳಿಗೆ ನಿಂತು ಹೋಗಿರುವ ವಿದ್ಯಾರ್ಥಿ ವೇತನ ಮತ್ತೆ ಆರಂಭ ಮಾಡಬೇಕು ಕಾಯಕನಿಧಿ ಅಡಿಯಲ್ಲಿ ವಿದ್ಯಾರ್ಥಿ ವೇತನ ನೀಡಬೇಕು ಎನ್ನುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ನಿರ್ದೇಶಕರು ಭರವಸೆ ನೀಡಿದ್ದಾರೆ ಎಂದು ಪೇಡರೇಶನ್ ಮುಖಂಡರು ತಿಳಿಸಿದ್ದಾರೆ.
ನಿರ್ದೇಶಕರು ಮತ್ತು ಹೆಚ್ಚುವರಿ ನಿರ್ದೇಶಕರೊಂದಿಗೆ ನಡೆದ ಮಾತುಕತೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ ಕೆ.ಮಹಾಂತೇಶ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ್ ಉಪಾಧ್ಯಕ್ಷರಾದ ಗುರುಸಿದ್ದಪ್ಪ ಭಾಗವಹಿಸಿದ್ದರು.